ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೇ ತಿಂಗಳಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಹಿರಿಯ ಪತ್ರಕರ್ತ ಶಿ.ಜು. ಪಾಶ ಸ್ಪರ್ಧಿಸಲಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದ್ದು, ನಾನು ಸ್ಪರ್ಧೆ ಮಾಡಲಿದ್ದೇನೆ. ಮಾರ್ಚ್ 29ರಿಂದ ಏಪ್ರಿಲ್ 7ರವರೆಗೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಇದೆ. ಈ ನಡುವೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಎಂದ ಕೂಡಲೇ ಮೂಗು ಮುರಿಯುವ ದೊಡ್ಡ ಸಂಖ್ಯೆಯ ಕನ್ನಡಿಗರಿದ್ದಾರೆ. ಅಂಥದ್ದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಸ್ಪರ್ಧಿಸಿ ಗೆದ್ದವರೆಲ್ಲ ಮೂಗು ಮುರಿಯುತ್ತಿರುವ ಹಾಗೂ ಕಸಾಪದಿಂದ ದೂರವೇ ಉಳಿದಿರುವ ಕನ್ನಡಿಗರನ್ನು ಮತ್ತು ಕನ್ನಡವನ್ನೇ ಬರೆಯುವ ಸಾಹಿತಿಗಳನ್ನು ಅಂಗಳಕ್ಕೆ ಕರೆತರುವ ಪ್ರಯತ್ನವನ್ನೇ ಮಾಡಲಿಲ್ಲ. ಬದಲಿಗೆ ತಮ್ಮ ಆಸ್ಥಾನದಲ್ಲಿದ್ದ ತಲೆಗಳಿಗೆ ಮಾತ್ರ ಬೆಲೆ ಕೊಟ್ಟು ಕೊಂಡು ಮಾಸಿ ಹೋಗಿದ್ದಾರೆ. ಜನ ಕೂಡ ರೋಸಿ ಹೋಗುವಂತೆ ಕಸಾಪದ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಸಾಪ ಎಲ್ಲರ ಪ್ರೀತಿಯ ಪರಿಷತ್ತು ಆಗಬೇಕು. ಇಲ್ಲಿ ಹೊಸ ಹೊಸ ರೀತಿಯಲ್ಲಿ ಕಾರ್ಯಕ್ರಮಗಳ ಆಯೋಜನೆ ಅಗಬೇಕು. ಕನ್ನಡ ಮತ್ತು ಕನ್ನಡ ಸಾಹಿತ್ಯ ಮಾತ್ರ ಇಲ್ಲಿ ಮುಖ್ಯವಾಗಿ ಕಾಣಬೇಕು. ತನ್ನವರನ್ನು ರಾಜಮರ್ಯಾದೆಗೆ ಒಳಪಡಿಸಿ ತನ್ನವರಲ್ಲ ದವರನ್ನು ಬಹುದೂರಕ್ಕೇ ಇಟ್ಟುಬಿಡುವ ಕೆಟ್ಟ ಸಂಸ್ಕೃತಿ ಈಗಲಾದರೂ ನಾಶವಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಯಾರು ಅಧ್ಯಕ್ಷರಾಗಿದ್ದರೋ ಅವರು ಅವರದೇ ಜಾತಿಯ ಜನರನ್ನು ಕರೆತಂದು ಸದಸ್ಯರಾಗಿಸಿಕೊಂಡರು. ಅರ್ಹತೆವುಳ್ಳ ಅಸಂಖ್ಯ ಕನ್ನಡಿಗರು ಮತ್ತು ಸಾಹಿತಿಗಳನ್ನು ಬಹಳ ನಿರ್ಲಕ್ಷ್ಯದಿಂದಲೇ ಕಂಡರು. ಜಿಲ್ಲಾ ಸಮ್ಮೇಳನಗಳಾಗಲೀ, ತಾಲೂಕು ಸಮ್ಮೇಳನ ಗಳಾಗಲೀ, ಸಾಹಿತ್ಯ ಹುಣ್ಣಿಮೆಗಳಾಗಲೀ ಎಲ್ಲವೂ ರಾಜಕೀಯಮಯವಾಗಿದ್ದವು. ಈಗಲಾದರೂ ಈ ರಾಜಕಾರಣ ಮತ್ತು ರಾಜಕಾರಣಿಗಳಿಂದ ಕಸಾಪ ಮುಕ್ತವಾಗಿ ಕನ್ನಡಿಗರ ಮತ್ತು ಕನ್ನಡವನ್ನೇ ಬರೆಯುವ ಲೇಖಕರ ವೇದಿಕೆಯಾಗಬೇಕಿದೆ. ಆ ಕೆಲಸವನ್ನು ಇನ್ನುಮುಂದೆ ಮಾಡೋಣ ಎಂದು ಕರೆ ನೀಡಿದ್ದಾರೆ.
ನನ್ನದೇನೂ ಸಾಧನೆಯಿಲ್ಲ. ಆದರೂ. ಕನ್ನಡವನ್ನೇ ಓದುತ್ತಾ, ಬರೆಯುತ್ತಾ ಬೆಳೆದ ನಾನು ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಅನಕ್ಷರಸ್ಥ ಕುಟುಂಬದಿಂದ ಅಕ್ಷರಸ್ಥ ಆದ ನಾನು ಪತ್ರಿಕಾರಂಗ ಮತ್ತು ಕನ್ನಡ ಸಾಹಿತ್ಯದಲ್ಲಿ ಮಾಡಿದ ಸಾಧನೆ ಅಂಥದ್ದೇನೂ ಇಲ್ಲ. ಆದರೂ ಒಂದಿಷ್ಟು ಕೆಲಸ ಮಾಡಿದ್ದೇನೆ. ಬಹಳಷ್ಟು ಕೆಲಸ ಮಾಡಬೇಕೆಂದಿದ್ದೇನೆ ಎಂದಿದ್ದಾರೆ.
ಶಿ.ಜು. ಪಾಶ ಕುರಿತಾಗಿ…
ಶಿವಮೊಗ್ಗದಲ್ಲಿ ಪತ್ರಿಕಾರಂಗದ ಕ್ರಾಂತಿಕಾರಿ ಹೆಜ್ಜೆಗಳನ್ನು ಮೂಡಿಸಿದ ಎಚ್ಚರಿಕೆ, ಕ್ರಾಂತಿದೀಪ, ಮಲೆನಾಡು ಮಿತ್ರ, ನಾವಿಕ ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಕೆಲಸ ಆರಂಭಿಸಿದರು.
ರಾಜ್ಯಮಟ್ಟದ ಆಗಿನ ಪತ್ರಿಕೆಗಳಾದ ಈ ವಾರ ಕರ್ನಾಟಕ, ಹಾಯ್ ಬೆಂಗಳೂರು, ಜನವಾಹಿನಿ ಪತ್ರಿಕೆಗಳಲ್ಲಿ ಕೂಡ ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಕೊಡಗುಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ವಿಜಯವಾಣಿ, ಸುಧಾ, ಮಯೂರ, ತರಂಗ, ತುಷಾರ, ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರು, ಹೊಸತು ಸೇರಿದಂತೆ ಬಹಳಷ್ಟು ಪತ್ರಿಕೆಗಳಲ್ಲಿ ಹಾಗೂ ವೆಬ್ ಪತ್ರಿಕೆಗಳಾದ ಅವಧಿ, ಬುಕ್ ಬ್ರಹ್ಮ, ದಿ ಡೆಕ್ಕನ್ ನ್ಯೂಸ್‌ಗಳಲ್ಲಿ ನಿರಂತರವಾಗಿ ಕಥೆ, ಕವಿತೆ, ನುಡಿಚಿತ್ರ, ಲೇಖನಗಳನ್ನು ಬರೆದ ಅನುಭವ ಹೊಂದಿದ್ದಾರೆ.
ಈವರೆಗೆ ಅಪ್ಪನ ಬೀಡಿ ಕವನ ಸಂಕಲನ, ಕೋಳಿ ಹುಂಜದ ಹೂವು ಕವಿತಾ ಸಂಕಲನ, ಕೆರೆ ಅಂಗಳದ ನವಾಬ ಕಥಾ ಸಂಕಲನ, ಮಹಾವಿನಾಶ, ಡಿಸ್ಕವರಿ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸಿದ್ದೇನೆ. ಪತ್ರಿಕೋದ್ಯಮ ಮತ್ತು ಸಾಹಿತ್ಯ ಕೃತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಕಟಿಸಿದ್ದರೆ, ಕೋಳಿ ಹುಂಜದ ಹೂವು ಕವಿತಾ ಸಂಕಲನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ಈವರೆಗೆ ಶಿವಮೊಗ್ಗ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ, ಸಂಕ್ರಮಣ ಕಾವ್ಯ ಮತ್ತು ಕಥಾ ಪ್ರಶಸ್ತಿ, ಬೆಂಗಳೂರು ಕರ್ನಾಟಕ ಸಂಘದ ನಾಗರಾಜರಾವ್ ದತ್ತಿನಿಧಿ ಬಹುಮಾನ, ಎರಡು ಬಾರಿ ಶಿವಮೊಗ್ಗ ಜಿಲ್ಲಾ ಪ್ರಸ್ ಗಿಲ್ಡ್ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಸರ ಪ್ರಶಸ್ತಿ, ರೋಟರಿ ಯುವ ಪ್ರಶಸ್ತಿ, ಗುಲ್ಬರ್ಗಾ ವಿವಿ ಕಥಾ ಪುರಸ್ಕಾರ, ಮುಂಬೈ ಅಕ್ಷಯ ಸಾಹಿತ್ಯ ಪುರಸ್ಕಾರ, ದೀಪಾವಳಿ ಪ್ರಜಾವಾಣಿ ವಿಶೇಷಾಂಕದ ಕಾವ್ಯ ಪುರಸ್ಕಾರ, ಮೈಸೂರು ದಸರಾ ಕವಿಗೋಷ್ಟಿ ವಿಶೇಷ ಸನ್ಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ದಿ ಯೇನಪೋಯ ಮೊಹಿದ್ದೀನ್ ಕುನ್ಹಿ ದತ್ತಿನಿಧಿ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಶ್ರೀ ನಾಗಾನಂದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಪ್ರೀತಿಪಾತ್ರರಿಂದ ಸಾಹಿತ್ಯ ಮತ್ತು ಪತ್ರಿಕಾರಂಗದ ಸೇವೆಗೆ ಸಂದಿದೆ.
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಯುವ ಪತ್ರಕರ್ತರ ತಂಡ ‘ನಮ್‌ಟೀಮ್?!’ ಸ್ಥಾಪಿಸಿ ಹಲವಾರು ನಾಟಕಗಳ ನಿರ್ಮಾಣ, ನೀನಾಸಂ, ರಂಗಾಯಣ, ಶಿವಸಂಚಾರ ತಂಡಗಳ ಜೊತೆ ರಂಗಹಬ್ಬಗಳನ್ನು ಮಾಡಿದ್ದೇನೆ. ಅಂತೆಯೇ, ತೆರೆಮರೆಗೆ ಸರಿದಿದ್ದ ಡಾ.ಪಿ.ಬಿ. ಶ್ರೀನಿವಾಸ್ ಎಂಬ ಅತ್ಯಪರೂಪದ ಗಾಯಕರನ್ನು ಮತ್ತೆ ತೆರೆಗೆ ಬರುವಂತೆ ಪ್ರಯತ್ನಿಸಿ ಸಫಲಗೊಂಡು ಹಲವು ರಸಮಂಜರಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ಪ್ರಸ್ತುತ ಮಲೆನಾಡು ಎಕ್ಸ್’ಪ್ರೆಸ್ ಸಂಪಾದಕ, ಕವಿ, ಕಥೆಗಾರರಾಗಿರುವ ಇವರು ಒಟ್ಟಾರೆಯಾಗಿ ಕನ್ನಡದ ಬರಹಗಾರ. ಸಂಘಟನೆ ಮತ್ತು ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಶಿ.ಜು. ಪಾಶ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post