ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧ್ಯಭಾಗ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯಲ್ಲಿ #Metro Hospital ರೋಗಿ ಒಬ್ಬರ ಹೃದಯಕ್ಕೆ ‘ಆರ್‌ಬೈಟಲ್ ಅಥೆರೆಕ್ಟಮಿ’ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಮೆಟ್ರೋ ಆಸ್ಪತ್ರೆಯ ಅಧ್ಯಕ್ಷ ಡಾ. ಪಿ.ಲಕ್ಷ್ಮಿನಾರಾಯಣ ಆಚಾರ್ ತಿಳಿಸಿದರು.
ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಆಸ್ಪತ್ರೆಯಲ್ಲಿ ‘ಆರ್‌ಬೈಟಲ್ ಅಥೆರೆಕ್ಟಮಿ’ ಚಿಕಿತ್ಸೆಗೆ ಒಳಗಾದ ಶಿವಮೊಗ್ಗ ನಗರದ 76 ವರ್ಷದ ಚಂದ್ರಪ್ಪ ಶೆಟ್ಟಿ ಅವರಿಗೆ ಆಸ್ಪತ್ರೆಯ ಹೃದಯರೋಗ ತಜ್ಞರಾದ ಡಾ. ಶಿವಶಂಕರ್ ಟಿ.ಹೆಚ್. ನೇತೃತ್ವದ ತಂಡ ಯಶಸ್ವಿಯಾಗಿ ಚಿಕಿತ್ಸೆಯನ್ನು ನಡೆಸಿದೆ ಎಂದರು.
ಮೆಟ್ರೋ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಶಿವಶಂಕರ್ ಮಾತನಾಡಿ, ಹೃದಯದ ರಕ್ತನಾಳದಲ್ಲಿ ತುಂಬ ಕ್ಯಾಲ್ಸಿಯಮ್ ಇದ್ದರೆ ಈ ಹಿಂದೆ ಓಪನ್ ಹಾರ್ಟ್ ಸರ್ಜರಿ ಮಾಡುತ್ತಿದ್ದೆವು. ಈಗ ರಕ್ತನಾಳದ ಕ್ಯಾಲ್ಸಿಯಮ್ ಅನ್ನು ಪುಡಿ ಪುಡಿ ಮಾಡಿ ಸ್ಟಂಟ್ ಹಾಕುವ ವಿಧಾನವಾಗಿದೆ. ಈ ವಿಧಾನದಿಂದ ರಕ್ತನಾಳಕ್ಕೆ ಅಪಾಯ ಕಡಿಮೆ. ‘ಆರ್‌ಬೈಟಲ್ ಅಥೆರೆಕ್ಟಮಿ’ ಡೈಮಂಡ್ ಬ್ಲಾಕ್ 360 ಸಾಧನವನ್ನು ಉಪಯೋಗಿಸಿ ರಕ್ತನಾಳದಲ್ಲಿರುವ ಕ್ಯಾಲ್ಸಿಯಮ್ ಫ್ಯಾಟ್ ತೆಗೆದು ರಕ್ತನಾಳವನ್ನು ಶುದ್ದೀಕರಿಸಲಾಯಿತು, ನಂತರ ಸ್ಟೆಂಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.
Also read: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ | ಸಂಸದ ರಾಘವೇಂದ್ರ ಪ್ರತಿಕ್ರಿಯೆ ಹೀಗಿದೆ
ಹೃದಯಕ್ಕೆ ‘ಆರ್‌ಬೈಟಲ್ ಅಥೆರೆಕ್ಟಮಿ’ ಚಿಕಿತ್ಸೆಯನ್ನು ಮಾಡಲು ಡೈಮಂಡ್ ಬ್ಲಾಕ್ 360 ಸಾಧನಕ್ಕೆ ಸುಮಾರು 2 ಲಕ್ಷ ವೆಚ್ಚ ಆಗುತ್ತದೆ. ಸಾಮಾನ್ಯವಾಗಿ ಎಂಜಿಯೋ ಪ್ಲಾಸ್ಟಿ ಚಿಕಿತ್ಸೆ ಮಾಡುವುದಕ್ಕಿಂತ ಸುಮಾರು 1 ಗಂಟೆ ಹೆಚ್ಚಾಗಬಹುದು. ಇದರಿಂದ ರೋಗಿಗೆ ಯಾವುದೇ ತೊಂದರೆಯಾಗುವುದಿಲ್ಲ. ಶಸ್ತ್ರ ಚಿಕಿತ್ಸೆ ಆದ ನಂತರ 3 ದಿನದಲ್ಲಿ ರೋಗಿಯನ್ನು ಮನೆಗೆ ಕಳುಹಿಸಲಾಗುತ್ತದೆ ಎಂದರು.
ಆರ್‌ಬೈಟಲ್ ಅಥೆರೆಕ್ಟಮಿ ಚಿಕಿತ್ಸೆಯಿಂದ ಗುಣಮುಖರಾದ ನಿವೃತ್ತ ಪ್ರಾಂಶುಪಾಲ ಚಂದ್ರಪ್ಪ ಶೆಟ್ಟಿ ಮಾತನಾಡಿ, ಮೆಟ್ರೋ ಆಸ್ಪತ್ರೆಯಲ್ಲಿ ಸುಮಾರು 6 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಡಾ. ಶಿವಶಂಕರ್ ಅವರು ಭರವಸೆ ನೀಡಿ ಸೆ.28 ರಂದು ಬೆಂಗಳೂರಿನಿಂದ ತಜ್ಞರನ್ನು ಕರೆಸಿ ಯಾವುದೇ ರೀತಿಯ ತೊಂದರೆ ಆಗದಂತೆ ಮಾಡಿದ್ದಾರೆ. ಹೆಚ್ಚು ನಿಗಾ ವಹಿಸಿ ಸತತವಾಗಿ ಎರಡು ಮುಕ್ಕಾಲು ಗಂಟೆ ಚಿಕಿತ್ಸೆ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ತೇಜಸ್ವಿ.ಟಿ.ಎಸ್, ಡಾ. ಪ್ರವೀಣ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post