ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಿಲಿಟರಿ, ಐ.ಟಿ.ಬಿ.ಪಿ. ಸೇವೆಯಿಂದ ನಿವೃತ್ತಿ ಹೊಂದಿ ತಾಲೂಕಿನ ಬೀರನಕೆರೆ ತವರಿಗೆ ಆಗಮಿಸುತ್ತಿರುವ ಯೋಧ ಆರ್. ಕುಮಾರ್ ನಾಯ್ಕ್ ಅವರಿಗೆ ಬೀರನಕೆರೆ ಗ್ರಾಮಸ್ಥರು ಶಿವಮೊಗ್ಗ ನಗರದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಇವರು ಇಂಡೋ ಟಿಬಿಟಿಯನ್ ಬಾರ್ಡರ್ ಪೊಲೀಸ್ ನಲ್ಲಿ 21 ವರ್ಷ ಸೇವೆ ಸಲ್ಲಿಸಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರಿಕರ ರಕ್ಷಣೆಗೆ ಸೇವೆ ಸಲ್ಲಿಸಿ ತನ್ನ ವಸತಿ ಗೃಹಕ್ಕೆ ಆಗಮಿಸುವಾಗ ಯೋಧರಿದ್ದ ಬಸ್ 700 ಅಡಿ ಆಳಕ್ಕೆ ಬಿದ್ದು ಇಡೀ ದೇಶದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಅದೃಷ್ಟವಶಾತ್ ತಾಯಿ ಭಾರತಾಂಬೆಯ ಮತ್ತು ನನ್ನ ಹೆತ್ತ ತಾಯಿಯ ಆಶೀರ್ವಾದದಿಂದ ನಾನು ಬದುಕಿ ಬಂದಿದ್ದೆ ಒಂದು ಪವಾಡ. ನಾನು ಆಸ್ಪತ್ರೆಯಲ್ಲಿದ್ದಾಗ ಸ್ವತಃ ಗೃಹ ಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರು ಭೇಟಿ ನೀಡಿ ನನಗೆ ಬದುಕುವ ಉತ್ಸಾಹ, ಧೈರ್ಯ ತುಂಬಿದರು ಎಂದು ಅವರು ತಿಳಿಸಿದರು.
ಹರಿಯಾಣದಲ್ಲಿ ಒಂದು ವರ್ಷ ತರಬೇತಿ ಪಡೆದು ಅಲ್ಲಿಂದ ಚೈನಾ ಗಡಿಗಳಾದ ಉಧಂಪುರದಲ್ಲಿ 6 ತಿಂಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶದ ಗಡಿಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಗಾಯಾಳು ಆದ ಸಂದರ್ಭದಲ್ಲಿ ನನ್ನನ್ನು ತಮಿಳುನಾಡಿನ ಸೈನಿಕ ಕೇಂದ್ರದಲ್ಲಿ ದೈಹಿಕ ಶಿಕ್ಷಕನಾಗಿ 3.9 ವರ್ಷ ನೇಮಿಸಿದ್ದರು. ನನ್ನ ಅಣ್ಣನು ಕೂಡ ಮಿಲಿಟರಿ ಸೇವೆ ಮಾಡಿ ನಿವೃತ್ತರಾಗಿದ್ದಾರೆ. ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಿ ಆ ಸಂತೋಷವೇ ಬೇರೆ ಎಂದ ಅವರು ನನ್ನ ಸೇವಾವಧಿಯಲ್ಲಿ ದೇಶಕ್ಕಾಗಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ ಎಂದರು.
ಬೀರನಕೆರೆ ಗ್ರಾಮದ ಮುಖಂಡರಾದ ಬಸವರಾಜ್ ಮಾತನಾಡಿ, ಈ ಯೋಧನ ಮನೆಯ ಮೂರೂ ಜನ ಯುವಕರು ರಾಷ್ಟ್ರ ಸೇವೆ ಮಾಡುತ್ತಿದ್ದು ಇಡೀ ಗ್ರಾಮಕ್ಕೆ ಇವರ ಆಗಮನ ಸಂತೋಷ ತಂದಿದೆ. ಇಡೀ ಗ್ರಾಮದ ಜನರು ಹಬ್ಬದ ವಾತಾವರಣದಲ್ಲಿದ್ದಾರೆ. ಮತ್ತು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇವೆ. ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದರು.
ರೋಟರಿ ಮತ್ತು ವಿವಿಧ ಸಂಘ, ಸಂಸ್ಥೆಗಳು ಮತ್ತು ಬೀರನಕೆರೆ ಗ್ರಾಮದವರು ಇಂದು ನಗರದ ಮೀನಾಕ್ಷಿ ಭವನದಿಂದ ಗೋಪಿ ವೃತ್ತದವರೆಗೆ ಡೊಳ್ಳು ಸಮೇತ ಅದ್ಧೂರಿಯಾಗಿ ಸ್ವಾಗತಿಸಿ ಬೀರನಕೆರೆ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post