ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರಿ ನೌಕರರ ಶ್ರಮದಿಂದ ಅಭಿವೃದ್ಧಿ ಯೋಜನೆಗಳ ಯಶಸ್ಸಿಗೆ ಸಾಧ್ಯವಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಅವರು ಇಂದು ನಗರದ ಎನ್‌ಇಎಸ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಜಿಲ್ಲಾ ಶಾಖೆ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ತಾಲ್ಲೂಕು ಸಮ್ಮೇಳನ, ನೌಕರರಿಗೆ ಪ್ರಜಾಸ್ನೇಹಿ ಆಡಳಿತ ಕಾರ್ಯಗಾರ, ನೌಕರರ ಫ್ಯಾಮಿಲಿ ಮಾರ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿವಮೊಗ್ಗದ ಸರ್ಕಾರಿ ನೌಕರರು ಪುಣ್ಯವಂತರು ಇಲ್ಲಿ ಯಾವ ರಾಜಕಾರಣಿಯ ಹಸ್ತಕ್ಷೇಪವಿಲ್ಲ. ನೌಕರರ ಎಲ್ಲಾ ಬೇಡಿಕೆಗಳನ್ನು ಅವರು ಕೇಳುವ ಮುನ್ನವೇ ರಾಜ್ಯಾಧ್ಯಕ್ಷ ಷಡಕ್ಷರಿಯವರು ಈಡೇರಿಸಿರುತ್ತಾರೆ. ಕರ್ನಾಟಕ ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದ್ದು, ಅಭಿವೃದ್ಧಿಯಲ್ಲೂ ಕೂಡ ಮುಂಚೂಣಿಯಲ್ಲಿದೆ. ಪ್ರಧಾನಿಯವರು ಕೂಡ ರಾಜ್ಯದ ಅಭಿವೃದ್ಧಿಯನ್ನು ಹೊಗಳಿದ್ದಾರೆ. ಅದಕ್ಕೆ ಕಾರಣ ಸರ್ಕಾರಿ ನೌಕರರು ಎಂದರು.
ಸಂಸದ ಬಿ.ವೈ.ರಾಘವೇಂದ್ರ MP B Y Raghavendra ಮಾತನಾಡಿ, ಬಿಜೆಪಿ ಸರ್ಕಾರ ಸರ್ಕಾರಿ ನೌಕರರಿಗೆ ಏನೆಲ್ಲಾ ಸೌಲಭ್ಯ ನೀಡಿದೆ ಎಂಬುದನ್ನು ರಾಜ್ಯಾಧ್ಯಕ್ಷರು ಒಂದು ಗಂಟೆಯ ಭಾಷಣವನ್ನು 15 ನಿಮಿಷದಲ್ಲೇ ಹೇಳಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಈ ವರ್ಷದಲ್ಲಿ ಇನ್ನು 25 ವರ್ಷಗಳ ಮುಂದಿನ ದೃಷ್ಟಿಯನ್ನಿಟ್ಟುಕೊಂಡು ದೇಶ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವದ್ದು, ನಿವೆಲ್ಲಾ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.
ಪ್ರಧಾನಿ ಮೋದಿಯವರು ಹೆತ್ತ ತಾಯಿ ನಿಧನರಾದ ಸಂದರ್ಭದಲ್ಲೂ ಕೂಡ ತನ್ನ ಕಾರ್ಯವನ್ನು ಮುಗಿಸಿ ಕೆಲವೇ ಗಂಟೆಗಳಲ್ಲಿ ದೇಶದ ಸೇವೆಗೆ ವಾಪಾಸ್ಸಾಗುವುದರ ಮೂಲಕ ಒಬ್ಬ ಆದರ್ಶ ರೋಲ್‌ಮಾಡೆಲ್ ಆಗಿದ್ದಾರೆ. ನಮಗೆ ಕರ್ತವ್ಯದ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಆಸೆಗಳನ್ನು ಪೂರೈಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
Also read: ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ: ಸಾರ್ವಜನಿಕರಿಂದ ಅಪಾರ ಮೆಚ್ಚುಗೆ
ಶಿವಮೊಗ್ಗ ಜಿಲ್ಲೆ ಟೂರಿಸಂ ಸ್ಪಾಟ್ ಆಗಲಿದ್ದು, ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಮಂತ್ರಿಗಳಿಗೆ ಭೇಟಿಯಾಗಿ ದೇಶದ ಎಲ್ಲಾ ಪ್ರವಾಸಿ ಗೈಡ್‌ಗಳನ್ನು ಶಿವಮೊಗ್ಗಕ್ಕೆ ಕರೆಸಿ ಇಲ್ಲಿಯ 30ಕ್ಕೂ ಹೆಚ್ಚು ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ ಕಾರ್ಯಾಗಾರ ಏರ್ಪಡಿಸಿ ದೇಶದ ಗಮನ ಸೆಳೆಯುವ ಕಾರ್ಯ ಮಾಡಲು ವಿನಂತಿಸಿಕೊಂಡಿದ್ದೇನೆ. ಅವರು ಅದಕ್ಕೆ ಒಪ್ಪಿದ್ದಾರೆ. ಈಗಾಗಲೇ 250ಕೋಟಿ ರೂ. ವೆಚ್ಚದಲ್ಲಿ ಜೋಗ್‌ಫಾಲ್ಸ್ ಉನ್ನತೀಕರಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗ ರಾಣೆಬೆನ್ನೂರು ರೈಲ್ವೆ ಮಾರ್ಗ ಬಜೆಟ್‌ನಲ್ಲಿ 250ಕೋಟಿ ರೂ. ನಿಗದಿಪಡಿಸಲಾಗಿದೆ. ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ಈ ರೀತಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಶಿವಮೊಗ್ಗ ಜಿಲ್ಲೆ ದೇಶದ ಗಮನ ಸೆಳೆದಿದೆ. ಇದಕ್ಕೆ ಸರ್ಕಾರಿ ನೌಕರರ ಸಹಕಾರವು ಇದೆ ಎಂದರು.
ಮಾಜಿ ಜಿ.ಪಂ.ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ಜೇನುಗೂಡಿನಲ್ಲಿ ರಾಣಿ ಜೇನು ಇದ್ದಂತೆ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಎಲ್ಲರನ್ನೂ ಒಗ್ಗೂಡಿಸಿ ತಾಲ್ಲೂಕು ಮಟ್ಟದ ಸಮ್ಮೇಳನವನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಯೋಜಿಸಿರುವುದು ಅವರ ಮತ್ತು ನೌಕರರ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಕರೋನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಸರ್ಕಾರಿ ನೌಕರರು ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳು ನಿಮ್ಮೊಂದಿಗಿದ್ದಾರೆ ಎಂದರು.
ಶಾಸಕ ಭೋಜೆಗೌಡ ಮಾತನಾಡಿ, ಏನಾದರೂ ಆಗು ಮೊದಲು ಮಾನವನಾಗು ಎನ್ನುವಂತೆ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಮಾನವೀಯ ದೃಷ್ಟಿಯಿಂದ ಕೆಲಸಮಾಡಬೇಕಿದೆ. ನಮ್ಮ ನಡವಳಿಕೆಯಿಂದ ನಮಗೆ ಒಳ್ಳೆಯ ಹೆಸರು ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ತಮ್ಮ ಕೆಲಸವನ್ನು ಮಾಡಬೇಕು ಎಂದರು.
ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ಸರ್ಕಾರಿ ನೌಕರರ ಈ ಸಮಾರಂಭದಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಶಿಕ್ಷಕರ ಟೀಮ್ ಅನ್ನು ಷಡಕ್ಷರಿ ಯಾಕೆ ಕೈಬಿಟ್ಟಿದ್ದಾರೆ. ಬಹುಶಃ ಶಿಕ್ಷಕರಿಗೆ ತಾಳ್ಮೆ ಜಾಸ್ತಿ ಅದಕ್ಕೆ ಸುಮ್ಮನಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸರ್ಕಾರಿ ನೌಕರರು ನಗು ನಗುತ್ತಾ ಕಾರ್ಯನಿರ್ವಹಿಸಿ ತಮ್ಮ ಗುರಿಯನ್ನು ಮುಟ್ಟಬೇಕು ಎಂದರು.
ಈ ಸಂದರ್ಭದಲ್ಲಿ ಖ್ಯಾತ ಚಿಂತಕರಾದ ಡಾ.ಗುರುರಾಜ್ ಕರ್ಜಗಿ ಅವರಿಂದ ಪ್ರಜಾಸ್ನೇಹಿ ಆಡಳಿತ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಯಿತು. ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಅವರಿಂದ ಕೆಲಸದ ಒತ್ತಡಕ್ಕೆ ನಗೆ ಮದ್ದು ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ವಹಿಸಿದ್ದರು.
ಶಾಸಕ ಅಶೋಕ್‌ನಾಯ್ಕ್, ಶಿವಮೊಗ್ಗ ಜಿಲ್ಲಾ,ತಾಲ್ಲೂಕು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ ಬಿ. ಕೇಂದ್ರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post