ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ವಿಶಾಲ್ ಮಾರ್ಟ್ Vishalmart ಕಟ್ಟಡದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಲಿಫ್ಟ್ ಕೆಟ್ಟು ನಿಂತಿದ್ದು, ಅದರಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಣೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮಾಲ್ ಕಟ್ಟಡದ 2 ನೇ ಮಹಡಿಯಲ್ಲಿ ಸಂಜೆ 8. 30 ರ ಸರಿಸುಮಾರಿಗೆ 9 ಜನರು ಲಿಫ್ಟ್ನ ಕೆಳಭಾಗದ ಮಹಡಿಗೆ ಆಗಮಿಸುತ್ತಿದ್ದರು. ಈ ವೇಳೆ ತಾಂತ್ರಿಕ ಕಾರಣದಿಂದ ಲಿಫ್ಟ್ ಸ್ಥಗಿತಗೊಂಡಿದೆ. ತಕ್ಷಣವೇ ಮಾಲ್ ಸಿಬ್ಬಂದಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಆದರೆ ಲಿಫ್ಟ್ ಬಾಗಿಲು ತೆರೆದುಕೊಂಡಿಲ್ಲ.

ಲಿಫ್ಟ್ ಒಳಗಿದ್ದ ನಾಗರಿಕರೋರ್ವರು ತಮ್ಮ ಮೊಬೈಲ್ ಫೋನ್ ಮೂಲಕ 112 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸರಿಸುಮಾರು 8. 55 ಕ್ಕೆ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೆಲ ನಿಮಿಷಗಳಲ್ಲಿಯೇ ಅಗ್ನಿಶಾಮಕ ತಂಡ ಸ್ಥಳಕ್ಕಾಗಮಿಸಿದೆ.
ತ್ವರಿತ ಕಾರ್ಯಾಚರಣೆ ಮೂಲಕ, ಕಟ್ಟರ್ ಯಂತ್ರದ ಮೂಲಕ ಲಿಫ್ಟ್ ಬಾಗಿಲನ್ನು ತುಂಡರಿಸಿದೆ. ಅದರೊಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಸಫಲವಾಗಿದೆ. 9.30 ರ ವೇಳೆಗೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಇದರಿಂದ ಭಯಭೀತರಾಗಿದ್ದ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಆರ್’ಎಫ್’ಓ ರಾಜು, ಡಿಎಫ್’ಓ ಅಶೋಕ್ ಕುಮಾರ್, ಎಫ್’ಎಸ್’ಟಿಓ ಮಕ್ತುಂ ಹುಸೇನ್, ಎಲ್’ಎಫ್ ಸುನೀಲ್, ಎಫ್’ಡಿ ಸತೀಶ್, ಎಫ್’ಎಂ ಸಂತೋಷ್ ಮನೋಜ್ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಲಿಫ್ಟ್’ನಲ್ಲಿ ಸಿಲುಕಿದ್ದವರನ್ನು ಭರತ್(37), ಅನುಷಾ(35), ಅನಿಸ್ ಫಾತಿಮಾ(44), ಮುಸರತ್(39), ಸೂಬಿಯಾ(31), ಪ್ರಶಾಂತ್(28), ಪ್ರವೀಣ್ ಕುಮಾರ್(47) ಹಾಗೂ ಇಬ್ಬರು ಮಕ್ಕಳನ್ನ ರಕ್ಷಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















