ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ ಜಿಲ್ಲೆಯ ಜನರ ದಶಕಗಳ ಕನಸಾಗಿದ್ದ ಎಫ್ ಎಂ ರೇಡಿಯೋ ಈಗ ನನಸಾಗುವ ಹಂತಕ್ಕೆ ಬಂದು ತಲುಪಿದ್ದು, ಅತಿ ಶೀಘ್ರದಲ್ಲೇ ಇದು ಕಾರ್ಯಾರಂಭ ಮಾಡಲಿದೆ.
ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಣ ಮತ್ತು ಪರಿಸರದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪರಿಸರ ಅಧ್ಯಯನ ಕೇಂದ್ರ ಇಂಟಿಗ್ರೇಟೆಡ್ ಡೆವೆಲಪ್’ಮೆಂಟ್ ಸೊಸೈಟಿ ನೋಂದಾಯಿತ ಸಂಸ್ಥೆಗೆ ಜಿಲ್ಲೆಯಲ್ಲಿ ಎಫ್ ಎಂ ಸಮುದಾಯ ರೇಡಿಯೋ ಕೇಂದ್ರವನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲೇ ರೇಡಿಯೋ 90.8 ಎಂಎಚ್‌ಜೆಡ್’ನಲ್ಲಿ ಕಾರ್ಯಾರಂಭ ಮಾಡಲು ಎಲ್ಲ ಸಿದ್ದತೆಗಳು ನಡೆದಿದ್ದು, ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ.
ಪ್ರಮುಖವಾಗಿ, ಜಿಲ್ಲೆಯಾದ್ಯಂತ ಮೂಲೆ ಮೂಲೆಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವ ಜೊತೆಯಲ್ಲಿ ಧ್ವನಿಯಿಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡುವುದು ಈ ಎಫ್ ಎಂ ಕೇಂದ್ರದ ಗುರಿಯಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸುತ್ತಾರೆ.
ಈ ನೂತನ ರೇಡಿಯೋ ಜಿಲ್ಲೆಯ 30 ಕಿಮೀ ಸುತ್ತಳತೆ ವ್ಯಾಪ್ತಿಯಲ್ಲಿರುವ ಎಲ್ಲ ಶಾಲೆಗಳನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಹೊಂದಿದ್ದು, ಜೊತೆಯಲ್ಲಿ ಇತರ ಶಿಕ್ಷಣ ಸಂಸ್ಥೆಗಳಾದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲು ಸಂಸ್ಥೆ ಯೋಜಿಸಿದೆ. ಅಲ್ಲದೇ, ಶಿವಮೊಗ್ಗ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಪಾಲಿಕೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್’ನ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಅರಿವು ಮೂಡಿಸಿ ಯಶಸ್ವಿ ಅನುಷ್ಠಾನದ ಕಾರ್ಯಕ್ರಮಗಳು ಬಿತ್ತರವಾಗಲಿವೆ.
ಪ್ರಮುಖವಾಗಿ, ಗ್ರಾಮೀಣ ಭಾಗದ ರೈತರು, ಕಾರ್ಮಿಕರು, ಕುಶಲಕರ್ಮಿಗಳು, ಜನಪದ ಗಾಯಕರು, ನಾಟಕ, ಯಕ್ಷಗಾನ, ಜನಪದ ಆಟಗಳು, ಜನಪದ ಆಹಾರ, ಜನಪದ ವೈದ್ಯ, ಜನಪದ ಜೀವನ, ಸಾವಯವ ಜೀವನ, ಪರಿಸರ ಸ್ನೇಹಿ ಜೀವನವನ್ನು ಪ್ರತಿನಿಧಿಸುವ ಕಾರ್ಯಕ್ರಮಗಳೂ ಸಹ ಶಿವಮೊಗ್ಗ ಮೊದಲ ಎಫ್ ಎಂ ರೇಡಿಯೋದಲ್ಲಿ ಬರಲಿವೆ.
ಅಲ್ಲದೇ. ತರಕಾರಿ ಮಾರುಕಟ್ಟೆ ಧಾರಣೆ, ಎಪಿಎಂಸಿ ಮಾರುಕಟ್ಟೆ ಧಾರಣೆ ವರದಿಗಳು ಪ್ರಸಾರವಾಗಲಿದ್ದು, ಜಿಲ್ಲೆಯ ಸುದ್ದಿಗಳು, ಶಾಲಾ ಕಾಲೇಜುಗಳ ಪಠ್ಯಕಲಿಕೆ, ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳೂ ಬಿತ್ತರಗೊಳ್ಳಲಿವೆ.
ಈ ಸಮುದಾಯ ರೇಡಿಯೋ, ಲಾಭದಾಯಕ ಉದ್ದೇಶವಿಲ್ಲದ, ಜನ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳ ನೇತೃತ್ವದಲ್ಲಿ ಜಾರಿಗೊಳ್ಳಲಿದೆ.
ಮೊಬೈಲ್-ವೆಬ್’ನಲ್ಲೂ ಕೇಳಬಹುದು ರೇಡಿಯೋ
ಶಿವಮೊಗ್ಗದಲ್ಲಿ ಆರಂಭವಾಗಲಿರುವ ಮೊದಲ ಎಫ್ ಎಂ ರೇಡಿಯೋವನ್ನು ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ಕೇಳಬಹುದಾಗಿದೆ. ದೇಶ-ವಿದೇಶಗಳ ರೇಡಿಯೋಗಳನ್ನು ನಿಮ್ಮ ಮೊಬೈಲ್’ನಲ್ಲಿಯೇ ಕೇಳುವ ಅವಕಾಶವಿದೆ. ಅದೇ ತಂತ್ರಜ್ಞಾನದಲ್ಲಿ ಶಿವಮೊಗ್ಗದ ಎಫ್ ಎಂ ರೇಡಿಯೋ ಸಹ ಆರಂಭವಾಗಲಿದ್ದು, ನಿಮ್ಮ ಮೊಬೈಲ್’ನಲ್ಲಿಯೇ ಕೇಳಬಹುದಾಗಿದೆ. ಜೊತೆಗೆ ಅಂತರ್ಜಾಲ/ವೆಬ್ ರೇಡಿಯೋದಲ್ಲಿ ಪ್ರಪಂಚದಾದ್ಯಂತ ಇದು ಪ್ರಸಾರವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 08182-276279, 9480431983 ಸಂಖ್ಯೆಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post