ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ ರಾಜ್ಯ ಸರ್ಕಾರದ ವಿರುದ್ಧ ಇಂದು ರಾಜ್ಯ ಬಿಜೆಪಿ ಕರೆಯ ಮೇರೆಗೆ ಬಿಜೆಪಿ ನಗರ ಸಮಿತಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಗಂಟೆಗೂ ಅಧಿಕ ಕಾಲ ಸಂಚಾರಕ್ಕೆ ಭಾರಿ ತೊಂದರೆಯಾಗಿ ಪೊಲೀಸರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಪ್ರತಿಭಟನೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ #MLA S N Channabasappa ಮಾತನಾಡಿ, ಗ್ಯಾರಂಟಿಗಳ ಮೂಲಕ ಹಲವಾರು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದೆ. ಕಳೆದ ಮೂರು ತಿಂಗಳಿಂದ ಗ್ಯಾರಂಟಿ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಬರುತ್ತಿಲ್ಲ. ಗಾಯದ ಮೇಲೆ ಬರೆ ಎಂಬಂತೆ ಸುಳ್ಳು ಭರವಸೆ ನೀಡಿದ ಸರ್ಕಾರ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದೆ. ಇದರಿಂದ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದ್ದು, ಮತ್ತೆ ಈಗ ಬಸ್ ಪ್ರಯಾಣದರ ಏರಿಕೆ ಮಾಡಲು ಮುಂದಾಗಿದೆ ಎಂದರು.
ಈ ಸರ್ಕಾರ ನಾಚಿಕೆ, ಮಾನ, ಮರ್ಯಾದೆ ಬಿಟ್ಟಿದ್ದು, ನುಡಿದಂತೆ ನಡೆಯುತ್ತಿಲ್ಲ. ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಿಂದುಳಿದ ವರ್ಗಗಳ ಅನುದಾನಗಳನ್ನು ಬಳಸಿಕೊಂಡಿದೆ. ಅನೇಕ ಸರ್ಕಾರಿ ನೌಕರರಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ದೊರೆಯುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೂ ಗೌರವಧನ ಸಿಗುತ್ತಿಲ್ಲ. ಒಂದು ಕಡೆಯಿಂದ ಗ್ಯಾರಂಟಿ ಘೋಷಿಸಿ ಇನ್ನೊಂದು ಕಡೆಯಿಂದ ಬಡವರ ಮೇಲೆ ಬೆಲೆ ಏರಿಕೆಯ ಅಸ್ತ್ರ ಪ್ರಯೋಗಿಸಿದೆ ಎಂದು ದೂರಿದರು.
ಸರ್ಕಾರದ ಬೊಕ್ಕಸ ತುಂಬಲು ಮತ್ತು ಗ್ಯಾರಂಟಿಗಾಗಿ ಹಣ ಹೊಂದಿಸಲು ಅನೇಕ ಸರ್ಕಾರಿ ಶುಲ್ಕಗಳನ್ನು ಹತ್ತು ಪಟ್ಟು ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ದಿನ ನಿತ್ಯ ವಸ್ತುಗಳ ಬೆಲೆ ಏರಿಸಿ ಸರ್ಕಾರ ಜನರನ್ನು ದಿವಾಳಿಯಾಗಿಸಲು ಹೊರಟಿದೆ. ಕೂಡಲೇ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
Also read: ಪರಪ್ಪನ ಅಗ್ರಹಾರಕ್ಕೆ ಪವಿತ್ರಾ ಗೌಡ | ದರ್ಶನ್ ಸೇರಿ ಉಳಿದವರು ಕಥೆಯೇನು?
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಸುಮಾರು ಒಂದು ಗಂಟೆ ಕಾಲ ಅಶೋಕ ವೃತ್ತದಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಒಬ್ಬರೇ ಮಹಿಳಾ ಪೊಲೀಸ್ ಇದ್ದ ಕಾರಣ ವಶಕ್ಕೆ ಪಡೆಯಲು ಪೊಲೀಸರು ಹಿಂದೇಟು ಹಾಕಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ಜ್ಞಾನೇಶ್ವರ್, ಸಿ.ಹೆಚ್. ಅನಿತಾ ರವಿಶಂಕರ್, ಸುರೇಖಾ ಮುರಳೀಧರ್, ರಾಹುಲ್ ಬಿದರೆ, ಮಾಲತೇಶ್, ಮಂಜುನಾಥ್, ವಿಶ್ವನಾಥ್, ದಿನೇಶ್, ಕಿರಣ್, ವಿಕ್ರಂ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post