ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಆ.5 ಮತ್ತು 6ರಂದು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಿವಮೊಗ್ಗ ಓಪನ್ ನಾಲ್ಕನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರಾಜ್ಯ ಕರಾಟೆ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ತಿಳಿಸಿದರು.
ಅವರು ಇಂದು ಮಥುರಾ ಪ್ಯಾರಾಡೈಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಕಳೆದ 20 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುವುದರ ಜೊತೆಗೆ ಮಹಿಳೆಯರಿಗೆ ಸ್ವರಕ್ಷಣಾ ತರಬೇತಿ ನೀಡಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾಗಿದ್ದಾರೆ ಎಂದರು.
ನಮ್ಮ ಸಂಸ್ಥೆ ಶಿವಮೊಗ್ಗದಲ್ಲಿ 18 ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇದು ರಾಜ್ಯದಲ್ಲೇ ಅತಿಹೆಚ್ಚು ಪಂದ್ಯಾವಳಿ ನಡೆದಿರುವ ಜಿಲ್ಲೆಯಾಗಿದೆ. 2022ರಲ್ಲಿ ಶಿವಮೊಗ್ಗದಲ್ಲಿ ಆಯೋಜನೆಗೊಂಡ ಶಿವಮೊಗ್ಗ ಓಪನ್‍ನ ಮೂರು ಪಂದ್ಯಾವಳಿಗಳಿಂದ ಇಡೀ ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆಯುವುದರ ಜೊತೆಗೆ ವಿದೇಶಗಳಲ್ಲೂ ಕ್ರೀಡಾಕೂಟದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
Also read: ಭೂತದೊಂದಿಗೆ ಮಲೆನಾಡ ಹುಡುಗನ ಪಯಣ: ನಮಸ್ತೆ ಗೋಸ್ಟ್’ನಲ್ಲಿ ‘ಶಿವಮೊಗ್ಗ ಹರೀಶ್’
ಆ.5 ಮತ್ತು 6ರಂದು ಶಿವಮೊಗ್ಗದಲ್ಲಿ ಆಯೋಜಿಸಿರುವ ನಾಲ್ಕನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಈ ಪಂದ್ಯಾವಳಿಯಲ್ಲಿ ಅಮೆರಿಕಾ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಮಲೇಶಿಯಾದಿಂದಲೂ ಕ್ರೀಡಾಪಟುಗಳು ಆಗಮಿಸಲಿದ್ದು, ದೇಶದ 14 ರಾಜ್ಯಗಳಿಂದ ಸುಮಾರು 2ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಪಂದ್ಯಾವಳಿಯಲ್ಲಿ 7ರಿಂದ 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಕಟಾ, ಕುಮಟಿ ವಿಭಾಗದಲ್ಲಿ ಪಂದ್ಯ ನಡೆಯಲಿದೆ. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಿಂದ 300ಕ್ಕೂ ಹೆಚ್ಚು ಸ್ಥಳೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ, ಬಾಲರಾಜ್, ಪಂಚಪ್ಪ, ಮಂಜುಳಾ, ನವೀನ್, ಹರ್ಷಿತ್, ಅನೂಪ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post