ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ವರದಿ: ಮಧುರಾಮ್ |
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿವಮೊಗ್ಗ, ಕಾನೂನು ಸೇವಾ ಪ್ರಾಧಿಕಾರ, (Shivamogga) ಶಿವಮೊಗ್ಗ ಜಿಲ್ಲೆ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ (World Senior Citizens’ Day Celebration) ಕಾರ್ಯಕ್ರಮದಲ್ಲೇ ಸಮಯಪಾಲನೆ ಹಾಗೂ ಜವಾಬ್ದಾರಿತನದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗದೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಬಹಳ ಹೊತ್ತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಬಾಡಿ ಬಿಲ್ಡರ್ ರಘು ರಾಮಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಂದ ಮಾತ್ರವಲ್ಲದೆ ನೂರಾರು ಕಿಲೋಮೀಟರ್ ದೂರದಿಂದಲೂ ಹಿರಿಯ ನಾಗರಿಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವಯೋಸಹಜ ಸಮಸ್ಯೆಗಳ ಜತೆಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಹಿರಿಯರು ಹಾಗೂ ವಿಕಲಚೇತನರು ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ, ಕಾರ್ಯಕ್ರಮ ವಿಳಂಬವಾಗಿ ಆರಂಭವಾಗಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.
Shivamogga: ಸಮಯಕ್ಕೆ ಬಾರದ ಜನಪ್ರತಿನಿಧಿಗಳು
ಸ್ಥಳೀಯ ಶಾಸಕ ಚನ್ನಬಸಪ್ಪ ಅವರು ತಡವಾಗಿ ಆಗಮಿಸಿದರು. ಅವರನ್ನು ಹೊರತುಪಡಿಸಿ ಯಾವ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂದು ರಘು ರಾಮಪ್ಪ ಅವರು ವಿಡಿಯೋದಲ್ಲಿ ಆಕ್ಷೇಪಿಸಿದ್ದಾರೆ.
ಹಿರಿಯರು ಹಾಗೂ ವಿಕಲಚೇತನರಿಗಾಗಿ ಕಾರ್ಯಕ್ರಮ ಆಯೋಜಿಸಿ, ಅವರ ಸಮಯ ಮತ್ತು ಆರೋಗ್ಯವನ್ನು ಕಡೆಗಣಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
Also Read>> ಶಿವಮೊಗ್ಗ, 5 ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ, ಏನಿದು ಪ್ರಕರಣ?
ಸರ್ಕಾರಿ ಅನುದಾನದಲ್ಲಿ ಕಾರ್ಯಕ್ರಮ ಆಯೋಜಿಸುವುದಷ್ಟೇ ಮುಖ್ಯವಲ್ಲ. ಕಾರ್ಯಕ್ರಮದ ಉದ್ದೇಶ ಈಡೇರಿಸುವ ರೀತಿಯಲ್ಲಿ ವ್ಯವಸ್ಥೆ ಮಾಡುವುದು ಹಾಗೂ ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭಿಸುವುದು ಆಯೋಜಕರು ಮತ್ತು ಭಾಗವಹಿಸುವ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ದೂರದ ಊರುಗಳಿಂದ ಆಗಮಿಸುವಾಗ ಅವರ ಸಮಯ, ವಯಸ್ಸು ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಬೇಕಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮಯಪಾಲನೆ ಕುರಿತು ಇಂತಹ ಸಂದರ್ಭದಲ್ಲಿ ಪ್ರಶ್ನೆ ಮೂಡುವುದು ಸಹಜ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿರಿಯ ನಾಗರಿಕರ ದಿನಾಚರಣೆಯಂದೇ ಹಿರಿಯರು ಹಾಗೂ ವಿಕಲಚೇತನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಕಾರಣವೇನು? ಬೆಳಿಗ್ಗೆ 9.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಸಮಯಕ್ಕೆ ಆರಂಭವಾಗದಿರುವುದಕ್ಕೆ ಕಾರಣವೇನು? ಸಾರ್ವಜನಿಕರಿಗಾಗಿ ಆಯೋಜಿಸುವ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಯಕ್ಕೆ ಹಾಜರಾಗುವುದು ಅವರ ಜವಾಬ್ದಾರಿಯಲ್ಲವೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಎಂದು ರಘು ರಾಮಪ್ಪ ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









