ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೀನ ದುರ್ಬಲರಿಗೆ ಸಹಾಯ ಮಾಡುವುದು ನಿಜವಾದ ಸೇವೆ. ನನ್ನ ಸಾಮರ್ಥ್ಯವೇನು ಎಂಬುದನ್ನು ತಿಳಿದು ಅದನ್ನು ಬೆಳೆಸಿ ಪೋಷಿಸಿದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಹೆಚ್. ಎಮ್. ವಾಗ್ದೇವಿ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೆಂದ್ರ ನೆಹರು ಯುವ ಕೇಂದ್ರ ಶಿವಮೊಗ್ಗ, ರಾಷ್ಟ್ರೀಯ ಸೇವಾ ಯೋಜನೆ ಸಹ್ಯಾದ್ರಿ ವಿಜ್ಞಾನ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿರುವ ಸಾಧಕರ ಜೀವನಚರಿತ್ರೆಗಳನ್ನು ಓದಿ ಅವರಂತೆ ನಡೆಯಲು ತಿಳಿಸಿ, ಮೌಲ್ಯಧಾರಿತ ಜೀವನ ನಡೆಸಲು ಎನ್ಎಸ್ಎಸ್ ಸಹಕಾರಿಯಾಗಿದೆ ಎಂದು ತಿಳಿಸಿದರು.
ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಟಿ. ಮಂಜುನಾಥ ಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕುರಿತು ಮಕ್ಕಳಿಗೆ ನಮ್ಮ ಮುಂದಿರುವ ಸವಾಲುಗಳು ಮತ್ತು ಜವಾಬ್ದಾರಿಗಳನ್ನು ಅರಿತು ಸರ್ಕಾರದಿಂದ ಯುವಜನರಿಗೆ ಸಿಗುವಂತಹ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸಮರ್ಥವಾಗಿ ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಲು ಹಲವಾರು ಅವಕಾಶಗಳಿವೆ ಎಂಬುದನ್ನು ತಿಳಿಸಿದರು.
ಪರಿಸರ ವಿಜ್ಞಾನ ವಿಭಾಗ ಪರಿಸರ ಮುಖ್ಯಸ್ಥ ಡಾ. ನಾಗರಾಜ್ ಘನತ್ಯಾಜ್ಯ ನಿರ್ವಹಣೆಯಲ್ಲಿ ನಮ್ಮ ಪಾತ್ರ ಕುರಿತು ಉಪನ್ಯಾಸ ನೀಡಿದರು. ಘನತ್ಯಾಜ್ಯವನ್ನು ಸಂಗ್ರಹಿಸಿ, ಬೇರ್ಪಡಿಸಿ ಅದನ್ನು ಮಾರುಕಟ್ಟೆಗೆ ತಲುಪಿಸುವ ನಿಟ್ಟಿನಲ್ಲಿ ಹಲವಾರು ಅವಕಾಶಗಳು ಹೇಗಿವೆ ಎಂಬುದನ್ನು ವಿವರವಾಗಿ ತಿಳಿಸಿಕೊಟ್ಟರು. ಕಸದಿಂದ ರಸ ಹೇಗೆ ಮಾಡಬಹುದು ಈ ಘನತ್ಯಾಜ್ಯ ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡುವುದರ ಮೂಲಕ ನಾವು ಉದ್ಯಮಿಗಳಾಗಬಹುದು, ಈ ನಿಟ್ಟಿನಲ್ಲಿ ಯುವಕರು ಮುಂದೆ ಬಂದು ಪರಿಸರದ ಮೇಲೆ ಆಗುತ್ತಿರುವ ಒತ್ತಡಕ್ಕೆ ಪರಿಹಾರವನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ.ಕೆ. ವೀಣಾ ಮಾತನಾಡಿ, ನಂಬಿಕೆ ತುಂಬಾ ಶ್ರೇಷ್ಠವಾದದ್ದು ಹಾಗಾಗಿ ನಂಬಿಕೆಯಿಂದ ಎಲ್ಲ ಕೆಲಸಗಳನ್ನು ಮಾಡಿದಲ್ಲಿ ವಿಶ್ವಾಸವನ್ನು ಮತ್ತು ಯಶಸ್ಸನ್ನು ಗಳಿಸಬಹುದು. ಸದೃಢ ಸಮಾಜಕ್ಕೆ ಸದೃಢ ಮನಸ್ಸುಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಶುಭಾ ಮರವಂತೆ, ಡಾ. ವೆಂಕಟೇಶ್, ಡಾ. ನಾಗಾರ್ಜುನ, ಡಾ. ಪರಶುರಾಮ್ ಮತ್ತು ಎನ್ಎಸ್ಎಸ್ ಸ್ವಯಂಸೇವಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post