ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜುಲೈ 19 ಮತ್ತು 22ರಂದು ರಾಜ್ಯದಾದ್ಯಂತ ನಡೆಸುತ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ಸುಮಾರು 150ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಈ ಪರೀಕ್ಷೆಯಲ್ಲಿ ಜಿಲ್ಲೆಯ 24,768ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ತಿಳಿಸಿದ್ದಾರೆ.
ವಿದ್ಯಾಗಮ, ವಠಾರ ಶಾಲೆ ಮೂಲಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಳೆದ ಜನವರಿ ಮಾಹೆಯಿಂದ ಮಾರ್ಚ್ ಅಂತ್ಯದವರೆಗೆ ಭೌತಿಕ ತರಗತಿಗಳು, ನಂತರ ಇಲ್ಲಿಯವರೆಗೂ ಆನ್‌ಲೈನ್‌ನಲ್ಲಿ ಶಿಕ್ಷಣವನ್ನು ನೀಡಿ ಪರೀಕ್ಷೆಗೆ ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮತ್ತು ಶಾಲಾ ಹಂತದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಫೋನ್ ಇನ್ ಕಾರ್ಯಕ್ರಮ ನಡೆಸಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಲಾಗಿದೆ. ಭದ್ರಾವತಿ ಆಕಾಶವಾಣಿ ಮೂಲಕ ಕಾರ್ಯಕ್ರಮವನ್ನು ರೂಪಿಸಿ, ಪ್ರಸಾರಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳು ಕೇಳುವ ಕ್ಲಿಷ್ಟಾಂಶಗಳ ಕುರಿತು ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷಾ ಮಂಡಳಿಯಿಂದ ನೀಡಿದ ಮೂರು ಸೆಟ್ ಪ್ರಶ್ನೆಪತ್ರಿಕೆ ಮಾದರಿಗಳನ್ನು ಎಲ್ಲಾ ಮಕ್ಕಳಿಗೆ ಆಯಾ ಶಾಲಾ ಶಿಕ್ಷಕರಿಗೆ ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಪ್ರೇರೇಪಿಸಲಾಗಿದೆ. ಅಲ್ಲದೇ ಇಲಾಖೆ ವತಿಯಿಂದ ಪ್ರತಿ ವಿಷಯದಲ್ಲಿ ಸುಮಾರು 250 ಮಾದರಿ ಬಹು ಆಯ್ಕೆಯ ಪ್ರಶ್ನೆಗಳನ್ನು ರಚಿಸಿ ವಿಷಯವಾರು ಫೋರಂಗೆ ನೀಡಿ ಎಲ್ಲಾ ಶಿಕ್ಷಕರಿಗೆ ತಲುಪುವ ಹಾಗೂ ಆ ಮೂಲಕ ಮಕ್ಕಳಿಗೆ ತಲುಪಿಸುವ ಕೆಲಸ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಜಿಲ್ಲೆ ಹಾಗೂ ತಾಲೂಕು ಕಚೇರಿಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದಂತೆ, ಆಡಳಿತಾತ್ಮಕ ಮತ್ತು ಶೈಕ್ಷಣಿಕ ಮಾಹಿತಿ ತಿಳಿಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಮಟ್ಟದ ಆಹ್ವಾನಿತ ಸಂಪನ್ಮೂಲ ವ್ಯಕ್ತಿಗಳಿಂದ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಶಿಕ್ಷಕರಿಗೆ ಪ್ರೇರಣಾ ತರಬೇತಿಯನ್ನು ನೀಡಲಾಗಿದೆ ಅಲ್ಲದೆ ವಿದ್ಯಾರ್ಥಿಗಳು ಪರೀಕ್ಷಾ ಭಯ, ಅಧ್ಯಯನ ಕೌಶಲ ಮತ್ತು ಕೋವಿಡ್ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕುರಿತು ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಪರೀಕ್ಷೆಗೂ ಮುನ್ನ ಜೂನ್ ಮಾಹೆಯಲ್ಲಿ ತಾಲೂಕು ಮಟ್ಟದಲ್ಲಿ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸಲಾಗಿದೆ. ನಂತರ ಪರೀಕ್ಷೆಯ ಬದಲಾದ ವಿನ್ಯಾಸದ ಬಗ್ಗೆಯೂ ವೆಬಿನಾರ್ ತಂತ್ರಾಂಶದ ಮೂಲಕ ಮಾರ್ಗದರ್ಶನ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಜುಲೈ 9 ಮತ್ತು 14ರಂದು ಪ್ರತಿ ದಿನ ಜಿಲ್ಲೆಯ 30ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರು ಸಮಾಲೋಚನೆ ನಡೆಸಲಿದ್ದಾರೆ. ಈ ಸಮಾಲೋಚನೆಯಲ್ಲಿ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮಾದರಿಯನ್ನೇ ಅನುಸರಿಸಿ ಆರು ವಿಷಯಗಳ ಒ.ಎಂ.ಆರ್. ಶೀಟ್‌ಗಳನ್ನು ಅಚ್ಚುಹಾಕಿಸಿ ಎಲ್ಲಾ ಶಾಲೆಗಳಿಗೆ ವಿತರಿಸಲಾಗಿದೆ. ಅಲ್ಲದೆ ಎರಡನೇ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ 150 ಪರೀಕ್ಷಾ ಕೇಂದ್ರಗಳಲ್ಲಿ 22,103 ಶಾಲಾ ವಿದ್ಯಾರ್ಥಿಗಳು, 2,238 ಪುನರಾವರ್ತಿತ ಅಭ್ಯರ್ಥಿಗಳು, 427ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 24,768ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post