ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಸಾಕಷ್ಟು ಕೈಗಾರಿಕೆಗಳು ಕಾರ್ಯನಿರ್ವ ಹಿಸುತ್ತಿದ್ದು, ರಾಜ್ಯ ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಕೆಲವು ಕೈಗಾರಿಕೆ ಗಳ ಕಾರ್ಯಕ್ಕೆ ಯಾವುದೇ ನಿರ್ಬಂಧ ಹೇರದಿದ್ದರೂ ಸ್ಥಳೀಯ ಜಿಲ್ಲಾಡಳಿತ ಈ ಕೈಗಾರಿಕೆಗಳ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸೂಚಿಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಹಿರಿಯ ಕೈಗಾರಿಕೋದ್ಯಮಿ ಹಾಗೂ ವಿಧಾನ ಪರಿಷತ್ ಶಾಸಕ ಎಸ್. ರುದ್ರೇಗೌಡ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜೀವ, ಜೀವನ ಎರಡೂ ಮುಖ್ಯ. ಆದ್ದರಿಂದ ಪ್ರತಿಯೊಬ್ಬರು ಜೀವಕ್ಕೆ ಯಾವುದೇ ಅಪಾಯ ಬಾರದ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅದೇ ರೀತಿ ಜೀವನವನ್ನೂ ನಡೆಸಬೇಕೆಂಬ ಧ್ಯೇಯ ವಾಕ್ಯವನ್ನು ಪ್ರತೀ ಹಂತದಲ್ಲೂ ಕೋವಿಡ್‌ನ ಸಂದರ್ಭದಲ್ಲಿ ಹೇಳುತ್ತಲೇ ಇದ್ದಾರೆ. ಅಲ್ಲದೆ, ಕೈಗಾರಿಕೆಗಳೂ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರು, ನೌಕರರಿಗೆ ಇದೇ ಮಾತನ್ನೂ ಕೂಡಾ ಹೇಳುತ್ತಿದ್ದಾರೆ.

ಇದರ ಜೊತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಯಾವುದೇ ನಿರ್ಬಂಧವಿಲ್ಲ. ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರ ಜೊತೆಗೆ ಕಾರ್ಮಿಕರ ಆರೋಗ್ಯವನ್ನು ಕಾಪಾಡಿಕೊಂಡು ಕೆಲವು ಕೈಗಾರಿಕೆಗಳು ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಲು ಯಾವುದೇ ಅಡೆತಡೆ ಇಲ್ಲ ಎಂಬ ಸ್ಪಷ್ಟ ಆದೇಶವನ್ನು ಹೊರಡಿಸಿದ್ದಾರೆ. ಆದರೆ ಜಿಲ್ಲಾಡಳಿತ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೆ ಶಿವಮೊಗ್ಗ ನಗರದಲ್ಲಿ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ತಡೆ ನೀಡಿರುವುದು ಯಾವ ಉದ್ದೇಶಕ್ಕೆ ಎಂಬುದು ಅರ್ಥವಾಗದ ಸಂಗತಿ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿರುವ ಕೈಗಾರಿಕೆಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತವೆ. ಈಗಾಗಲೇ ಹಲವು ದೇಶಗಳ ಕಂಪನಿಗಳೊಂದಿಗೆ ಇಲ್ಲಿನ ಕೈಗಾರಿಕೆಗಳು ಒಪ್ಪಂದವನ್ನೂ ಮಾಡಿಕೊಂಡಿವೆ. ಅದರಂತೆ ಇಲ್ಲಿಂದ ಉತ್ಪನ್ನಗಳು ರಫ್ತಾಗಬೇಕಾಗಿದೆ. ಸಾವಿರಾರು ಕಾರ್ಮಿಕರು ಈ ಕಾರ್ಖಾನೆ ಗಳಲ್ಲಿ ಕಾರ್ಯನಿರ್ವಹಿಸುತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಜಿಲ್ಲಾಡಳಿತ ಕಾರ್ಖಾನೆ ಗಳ ಕಾರ್ಯಕ್ಕೆ ನಿರ್ಬಂಧ ಹೇರಿರುವುದರಿಂದ ಕಾರ್ಖಾನೆಗಳ ಮಾಲೀಕರಿಗಿಂತ ಕಾರ್ಮಿಕರ ಭವಿಷ್ಯದ ಬಗ್ಗೆ ಚಿಂತೆ ಎದುರಾಗಿದೆ ಎಂದಿದ್ದಾರೆ.
ಈಗಾಗಲೇ ಕಾರ್ಖಾನೆಗಳಲ್ಲಿ ಉತ್ಪನ್ನಗೊಂಡಿರುವ ಉತ್ಪನ್ನಗಳನ್ನು ಒಪ್ಪಂದದಂತೆ ವಿದೇಶಗಳಿಗೆ ರಫ್ತು ಆಗದಿದ್ದರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಲ್ಲದೆ ರಾಜ್ಯ, ರಾಷ್ಟ್ರಗಳಿಗೆ ಆರ್ಥಿಕ ನಷ್ಟ ಹಾಗೂ ವಿದೇಶಿ ವಿನಿಮಯದ ಕೊರತೆ ಸಂಭವಿಸಲಿದೆ. ಇವೆಲ್ಲವನ್ನು ಜಿಲ್ಲಾಡಳಿತ ಮನಗಾಣಬೇಕು ಎಂದಿದ್ದಾರೆ.

ಕಳೆದ ವರ್ಷವೂ ಕೂಡಾ ಕೋವಿಡ್ ಮಹಾಮಾರಿ ವ್ಯಾಪಿಸಿತ್ತು. ಆ ಸಂದರ್ಭದಲ್ಲಿಯೂ ಕೈಗಾರಿಕೆಗಳ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕೈಗೊಂಡು ತಮ್ಮ ಕಾರ್ಖಾನೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಯಾರೊಬ್ಬ ಕಾರ್ಮಿಕರಾಗಲೀ, ಸಿಬ್ಬಂದಿಗಾಗಲೀ ಕೊರೋನಾ ಸೋಂಕು ಬಾರದ ಹಾಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಆದರೂ ಸಹ ಜಿಲ್ಲಾಡಳಿತ ಕಾರ್ಖಾನೆಗಳನ್ನು ಬಂದ್ ಮಾಡುವಂತೆ ಸೂಚಿಸಿರುವುದು ಸರಿಯಲ್ಲ. ಇದನ್ನೇ ನಂಬಿ ಜೀವನ ನಡೆಸುತ್ತಿರುವ ಕಾರ್ಮಿಕರ ಹಾಗೂ ಸಿಬ್ಬಂದಿಯ ಜೀವನದ ಹಿತ ದೃಷ್ಟಿಯಿಂದ ಕಾರ್ಖಾನೆಗಳ ಆರಂಭಕ್ಕೆ ತಕ್ಷಣ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















