ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕೋಟೆ ರಸ್ತೆ ಶ್ರೀ ಭೀಮೇಶ್ವರ ದೇವಾಲಯ ಆವರಣದಲ್ಲಿ ಹಿಂದೂ ಸಂಘಟನಾ ಮಹಾ ಮಂಡಳಿ ವತಿಯಿಂದ ಪ್ರತಿಷ್ಠಾಪನೆಗೊಂಡಿದ್ದ ಹಿಂದೂ ಮಹಾಸಭಾ ಗಣಪತಿಯ Shivamogga Hindu Mahasabha Ganapathi ವಿಸರ್ಜನಾ ಪೂರ್ವ ಮೆರವಣಿಗೆ ಆರಂಭಗೊಂಡಿದ್ದು, ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳು ಭಗವಾಧ್ವಜ-ಕೇಸರಿ ಬಂಟಿಂಗ್ಸ್ ಗಳಿಂದ ಅಲಂಕೃತಗೊಂಡಿದ್ದು, ಅದ್ಧೂರಿ ರಾಜಬೀದಿ ಉತ್ಸವವನ್ನು ಕಣ್ತುಂಬಿಕೊಳ್ಳಲು ನಗರದ ಜನತೆ ಸಂಭ್ರಮ-ಕಾತರದಿಂದ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮೆರವಣಿಗೆ ಆರಂಭದಿಂದಲೇ ಯುವಕರು ಉತ್ಸಾಹದಿಂದ ಕುಣಿಯುತ್ತಿದ್ದು, ಅವರ ಸಂಭ್ರಮವನ್ನು ಇಮ್ಮಡಿಗೊಳಿಸಲು ಡೊಳ್ಳು, ಜಾನಪದ ನೃತ್ಯ ಕಲಾ ತಂಡಗಳು ಸಾಥ್ ನೀಡಿದೆ.
ಮೆರವಣಿಗೆ ಸಾಗುವ ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಪಾನಕ-ಕೋಸಂಬರಿ, ಪುಳಿಯೊಗರೆ, ಚಿತ್ರಾನ್ನ ವಿತರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗೂ ಗಣೇಶನಿಗೆ ದೊಡ್ಡ ದೊಡ್ಡ ಗಾತ್ರದ ಪುಷ್ಪಮಾಲೆ ಅರ್ಪಿಸುತ್ತಿದ್ದ ಭಕ್ತರು. ಕುಣಿದು ಕುಪ್ಪಳಿಸುತ್ತಿರುವ ಯುವಜನತೆ, ಹೀಗೆ ಮೆರವಣಿಗೆಯುದ್ದಕ್ಕೂ ಸಂಭ್ರಮ ಮನೆ ಮಾಡಿದೆ.
ಮೆರವಣಿಗೆ ಸಾಗುವ ಮಾರ್ಗದೆಲ್ಲೆಡೆ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಎಸ್.ಪಿ.ಎಂ. ರಸ್ತೆ, ಗಾಂಧಿಬಜಾರ್ ಮುಖ್ಯರಸ್ತೆಗಳಲ್ಲಿ ಚಿತ್ತಾಕರ್ಷಕವಾಗಿ ರಂಗೋಲಿ ಹಾಕಲಾಗಿದೆ. ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಮಹಾಸಭಾದ ಕಾರ್ಯಕರ್ತರು ಮೆರವಣಿಗೆ ಮಾರ್ಗದಾದ್ಯಂತ ಕೇಸರಿ ಪತಾಕೆಗಳ ಬಂಟಿಕ್ಸ್ ಕಟ್ಟಿ ಅಲಂಕರಿಸಲಾಗಿದೆ. ಗಾಂಧಿಬಜಾರ್ ದ್ವಾರದಲ್ಲಿ 30 ಅಡಿ ಎತ್ತರದ ಉಗ್ರನರಸಿಂಹನ ಮೂರ್ತಿ ಇಡಲಾಗಿದ್ದು, ಶಿವಪ್ಪನಾಯಕ ವೃತ್ತವನ್ನು ಹೂಗಳಿಂದ ವಿಶೇಷವಾಗಿ ಸಿಂಗರಿಸಿ, ರಾಮನ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ. ಇನ್ನು ಅಮೀರ್ ಅಹ್ಮದ್ ವೃತ್ತದಲ್ಲಿ ಚಂದ್ರಯಾನ-3ರ ಬಿಂಬ ಮಕ್ಕಳನ್ನು ಆಕರ್ಷಿಸುತ್ತಿದೆ.
ವೀರಗಾಸೆ, ಮಹಿಳಾ ಡೊಳ್ಳು ತಂಡ, ನಾದಸ್ವರ, ಗೊಂಬೆ ವೇಷದಾರಿಗಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಉತ್ಸಾಹವನ್ನು ಇಮ್ಮಡಿಗೊಳಿಸಿವೆ. ಮೆರವಣಿಗೆಯಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ, ಪಾಲಿಕೆ ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.
ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಇಲಾಖೆಯಿಂದ ಕಟ್ಟೆಚರ ವಹಿಸಲಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಪೊಲೀಸರು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post