ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಳ್ಳುವ ಕಟ್ಟುನಿಟ್ಟಿನ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗಾಗಲೇ ಅದು ರೆಡ್ ಜೋನ್‌ನಲ್ಲಿದೆ. ಸರ್ಕಾರ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದ್ದು, ವಾರಾಂತ್ಯದ ಕರ್ಫ್ಯೂ ಜಾರಿಗೆ ತರಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಒಂದು ಮತ್ತು ಎರಡನೆಯ ಅಲೆಯಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಹಲವರನ್ನು ಕಳೆದುಕೊಂಡಿದ್ದೇವೆ. ಅಂತಹ ಪರಿಸ್ಥಿತಿ ಮರುಕಳಿಸುವುದು ಬೇಡ. ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ತಾವೇ ಗಮನಹರಿಸಿ ಜವಾಬ್ಧಾರಿಯಿಂದ ನಡೆದುಕೊಳ್ಳುವುದರಿಂದ ಕೊರೋನಾ ನಿಯಂತ್ರಿಸಲು ಸಾಧ್ಯ ಎಂದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂಬ ನಿರ್ಲಕ್ಷ್ಯ ಭಾವ ಸಲ್ಲದು. ತಜ್ಞರ ವರದಿಯಂತೆಯೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಅದನ್ನು ಅನುಸರಿಸುವುದು ಪ್ರತಿಯೊಬ್ಬರ ಕರ್ತವ್ಯ. ಇದರ ಹಿಂದೆ ಯಾವುದೇ ದುರದ್ದೇಶವಿಲ್ಲ ಎಂದರು.
ಮತಾಂತರ ನಿಷೇಧ ಕಾಯ್ದೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸದನದಲ್ಲಿ ಇದನ್ನು ಮಂಡಿಸಿ ಜಾರಿಗೆ ತರಲಾಗುವುದು. ಬೆಳಗಾವಿ ಅಧಿವೇಶನದ ಪರಿಷತ್‌ನಲ್ಲಿ ನಮ್ಮ ಸಂಖ್ಯೆ ಕಡಿಮೆ ಇದ್ದ ಕಾರಣ ಬಹುಮತ ಸಿಗಲಾರದು ಎಂಬ ದೃಷ್ಠಿಯಿಂದ ಅದನ್ನು ಮಂಡಿಸಲು ಆಗಲಿಲ್ಲ. ಈಗ ಆ ತೊಂದರೆ ಇಲ್ಲ. ನಮಗೆ ಪೂರ್ಣ ಬಹುಮತ ಇರುವುದರಿಂದ ಇದರಲ್ಲಿ ಗೆಲ್ಲುತ್ತೇವೆ. ಯಾವುದೇ ವೈಫಲ್ಯ ಆಗಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post