ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿತ್ಯವೂ ತ್ಯಾಜ್ಯ, ಕೊಳಚೆ ಸೇರುವ ಮೂಲಕ ತುಂಗಾ ನದಿ ಅಪವಿತ್ರವಾಗಿದ್ದು, ಜೀವಜಲ ಸಂರಕ್ಷಣೆ ಮಾಡುವ ಕೆಲಸವನ್ನು ಎಲ್ಲರೂ ಒಂದಾಗಿ ಮಾಡೋಣ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ Dr. Dhananjaya Sarji ಕರೆ ನೀಡಿದರು.
ನಗರದ ಎಬಿವಿಪಿ ಕಾರ್ಯ್ಲಯದಲ್ಲಿ ಮಂಗಳವಾರ ಸಂಜೆ ಗಂಗಾನದಿ ಸಂವಾದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ 11 ಮಂದಿಯ ತಂಡದ ಅನುಭವ ಹಂಚಿಕೊಳ್ಳುವ ಸಲುವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ಪರಿಸರಾಸಕ್ತರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಂಗಾನದಿ ಸಂವಾದ ಪಾದಯಾತ್ರೆಯ ತಂಡದ ಸದಸ್ಯರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಗಂಗಾ ಸ್ನಾನ, ತುಂಗಾ ಸ್ನಾನ ಎಂಬ ಮಾತಿದೆ. ಆದರೆ, ತುಂಗೆಯ ನೀರು ಎಷ್ಟೊಂದು ಮಲಿನಗೊಂಡಿದೆಯೆಂದರೆ ಕುಡಿಯಲು ಅಯೋಗ್ಯವಾಗಿದೆ, ಅಷ್ಟೇ ಅಲ್ಲ ಮಲಿನಗೊಂಡಿರುವ ನೀರನ್ನೇ ದೇವರಿಗೆ ಅಭಿಷೇಕಕ್ಕೆ ಬಳಸುವಂತಹ ದುಸ್ಥಿತಿಗೆ ಬಂದಿದೆ. ಜೀವಜಲ ತುಂಗೆಯ ಒಡಲಾಳಕ್ಕೆ ಅಪಾರ ಪ್ರಮಾಣದ ಕೊಳಚೆ ಹಾಗೂ ತ್ಯಾಜ್ಯ ಸೇರುವುದನ್ನು ತಡೆಗಟ್ಟದಿದ್ದರೆ ಭವಿಷ್ಯದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಲಿದೆ. ಈ ನೀರನ್ನು ಕುಡಿಯುವುದರಿಂದ ಆರೋಗ್ಯ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಜನಸಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಹಾಗು ಪರಿಸರ ಪ್ರೇಮಿಗಳೆಲ್ಲರೂ ಸೇರಿ ಪವಿತ್ರ ತುಂಗಾ ನದಿಯ ಉಳಿವಿಗಾಗಿ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ನಮ್ಮ ದೇಶದ ನದಿ ನೀರಿನ ಕುರಿತು ವಿಶ್ವದಲ್ಲಿ 122 ನೇ ಶ್ರೇಣಿಯಿದೆ. ವರ್ಷಕ್ಕೆ 3 ಕೋಟಿ 67 ಲಕ್ಷ ಜನರಿಗೆ ನೀರಿನ ಆರೋಗ್ಯ ಹದಗೆಡುತ್ತಿದೆ. ಅಲ್ಲದೇ 10 ರಿಂದ 15 ಲಕ್ಷ ಮಕ್ಕಳು ಪ್ರಾಣ ಕಳೆದುಕೊಳ್ಳುವದಂತಾಗಿದೆ. ಒಂದು ಕಾಲದಲ್ಲಿ ತುಂಗಾ ನೀರನ್ನು ಸೇವಿಸಿದರೆ ಕಾಯಿಲೆಗಳು ವಾಸಿಯಾಗುತ್ತಿದ್ದವು ಎಂದು ನಂಬಲಾಗಿತ್ತು. ಆದರಿಂದು ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಕೋಲಿಫಾಮ್ ಬ್ಯಾಕ್ಟೀರಿಯಾಸ್ ನಮ್ಮ ದೇಹದಲ್ಲಿ ಸಾಮಾನ್ಯವಾಗಿ 5 ರಿಂದ 15 ಸಾವಿರದವರೆಗೆ ಇರಬೇಕಿತ್ತು, ಅದೀಗ ಕೇವಲ ಐದು ಸಾವಿರದಷ್ಟಿದೆ. ಇದರಿಂದ ತುಂಗೆಯ ನೀರು ಎಷ್ಟು ಅಶುದ್ಧವಾಗಿದೆ ಎಂಬುದು ತಿಳಿಯುತ್ತದೆ. ಪವಿತ್ರವಾಗಿದ್ದ ತುಂಗೆಯ ಒಡಲಿಗೆ ನಿತ್ಯ ನಗರದ ಸುಮಾರು 15 ಕಡೆಗಳಿಂದ ಕೊಳಚೆ, ತ್ಯಾಜ್ಯ ಬಂದು ಸೇರುತ್ತಿದೆ. ನಗರದಲ್ಲಿ ಯುಜಿಸಿಡಿಯಿಂದ, ಚರಂಡಿಗಳಿಂದ ನೇರವಾಗಿ ಕೊಳಚೆ ನೀರು ತುಂಗೆ ಸೇರುತ್ತಿದೆ. ಈ ಬಗ್ಗೆ ಬರೀ ಸರಕಾರಗಳು ಮಾತ್ರ ಯೋಜನೆ ರೂಪಿಸಿದರೆ ಸಾಲದು, ನಗರ ವಾಸಿಗಳಾದ ನಾವು, ನೀವುಗಳೆಲ್ಲರೂ ಎಚ್ಚೆತ್ತುಕೊಂಡು ಗಾಜನೂರು ಜಲಾಶಯದಿಂದ ಹಿಡಿದು ಹೊನ್ನಾಳಿವರೆಗೆ ನದಿಯ ಅಕ್ಕಪಕ್ಕದ ಗ್ರಾಮಗಳ ಜನರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಟ್ಟು ಮಾಡಿಕೊಂಡು ಮುಂದಿನ ದಿನಗಳಲ್ಲಿ ಪೈಲಟ್ ಯೋಜನೆ ಕೈಗೊಳ್ಳಬೇಕಿದೆ ಎಂದರು.
ಪ್ರೊ.ಬಿ.ಎಂ.ಕುಮಾರಸ್ವಾಮಿ, ಪ್ರೊ.ಎ.ಎಸ್.ಚಂದ್ರಶೇಖರ್, ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಶ್ರೀಧರ್ ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















