ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕ ರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಪತ್ತು ನಿರ್ವಾಹಣಾ ಕಾಯ್ದೆ 2005 ಕಲಂ 25(2) (a) ಮತ್ತು 30(1) ರಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಶಿವಮೊಗ್ಗ ಜಿಲ್ಲೆಯಾದ್ಯಂತ ಜ.5ರ ರಾತ್ರಿ 10 ಗಂಟೆಯಿಂದ 19ರ ಬೆಳಿಗ್ಗೆ 5 ಗಂಟೆಯವರಗೆ ಈ ಕೆಳಕಂಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಆದೇಶಿಸಿದ್ದಾರೆ.
ಜಿಲ್ಲಾಡಳಿತ ವಿಧಿಸಿರುವ ನಿಯಮಗಳೇನು:
- ಜಿಲ್ಲೆಯಾದ್ಯಂತ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ.
- ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಪ್ಯೂ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಅತ್ಯಾವಶ್ಯಕ ಮತ್ತು ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಎಲ್ಲಾ ಕಛೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನಗಳು ಮಾತ್ರ ಕಾರ್ಯನಿರ್ವಹಿಸುವುದು.
- ವಾರಾಂತ್ಯದ ಕರ್ಪ್ಯೂ ಸಮಯದಲ್ಲಿ ತುರ್ತು ಉದ್ದೇಶಗಳಿಗಾಗಿ ಜನರ ಅಗತ್ಯತೆಗನುಗುಣವಾಗಿ ಸಾರ್ವಜನಿಕರಿಗೆ ಕಾರ್ಯನಿರ್ವಹಿಸಲು ಸಾರ್ವಜನಿಕ ಸಾರಿಗೆ ಸಂಸ್ಥೆಯ ಮುಖ್ಯಸ್ಥರು ಕ್ರಮಕೈಗೊಳ್ಳುವುದು.
- ಪಬ್‌ಗಳು/ ಕ್ಲಬ್‌ಗಳು, ರೆಸ್ಟೋರೆಂಟ್‌ಗಳು/ ಬಾಲ್‌ಗಳು/ ಹೋಟೆಲ್‌ಗಳಲ್ಲಿ ತಿನ್ನುವ ಸ್ಥಳಗಳು ಇತ್ಯಾದಿ, ಅಸನ ಸಾಮರ್ಥ್ಯದ ಶೇ. 50 ರಷ್ಟು ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ ಅನುಸರಿಸತಕ್ಕದ್ದು ಮತ್ತು ಅಂತಹ ಸ್ಥಳಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾತ್ರ ಅವಕಾಶವಿರುತ್ತದೆ.
- ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಒಟ್ಟು ಆಸನ ಸಾಮರ್ಥ್ಯದ ಶೇ. 50ರ ಸಾಮರ್ಥ್ಯದೊಂದಿಗೆ ಸಿನಿಮಾ ಹಾಲ್ಸ್ ಮಲ್ಟಿಪ್ಲೆಕ್ಸ್, ರಂಗಮಂದಿರಗಳು/ ಅಡಿಟೋರಿಯಂ ಮತ್ತು ಇದೇ ರೀತಿಯ ಸ್ಥಳಗಳು ಮತ್ತು ಅಂತಹ ಸ್ಥಳಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿದೆ.
- ಕೋವಿಡ್-19 ಸೂಕ್ತ ನಡವಳಿಕೆ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಿಗೆ ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಡಿಸಿ ತೆರೆದ ಸ್ಥಳಗಳಲ್ಲಿ 200 ಜನ ಮೀರದಂತೆ ಮತ್ತು ಒಳಾಂಗಣ ಸ್ಥಳಗಳಲ್ಲಿ 100 ಜನ ಮೀರದಂತೆ ವಿವಾಹ ಕಾರ್ಯಗಳನ್ನು ನಡೆಸಲು ಅನುಮತಿಸಲಾಗಿದೆ.
- ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ತೆರೆಯಲು ಅನುಮತಿಸಿದೆ. ಯಾವುದೇ ಸೇವೆ ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ. ನಿಗದಿಪಡಿಸಿದ ಸಮಯದಲ್ಲಿ ಸಂಪೂರ್ಣವಾಗಿ ಲಸಿಕೆಯನ್ನು ಪಡೆದ 50 ಜನ ಮೀರದಂತೆ ಪ್ರವೇಶಕ್ಕೆ ಅವಕಾಶ ನೀಡತಕ್ಕದ್ದು.
- ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಎಲ್ಲಾ ಇನ್ನಿತರೆ ಅಂಗಡಿಗಳು ಮತ್ತು ಸಂಸ್ಥೆಗಳು ವಾರದ ದಿನಗಳಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶವಿದೆ.
- ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಈಜುಕೊಳಗಳಲ್ಲಿ ಮತ್ತು ಜಿಮ್‌ಗಳಲ್ಲಿ 50% ಸಾಮರ್ಥ್ಯ ಹೊಂದಿಕೊಂಡು ಬಳಸಲು ಅನುಮತಿಸಿದೆ.
- ಶೇ. 50 ರ ಸಾಮರ್ಥ್ಯದೊಂದಿಗೆ ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಂಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಜಿಲ್ಲೆಯಾದ್ಯಂತ ಎಲ್ಲಾ ಮೆರವಣಿಗೆ, ಧರಣಿಗಳು, ಪ್ರತಿಭಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕೋವಿಡ್ ನಿರ್ವಹಣೆಯ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತದಿಂದ ನೀಡುವ ಎಲ್ಲಾ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ವಿಪತ್ತು ನಿರ್ವಹಣಾ ಆಧಿನಿಯಮ, 2005ರ 51 ರಿಂದ 60 ರ ಉಪಬಂಧಗಳು ಮತ್ತು ಭಾರತೀಯ ದಂಡ ಸಂಹಿತೆ ಕಲಂ 188 ರ ಅಡಿಯಲ್ಲಿನ, ಕಾನೂನು ಕ್ರಮಗಳು ಮತ್ತು ಕಾಲ ಕಾಲಕ್ಕೆ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಹಾಗೂ ಈ ನಿಷೇಧಾಜ್ಞೆಯನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮತ್ತು ಇತರೆ ಸಕ್ಷಮ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post