ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಅನ್ಯ ಕೋಮಿನ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಶಾಲೆ/ಕಾಲೇಜುಗಳಿಗೆ ಹಾಜರಾಗುವುದಾಗಿ ಪಟ್ಟು ಹಿಡಿದಿದ್ದು, ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಸರಕಾರಿ ಶಾಲೆ ಎಂಬುದು ಸಮಾಜದಲ್ಲಿ ವಿದ್ಯಾದಾನದ ಕೇಂದ್ರವಾಗಿದ್ದು, ಅಲ್ಲಿ ಮಕ್ಕಳು ಜಾತಿ, ಮತ, ಪಂಥ, ವರ್ಗಭೇದವಿಲ್ಲದೇ ಸಾಮರಸ್ಯದಿಂದ ಕುಳಿತುಕೊಂಡು ಜ್ಞಾನಾರ್ಜನೆ ಮಾಡಲಿ ಎಂದು ಸಮವಸ್ತ್ರದ ಶಿಸ್ತನ್ನು ತರಲಾಗಿದೆ ಇದನ್ನು ಗಮನದಲ್ಲಿಟ್ಟು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.
ಮೊದಲು ಭಾರತೀಯ ಸಂಸ್ಕೃತಿಯ ವಿದ್ಯಾದೇವತೆ ಸರಸ್ವತಿ ಪೂಜೆಯನ್ನು ಸೆಕ್ಯುಲರಿಸಂನ ಹೆಸರಿನಲ್ಲಿ ಈಗಾಗಲೇ ನಿಲ್ಲಿಸಲಾಗಿದ್ದು, ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಶಾಲೆಯಲ್ಲಿ ಮಕ್ಕಳಿಗೆ ಮತಾಧಾರಿತ ತಾರತಮ್ಯ ಮೂಡುವಂತಹ ತೊಡುಗೆಗಳಿಗೆ ಅವಕಾಶ ನೀಡುವುದು ಗಾಯದ ಮೇಲೆ ಉಪ್ಪನ್ನು ಸವರಿದಂತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.
ಹಿಜಾಬ್ ಧರಿಸುವುದು ಸಂವಿಧಾನ ನೀಡಿದ ಧಾರ್ಮಿಕ ಹಕ್ಕು ಎಂದು ಪ್ರತಿಪಾದನೆ ನಡೆಯುತ್ತಿದೆ. ಹಾಗೆ ಹೇಳುವಾಗ ಅದೇ ಸಂವಿಧಾನ ಭಾರತೀಯರೆಲ್ಲರಿಗೆ ಸಮಾನತೆಯನ್ನೂ ಪಾಲಿಸಲು ಹೇಳಿರುವುದನ್ನು ಉದ್ದೇಶಪೂರ್ವಕವಾಗಿ ಮರೆಯಲಾಗುತ್ತದೆ. ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕನ್ನು ದುರುಪಯೋಗ ಮಾಡಿಕೊಂಡು ಸರ್ಕಾರಿ ಶಾಲಾ/ಕಾಲೇಜುಗಳಲ್ಲಿ ಮತೀಯ ಪ್ರತ್ಯೇಕತೆಯನ್ನು ಎತ್ತಿಹಿಡಿಯುವ ಪ್ರಯತ್ನದ ಹಿಂದೆ ಮತಾಂಧ ಜಿಹಾದಿ ಮಾನಸಿಕತೆಯ ಶಕ್ತಿಗಳಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದೆ.
ಅನ್ಯ ಕೋಮಿನ ಮಕ್ಕಳು ಹಿಜಬ್ ಧರಿಸಿ ಬರುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಹಿಂದು ವಿದ್ಯಾರ್ಥಿಗಳು ಕೆಲವು ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಿ ಬರುತ್ತಿರುವುದು ಸುದ್ದಿಯಾಗುತ್ತಿದೆ. ಇದು ನಾಳೆ ಮುಂದುವರಿದ ಎಲ್ಲಾ ಕೋಮಿನ ವಿದ್ಯಾರ್ಥಿಗಳು ಅವರವರ ಸಾಂಪ್ರಧಾಯಿಕ ಉಡುಪು ಧರಿಸಿ ಕಾಲೇಜುಗಳಿಗೆ ಬಂದರೆ ಶೈಕ್ಷಣಿಕ ವಾತಾವರಣ ಸಂಪೂರ್ಣ ಹದಗೆಡುತ್ತದೆ. ಶಾಲಾ ಕಾಲೇಜುಗಳು ಮಕ್ಕಳ ಮನಸ್ಸಿನಲ್ಲಿ ಸಮಾನತೆಯ ಭಾವನೆ ಬೆಳೆಸಬೇಕೆ ಹೊರತು ಪ್ರತ್ಯೇಕತೆಯ ಮಾನಸಿಕತೆಯನ್ನಲ್ಲ ಎನ್ನುವುದು ವೇದಿಕೆಯ ಸ್ವ ಅಭಿಪ್ರಾಯ ಎಂದು ತಿಳಿಸಿದೆ.
ಆದ್ದರಿಂದ ಸಮಾಜದ ಶಾಂತಿಯ ಕಳಕಳಿಯುಳ್ಳ ಸರಕಾರ ಇಂತಹ ಗೊಂದಲಕಾರಿ ಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆಶಿಸುತ್ತೇವೆ. ಒಂದು ವೇಳೆ ಹಾಗೇನಾದರೂ ಅವಕಾಶ ನೀಡಿದ್ದೇ ಆದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ವೇದಿಕೆಯು ಅದರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸುತ್ತಿದ್ದೇವೆ. ಆದ್ದರಿಂದ ತಾವು ಅಂತಹ ಯಾವುದೇ ಅಪಸವ್ಯಗಳಿಗೆ ಅವಕಾಶ ನೀಡಬಾರದೆಂದು ವೇದಿಕೆ ಒತ್ತಾಯಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post