ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯೋಗ ಶಾಸ್ತ್ರದ ಕ್ರಮಬದ್ಧ ಅವಲೋಕನದೊಂದಿಗೆ ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ಶರೀರದಲ್ಲಿನ ಶಕ್ತಿ ಉದ್ಧಿಪನಗೊಳಿಸಿ, ಮನಸ್ಸನ್ನು ಸದೃಢ, ಸಂತುಲಿತ ಮಾಡಿಕೊಳ್ಳಬಹುದು ಎಂದು ಯೋಗ ಶಿಕ್ಷಕರು, ಯೋಗ Yoga ತಜ್ಞರಾದ ಡಾ. ಬಾ.ಸು. ಅರವಿಂದ ಹೇಳಿದರು.
ಮನ್ವಂತರ ಮಹಿಳಾ ಮಂಡಳ, ಶಿವಮೊಗ್ಗದ ವತಿಯಿಂದ ರವಿ ಮತ್ತು ರಾಜೇಶ್ವರಿ ಅಕ್ಕನವರ ಧ್ಯಾನ ಕೇಂದ್ರದಲ್ಲಿ ಸ್ತ್ರೀಯರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಯೋಗಾಸನಗಳು ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಶಾಸ್ತ್ರದ ವಿವರವಿರುವ ಪುಸ್ತಕಗಳು ನಿರ್ಜೀವ ಗ್ರಂಥಗಳಲ್ಲ. ಅವು ಜೀವಂತ ಶಿಕ್ಷಕ. ಹಜ್ಜೆ ಹೆಜ್ಜೆಗೂ ಎಚ್ಚರಿಸುವ, ಆಲಸ್ಯವನ್ನು ದೂರಮಾಡುವ ಹೊತ್ತಿಗೆಗಳು. ಸರಳ, ಸುಲಭ ಯೋಗಾಸನಗಳೊಂದಿಗೆ, ಸೂರ್ಯ ನಮಸ್ಕಾರಗಳೊಂದಿಗೆ ದೇಹದ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.
ಮಹಿಳೆ ಮುಟ್ಟಿನ ದಿನಗಳಲ್ಲಿ ಶೀರ್ಷಾಸನ, ಸರ್ವಾಂಗಾಸನ ಮಾಡಬಾರದು, ಆದರೆ ಮುಂಬಾಗುವ ಆಸನಗಳನ್ನು ಮಾಡಬಹುದು. ಮುಟ್ಟಿನದೋಷ ಇರುವವರು ಜಾನು ಶೀರ್ಷಾಸನ, ಉಪವಿಷ್ಟ ಕೋನಾಸನ, ಬದ್ಧಕೋನಾಸನ, ವಿರಾಸನಗಳನ್ನು ಮಾಡಿ ಮುಟ್ಟಿನ ದೋಷ ಪರಿಹರಿಸಿಕೊಳ್ಳಬಹುದು. ಗರ್ಭಾಶಯದ ಸುಸ್ಥಿತಿ ಕಾಪಾಡುವ ಬಗ್ಗೆ, ಹೊಟ್ಟೆ ಉಬ್ಬರ, ಬೆನ್ನು, ಕತ್ತು ನೋವು ಹಾಗೂ ಇನ್ನಿತರ ತೊಂದರೆಗಳಿಗೆ ಮಾಡಬೇಕಾದ ಯೋಗಾಭ್ಯಾಸದ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ನೆರೆದಿದ್ದ ಮನ್ವಂತರದ ಮಹಿಳೆಯರಿಗೆ ಮಾಹಿತಿ ನೀಡಿದರು.
Also read: ಕೊಡಗು: ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಲಘು ಭೂಕಂಪನ!
ಮನ್ವಂತರ ಮ.ಮ. ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ರಿ ಮಾತನಾಡಿ, ಭಾರತದ ಪ್ರಾಚೀನ ಯೋಗ ಶಾಸ್ತ್ರಕ್ಕೆ ವಿಶ್ವ ಮಾನ್ಯತೆ ಬಂದಿರುವುದಕ್ಕೆ ಪ್ರತಿಯೊಬ್ಬ ಭಾರತೀಯರೂ ಹೆಮ್ಮ ಪಡಲೇಬೇಕು. ಆಹಾರ-ವಿಹಾರ, ಆಚಾರ-ವಿಚಾರಗಳಲ್ಲಿ ಭಾರತೀಯ ಜೀವನ ಶೈಲಿಯಲ್ಲಿ, ಯೋಜನೆಗಳಲ್ಲಿಯೇ ಯೋಗ ಮಾರ್ಗವಿದೆ. ಆದರೆ, ಈ ಎಲ್ಲ ಮಾರ್ಗಗಳಿಂದ ನಾವುಗಳು ಹೊರಬಂದಿರುವ ಪರಿಣಾಮವೇ ಶಾರೀರಿಕ, ಮಾನಸಿಕ ಸಮಸ್ಯೆಗಳಿಗೆ ಕಾರಣವೂ ಅಗಿರಬಹುದು. ಒತ್ತಡ ಭರಿತ ಆಧುನಿಕ ಜೀವನ ಶೈಲಿಯಿಂದ ಬಳಲುವ ವ್ಯಕ್ತಿಗಳಿಗೆ ನಿಜವಾದ ಶಾರೀರಿಕ, ಮಾನಸಿಕ ನೆಮ್ಮದಿ ನೀಡುವ ಯೋಗ ಶಾಸ್ತ್ರ ಕಲಿಕೆ ಅತ್ಯಗತ್ಯ. ಇಂದು ಹೇರಳ ಹಣ ಹಾಗೂ ಉಪಭೋಗ ಸಾಮಗ್ರಿಗಳಿದ್ದರೂ ಖಾಯಿಲೆಗಳೂ ಹೊಸ ಹೊಸ ರೂಪದಲ್ಲಿ ಹೊರಬರುತ್ತಿರುವುದು ವಾಸ್ತವ ಎಂದು ಅಭಿಪ್ರಾಯಪಟ್ಟರು.
ಅಂತರರಾಷ್ಟ್ರೀಯ ಯೋಗ ದಿನ ಎಂಬ ಶೀರ್ಷಿಕೆಯೇ ರೋಮಾಂಚನ ಉಂಟುಮಾಡುವಂತದ್ದು. ಭಾರತದ ಸನಾತನ ಯೋಗ ಶಾಸ್ತ್ರ ವಿಶ್ವ ಪ್ರಸಿದ್ಧಿ ಪಡೆಯಲು ಇಂದಿಗೂ ಲಭ್ಯವಿರುವ ಪುರಾತನ ಯೋಗ ಶಾಸ್ತ್ರದ ಸಾಹಿತ್ಯ ಪುಸ್ತಕಗಳು ಹಾಗೂ ಅವುಗಳ ಆಧಾರದ ಮೇಲೆ ಮುನ್ನಡೆದಿರುವ ಯೋಗಾಭ್ಯಾಸಗಳು, ಯೋಗ ಸಿದ್ದಿಗಳು ಕಾರಣವೆಂದು ಜನಸಾಮಾನ್ಯರಿಂದ ಹಿಡಿದು, ಗಗನಗಾಮಿಗಳವರೆಗೆ ಹಾಗೂ ಎಲ್ಲಾ ಜನವರ್ಗದಲ್ಲೂ ಯೋಗಶಾಸ್ತ್ರ ಮಾನ್ಯತೆಯನ್ನು ಪಡೆದಿದೆ. ಯೋಗಾಭ್ಯಾಸ ಶರೀರದ ಆರೋಗ್ಯಕ್ಕೆ ಮಾತ್ರ ಸಾಧನವಲ್ಲ ಮಾನಸಿಕ ಸ್ವಾಸ್ಥ್ಯ, ಬುದ್ಧಿಯ ಪ್ರಖರತೆ, ಆಧ್ಯಾತ್ಮಿಕ ಪ್ರಗತಿಗಳಿಗೂ ದಾರಿಮಾಡಿಕೊಡುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಅತೀ ಹೆಚ್ಚು ದೈಹಿಕ, ಮಾನಸಿಕ ಒತ್ತಡಗಳಿಂದ ಬಳಲುತ್ತಿರುವವಳು ಮಹಿಳೆಯಾಗಿದ್ದಾಳೆ ಇವುಗಳಿಂದ ಹೊರಬಂದು ನಿರಾಳ, ನಿರ್ಮಲ ಮನಸ್ಸನ್ನು ತನ್ನದಾಗಿಸಿಕೊಳ್ಳಲು ಯೋಗ ಶಾಸ್ತ್ರದ ಅಳವಡಿಕೆ ಅತ್ಯಂತ ಪ್ರಯೋಜನಕಾರಿ ಎಂದರು.
ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಬಾ.ಸು. ಅರವಿಂದರವರ ಯೋಗ ಸಾಧನೆಯನ್ನು ಪರಿಗಣಿಸಿ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾದ ಸಂಭ್ರಮಕ್ಕೆ ಡಾ.: ಬಾ.ಸು. ಅರವಿಂದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ರಾಜೇಶ್ವರಿ ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಿದ್ದರು. ರವಿ, ಕಾರ್ಯದರ್ಶಿ ಸುಲೋಚನಾಮೂರ್ತಿ, ಮನ್ವಂತರ ಮಹಿಳಾ ಮಂಡಳದ ಗೋದಾವರಿ ತಂಡದ ನಾಯಕಿ ವಿಜಯಾ, ಶಿವು ಹಾಗೂ ಸದಸ್ಯರಾದ ಮಧುರಾ ಮಹೇಶ್, ಶ್ವೇತಾ ಸಂಪತ್, ಅಶ್ವಿನಿ ಜಾದವ್, ಗೀತ, ಸ್ವಪ್ನ ಸುರೇಶ್, ಉಷಾ ಸುದರ್ಶನ್ ಉಪಸ್ಥಿತರಿದ್ದರು.
ವಿಜಯಾಶಿವು ನಿರೂಪಿಸಿ, ಶ್ವೇತಾ ಸಂಪತ್ ಸ್ವಾಗತಿಸಿ, ಅಶ್ವಿನಿ ಜಾದವ್ ವಂದನಾರ್ಪಣೆ ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















