ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಯುತ ಸಧೃಡತೆಗೆ ಕ್ರೀಡೆ ಸಹಕಾರಿಯಾಗಿ ನಿಲ್ಲಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಅಭಿಪ್ರಾಯಪಟ್ಟರು.
ಇಂದು ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿಟಿಯು ಕೇಂದ್ರ ಕರ್ನಾಟಕ ವಲಯ ಪುರುಷ ಹಾಕಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕೆಲವು ಆಧುನಿಕ ವಿಚಾರಗಳಿಗೆ ಸಿಲುಕಿ ನಮ್ಮ ಯುವ ಸಮೂಹ ಕ್ರೀಡಾ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ಮೂಲಕ ಎಲ್ಲವೂ ಸಾಧ್ಯ ಎಂಬ ಭ್ರಮೆಯಲ್ಲಿ ಮುಳುಗಿದ್ದಾರೆ. ನಮ್ಮ ಬಾಲ್ಯದ ದಿನಗಳು ಅನೇಕ ಕ್ರೀಡಾ ಚಟುವಟಿಕೆಗಳಿಂದ ತುಂಬಿತ್ತು. ಅದರೇ ಕಾಲ ಬದಲಾದಂತೆಲ್ಲಾ ದೈಹಿಕ ಶ್ರಮವಿಲ್ಲದೇ ಅನಾರೋಗ್ಯದ ಸವಾಲುಗಳು ಎದುರಿಸುವಂತಾಗುತ್ತಿದೆ. ಭಾರತದಲ್ಲಿ ಹಾಕಿ ಕ್ರೀಡೆಯನ್ನು ಸದಾ ಪೋಷಿಸಿಕೊಂಡು ಬರುತ್ತಿದೆ. ವಿಶ್ವದ ಹಲವಾರು ಪ್ರಾಚೀನ ಇತಿಹಾಸಗಳಲ್ಲಿ ಹಾಕಿಯ ಉಲ್ಲೇಖವನ್ನು ನಾವು ಕಾಣಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಖಜಾಂಚಿಗಳಾದ ಸಿ.ಆರ್. ನಾಗರಾಜ, ಕಾಲೇಜಿನ ಶೈಕ್ಷಣಿಕ ಡೀನ್ ಪಿ. ಡಾ. ಮಂಜುನಾಥ, ದೈಹಿಕ ಶಿಕ್ಷಣ ನಿರ್ದೇಶಕ ಎ.ವಿ. ಚೇತನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕದ ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜುಗಳ ತಂಡ ಭಾಗವಹಿಸಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















