ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದ ಸರ್ಕಾರಿ ನೌಕರರು ಒಳ-ಹೊರರೋಗಿಯಾಗಿ ನಗದು ರಹಿತ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯಸಿರಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಯೋಜನೆ ಅಡಿಯಲ್ಲಿ ಎಲ್ಲಾ ವಿಧದ ಔಷದಿಗಳು, ಮೆಡಿಕಲ್ ಇಮೇಜಿಂಗ್ ಸ್ಕ್ಯಾನಿಂಗ್, ಲ್ಯಾಬೊರೇಟರಿ ಪರೀಕ್ಷೆಗಳು, ವಾಹನ ಸೌಲಭ್ಯ ವ್ಯವಸ್ಥೆ ಉಚಿತವಾಗಿ ದೊರೆಯಲಿದ್ದು, ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಎಪ್ರಿಲ್ 1ರಿಂದ ಜಾರಿಗೊಳಿಸಲು ಪೂರಕವಾಗಿರುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು, ಕ್ಯಾನ್ಸರ್ ಕಾಯಿಲೆ ಪೀಡಿತ ಸರ್ಕಾರಿ ನೌಕರರಿಗೆ ರೇಡಿಯೇಷನ್/ಕಿಮೋಥೆರಪಿ ಮಾಡಿಸಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಆದೇಶ ಶೀಘ್ರ ಹೊರಬೀಳಲಿದೆ ಎಂದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ಇಡೀ ದೇಶದಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಪ್ರತಿ ವರ್ಷ ಏಪ್ರಿಲ್ 21 ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಆಚರಿಸುವುದು ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಈಗಾಗಲೇ ಪ್ರತಿ ವರ್ಷ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ನೀಡುತ್ತಿರುವ ಸವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯ ಸರ್ಕಾರಿ ನೌಕರರ ದಿನದಂದು ನೀಡುವಂತೆ ಆದೇಶ ಸರ್ಕಾರವು ಆದೇಶ ಹೊರಡಿಸಿರುತ್ತದೆ ಎಂದರು.
ಇತ್ತೀಚಿನ ಕೆಲವು ದಿನಗಳಲ್ಲಿ ಸಂಘವು ನೌಕರರ ಹಿತ-ಸುಖ ಕಾಯುವ ನಿಟ್ಟಿನಲ್ಲಿ ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರಿ ನೌಕರರಿಗೆ 2021ನೇ ವರ್ಷದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಪಡಿಸಿ ಸರ್ಕಾರವು ಆದೇಶ ಹೊರಡಿಸಿತ್ತು. ಇದರಿಂದಾಗಿ ಸರ್ಕಾರಿ ನೌಕರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಕುರಿತಂತೆ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳ ಗಮನಕ್ಕೆತಂದು, ತಡೆಹಿಡಿಯಲಾಗಿದ್ದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಮಂಜೂರು ಮಾಡಿಸಲಾಗಿದೆ ಎಂದರು.
ರಾಜ್ಯದ ಸರ್ಕಾರಿ ನೌಕರರು ಅಕೌಂಟ್ಸ್ ಹೈಯರ್/ಲೋಯರ್ ಹಾಗೂ ಜನರಲ್ ಲಾ ಭಾಗ-1 ಮತ್ತು 2 ಇಲಾಖಾ ಪರೀಕ್ಷೆ ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಆನ್‌ಲೈನ್ ಮೂಲಕ ತರಗತಿಗಳನ್ನು ಆಯೋಜಿಸಲಾಗುತ್ತಿದ್ದು, ರಾಜ್ಯದ ಸರ್ಕಾರಿ ನೌಕರರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕೋವಿಡ್ ಹಿನ್ನಲೆಯಲ್ಲಿ ತಡೆಹಿಡಿಯಲಾಗಿದ್ದ ಅನುಕಂಪ ಆಧಾರದ ನೇಮಕಾತಿ ಪ್ರಕ್ರಿಯೆಯನ್ನು ಸಂಘದ ಮನವಿಯಂತೆ ಸರ್ಕಾರವು ಪುನ: ಪ್ರಾರಂಭಿಸಿದೆ. ಸರ್ಕಾರವು ಸರ್ಕಾರಿ ನೌಕರರಿಗೆ ಮಾರಕವಾಗುವಂತಹ ಅಂಶಗಳನ್ನು ಸೇರ್ಪಡೆಗೊಳಿಸಲು ಕೆ.ಸಿ.ಎಸ್(ಸಿಸಿಎ) ನಿಯಮಾವಳಿಗೆ ತಿದ್ದುಪಡಿ ಮಾಡುವ ಸಲುವಾಗಿ ಕರಡು ನಿಯಮಾವಳಿಗಳನ್ನು ಪ್ರಕಟಿಸಿದ್ದು, ಸಂಘದ ವತಿಯಿಂದಸರ್ಕಾರಿ ನೌಕರರಿಗೆ ಮಾರಕವಾಗಿರುವ ನಿಯಮಾವಳಿಗಳನ್ನು ಜಾರಿ ಮಾಡದಂತೆ ಸೂಕ್ತ ಆಕ್ಷೇಪಣೆ ಸಲ್ಲಿಸುವ ಮೂಲಕ ಸರ್ಕಾರವು ಉದ್ದೇಶಿಸಿರುವ ತಿದ್ದುಪಡಿ ನಿಯಮಗಳಿಗೆ ತಾತ್ಕಾಲಿಕ ತಡೆ ಹಾಕಲಾಗಿದೆ ಎಂದವರು ವಿವರಿಸಿದರು.
ಎಚ್.ಆರ್.ಎಂ.ಎಸ್ ತಂತ್ರಾಶದ ಮೂಲಕ ವೇತನ ಮತ್ತು ಇನ್ನಿತರೆ ಸೇವಾ ಸವಲತ್ತುಗಳನ್ನು ಪಡೆಯುವಲ್ಲಿ ಸರ್ಕಾರಿ ನೌಕರರು ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದು, ಈ ಬಗ್ಗೆ ಇ-ಆಡಳಿತ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ, ನೌಕರರ ಸೇವಾ ವಿವರಗಳನ್ನು ತಿದ್ದುಪಡಿ ಮಾಡಲು, ಜಿಲ್ಲಾ ಮಟ್ಟದಲ್ಲಿ ಮಂಜೂರಾಗುವ ಎಲ್ಲಾ ಸೇವಾ ಸವಲತ್ತುಗಳನ್ನು ಆದೇಶ/ಮಾಹಿತಿಗಳನ್ನು ತಂತ್ರಾಶದಲ್ಲಿ ಇಂದೀಕರಿಸಲು ಹಾಗೂ ದೂರು ದಾಖಲಿಸಲು/ವೀಕ್ಷಿಸಲು ಆಯಾ ಡಿಡಿಓಗಳಿಗೆ ಅಧಿಕಾರ ನೀಡಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಅತೀ ಶೀಘ್ರದಲ್ಲಿ ಆದೇಶ ಹೊರಬೀಳಲಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಸಹಶಿಕ್ಷಕರು, ಪದವಿ ಪೂರ್ವಕಾಲೇಜು ಉಪನ್ಯಾಸಕರು ಹಾಗೂ ಭೋಧಕೇತರ ನೌಕರರಿಗೆಕೇಂದ್ರ ಸರ್ಕಾರ ಮಾದರಿಯ ಸರಿಸಮಾನ ವೇತನ, ವೃಂದ ನೇಮಕಾತಿ ನಿಯಮಗಳಿಗೆ ಸಮಗ್ರತಿದ್ದುಪಡಿ ಮಾಡುವ ಮೂಲಕ ವರ್ಷಕ್ಕೆ 2 ಬಾರಿ ಮುಂಬಡ್ತಿ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಹಾಗೂ ಶಿಕ್ಷಕರು/ಉಪನ್ಯಾಸಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಎಲ್ಲಾಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಮಂತ್ರಿಗಳ ಜೊತೆಯಲ್ಲಿ ಐತಿಹಾಸಿಕ ಸಭೆ ನಡೆಸಲಾಗಿದ್ದು, ಶಿಕ್ಷಕರ/ಉಪನ್ಯಾಸಕರು/ಭೋಧಕೇತರ ನೌಕರರಜ್ವಲಂತ ಸಮಸ್ಯೆಗಳು ಶೀಘ್ರ ಇತ್ಯರ್ಥವಾಗಲಿದೆ ಎಂದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸಭೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರು ಒಪ್ಪಿಗೆ ಸೂಚಿಸಿದ್ದು, ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಮೇಶ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್. ಮೋಹನ್ ಕುಮಾರ್, ಕಾರ್ಯದರ್ಶಿ ಐ.ಪಿ. ಶಾಂತರಾಜ್, ಉಪಾಧ್ಯಕ್ಷ ಪಾಪಣ್ಣ, ಆರ್. ಮಾರುತಿ, ದಿನೇಶ್, ಸತೀಶ್, ಸಿಂಗ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post