ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತವರು ಮನೆಯಲ್ಲಿ ತಂಗಿದ್ದ ಮಾರಿಕಾಂಬೆಯನ್ನು ಇಂದು ಬೆಳಗಿನ ಜಾವ ಕೋಟೆ ರಸ್ತೆಯ ಶ್ರೀ ಮಾರಿಕಾಂಬ ದೇವಾಲಯದ Kote Shri Marikamba ಗದ್ದುಗೆಗೆ ತಂದಿರಿಸಲಾಗಿದೆ.
ಇಂದು ಬೆಳಗಿನ ಜಾವ 4.30ರ ಸುಮಾರಿಗೆ ದೇವಿಯನ್ನು ಮಾರಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದ್ದು, ಇದಕ್ಕೂ ಮೊದಲು ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮಾಜ ಬಾಂಧವರು ಬೇವಿನುಡಿಗೆಯೊಂದಿಗೆ ಆಗಮಿಸಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿದರು. ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯೆ ಅರ್ಪಿಸಿ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ವಾಲ್ಮೀಕಿ ಸಮಾಜದವರು, 10ರಿಂದ 2 ಗಂಟೆಯವರೆಗೆ ಉಪ್ಪಾರ ಸಮಾಜದವರು ಪೂಜೆ ಸಲ್ಲಿಸಿದರು. ನಂತರ ರಾತ್ರಿ 11 ಗಂಟೆಯವರೆಗ ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ.
Also read: India emerged from Fragile Five to Top Five Economy under Modi ji’s leadership: Amit Shah
ಇಂದು ಕೂಡ ಶ್ರೀ ಮಾರಿಕಾಂಬೆ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು, ಮೈಲುಗಟ್ಟಲೇ ಉದ್ದ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಭಕ್ತರು ಕೃತಾರ್ಥರಾದರು. ತಮ್ಮ ಜೊತೆಗೆ ಪುಟ್ಟ ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ದೇವಿಯ ದರ್ಶನ ಮಾಡಿದರು. ದೇವಸ್ಥಾನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯ ವೇಳೆಯಂತೂ ದೇವಸ್ಥಾನ ನೋಡಲು ಎರಡು ಕಣ್ಣುಗಳೇ ಸಾಲದಾಗಿದೆ. ಜಗಮಗಿಸುವ ವಿದ್ಯುತ್ ದೀಪಾಲಂಕಾರ, ಕಣ್ಮನ ಸೆಳೆಯುವ ಹೂವಿನ ಅಲಂಕಾರ ಗಮನ ಸೆಳೆಯುತ್ತಿವೆ. ದೇವಸ್ಥಾನದ ಸುತ್ತಮುತ್ತ ಅಂಗಡಿಗಳು ಕೂಡ ತೆರೆದಿದ್ದು, ವ್ಯಾಪಾರ ಕೂಡ ಭರ್ಜರಿಯಾಗಿ ನಡೆದಿದೆ.
ಇದರ ಜೊತೆಗೆ ಇಡೀ ನಗರದ ತುಂಬಾ ಕುರಿ ಬಲಿಯೂ ನಡೆದಿದೆ. ಬೆಳಗ್ಗೆಯಿಂದಲೇ ಕುರಿ ಕತ್ತರಿಸಿ ಮಾಂಸದಡುಗೆಗೆ ತಯಾರಿ ಮಾಡಲಾಗಿದೆ. ನಗರದ ಮಟನ್ ಸ್ಟಾಲ್ ಗಳಲ್ಲಿ ಜನ ಜಾತ್ರೆಯೇ ನೆರೆದಿದೆ. ಊರುಗಳಿಂದ ಸಂಬಂಧಿಕರು, ಸ್ನೇಹಿತರು, ಆತ್ಮೀಯರು ಬರುತ್ತಲೇ ಇದ್ದಾರೆ. ಹಲವು ಕಡೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಒಟ್ಟಾರೆ ಈ ಬಾರಿಯ ಮಾರಿ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಮಾ. 16ರವರೆಗೆ ಜಾತ್ರೆ ಮುಂದುವರೆಯಲಿದ್ದು, ಲಕ್ಷಾಂತರ ಜನ ಆಗಮಿಸಿದ್ದಾರೆ. 16 ರಂದು ರಾತ್ರಿ 7 ಗಂಟೆಗೆ ಅತ್ಯಂತ ಸಂಭ್ರಮದಿಂದ ಅಮ್ಮನವರನ್ನು ವನಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ತೆರೆ ಬೀಳಲಿದೆ. ಈ ಮಧ್ಯೆ ಮಾ. 15 ರಿಂದ 17 ರವರೆಗೆ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಕೂಡ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















