ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಶ್ರಯ ಬಡಾವಣೆಯ `ಎ’ ಮತ್ತು `ಬಿ’ ಬ್ಲಾಕ್‌ಗಳಲ್ಲಿ ಅನಧಿಕೃತವಾಗಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ನಮಗೆ ಸರ್ಕಾರದ ನಿಯಮಾನುಸಾರ ಸರ್ವೆ ಕಾರ್ಯ ಪ್ರಾರಂಭಿಸಿ ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಬೊಮ್ಮನಕಟ್ಟೆಯ ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಕಳೆದ 25 ವರ್ಷಗಳಿಂದ ಸೂರಿಲ್ಲದ ನಾವು ಸರ್ಕಾರದಿಂದ ಮಂಜೂರಾಗಿ ನಿಯಮಾವಳಿಗಳ ಪ್ರಕಾರ ನಿಗದಿತ ಸಮಯದಲ್ಲಿ ಮನೆ ಕಟ್ಟದೆ ಖಾಲಿ ಬಿಟ್ಟ ಜಾಗಗಳಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಾ ಬಂದಿದ್ದೇವೆ. ನಾವು ಬಡ ಕೂಲಿ ಕಾರ್ಮಿಕರಾಗಿದ್ದು ಈಗ ಕಟ್ಟಿಕೊಂಡಿರುವ ಮನೆ ಬಿಟ್ಟರೆ ಬೇರೆಲ್ಲೂ ಕೂಡ ವಸತಿ ಸೌಲಭ್ಯ ಹೊಂದಿಲ್ಲ. ಈ ಬಗ್ಗೆ ಹಲವಾರು ಬಾರಿ ನಾವಿದ್ದ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ದಿನಾಂಕ 13-10-2022ರ ಆಶ್ರಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಸರ್ವೆ ಕಾರ್ಯ ಪ್ರಾರಂಭಿಸಲು ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. ಆದರೂ ಕೂಡ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ನಾವು ವಾಸಿಸುತ್ತಿರುವ ಮನೆಗಳ ಸರ್ವೆ ಕಾರ್ಯ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಇಲ್ಲಿ ವಾಸಿಸುತ್ತಿರುವ ಎಲ್ಲಾ ಬಡ ಕುಟುಂಬಗಳಿಗೂ ಹಕ್ಕು ಪತ್ರ ವಿತರಿಸಬೇಕೆಂದು ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸುರೇಶ್, ವರಲಕ್ಷ್ಮಿ, ರಾಜಮ್ಮ, ಬಾಬು, ರಾಜ್‌ಕುಮಾರ್, ಸಂತೋಷ್ ನಾಯ್ಕ, ಲಕ್ಷ್ಮಣ್ ನಾಯ್ಕ, ರಾಜಾ ನಾಯ್ಕ, ತಿಪ್ಪೇಶ್ ನಾಯ್ಕ, ಮಂಜಮ್ಮ, ನೂರ್‌ಜಾನ್ ಮೊದಲಾದವರಿದ್ದರು.
ಮುನ್ಸೂಚನೆ ಮನೆ ಧ್ವಂಸ ಹಿನ್ನೆಲೆ ಮಾನವ ಹಕ್ಕು ಹೋರಾಟ ಸಮಿತಿ ಪ್ರತಿಭಟನೆ
ಆನವಟ್ಟಿ-ಹಾನಗಲ್-ಶಿರಾಳಕೊಪ್ಪ ಮುಖ್ಯರಸ್ತೆ ಸರ್ವೆ ನಂ.60ರಲ್ಲಿ ವಾಸವಾಗಿರುವ ನಿರಾಶ್ರಿತರಿಗೆ ಯಾವುದೇ ನೋಟೀಸ್ ಮುನ್ಸೂಚನೆ ನೀಡದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಏಕಾಏಕಿ ಬಂದು ಮನೆಗಳನ್ನು ಧ್ವಂಸಗೊಳಿಸಿದ್ದು, ಮನೆಯಲ್ಲಿ ವಾಸವಾಗಿದ್ದ ಹೆಣ್ಣುಮಕ್ಕಳು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರನ್ನೂ ಪೊಲೀಸರು ಹೊರಗೆ ಹಾಕಿರುತ್ತಾರೆ. ಆದ್ದರಿಂದ ಬಡವರು ಬೀದಿಪಾಲಾಗಿದ್ದು ಕೂಡಲೇ ಸೂಕ್ತ ಪರಿಹಾರ ಮಾರ್ಗ ತೋರಿಸಬೇಕೆಂದು ಆನವಟ್ಟಿ ನಿರಾಶ್ರಿತರು ಮಾನವ ಹಕ್ಕು ಹೋರಾಟ ಸಮಿತಿಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
1995ನೇ ಸಾಲಿನವರೆಗೆ ಸ್ಥಳೀಯ ನಿವಾಸಿಗಳು ಕಂದಾಯ ಸಲ್ಲಿಸುತ್ತಾ ಬಂದಿದ್ದು, ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಹೆಸರು ನಮೂದಾಗಿರುತ್ತದೆ. ಮತ್ತು ಇಲ್ಲಿನ ನಿವಾಸಿಗಳಿಗೆ ಚುನಾವಣಾ ಗುರುತಿನ ಚೀಟಿ ಇದ್ದು, ವಿದ್ಯುತ್ ಸಂಪರ್ಕ ನೀಡಲಾಗಿದೆ. ಆದ್ದರಿಂದ ಮಾನಸಿಕವಾಗಿ ನೊಂದಿರುವ ಬಡ ಕುಟುಂಬಗಳು ದಾರಿ ಕಾಣದೆ ಬೀದಿ ಬದಿಯ ಮರದ ಕೆಳಗೆ ಜೀವನ ಸಾಗಿಸುತ್ತಿದ್ದು, ಅಮಾಯಕರಾದ ನಮಗೆ ಸೂರು ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ.
Also read: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಜಗ್ಗೇಶ್: ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ
ಇದೇ ಸಂದರ್ಭದಲ್ಲಿ ಮಾನವ ಹಕ್ಕು ಹೋರಾಟ ಸಮಿತಿಯ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಈ ಹೋರಾಟಕ್ಕೂ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಸಿನ ಸರ ನೋಡಲೇ ಬೇಕಾದ ಸಿನಿಮಾ: ಹೆಚ್.ಆರ್. ಬಸವರಾಜಪ್ಪ
ಕಾಸಿನ ಸರ ಚಲನಚಿತ್ರವು ರೈತರ ಸಮಸ್ಯೆಗಳನ್ನು ಎಳೆಎಲೆಯಾಗಿ ಬಿಚ್ಚಿಡುತ್ತದೆ. ರೈತಹೋರಾಟಗಾರರು ಮತ್ತು ರೈತರು ನೋಡಲೇಬೇಕಾದ ಸಿನಿಮಾ ಇದು ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಕಾಸಿನ ಸರ ಸಿನಿಮಾವನ್ನು ತಮ್ಮ ಕುಟುಂಬ ಹಾಗೂ ರೈತಸಂಘದ ಪದಾಧಿಕಾರಿಗಳೊಂದಿಗೆ ವೀಕ್ಷಿಸಿ ನಂತರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾಸಿನ ಸರ ಸಿನಿಮಾ ವಿಶೇಷವಾಗಿ ರೈತರ ಇಂದಿನ ಪರಿಸ್ಥಿತಿಯನ್ನು ತಿಳಿಸುತ್ತದೆ. ವಿದೇಶಿ ಕಂಪನಿಗಳು ರಾಜಕಾರಣಿಗಳ ಮೂಲಕ ಭೂಮಿಯನ್ನು ಹೇಗೆ ಕಬಳಿಸುತ್ತಾರೆ ಮತ್ತು ರೈತರು ಚಳುವಳಿಯ ಮೂಲಕ ಅದನ್ನು ಹೇಗೆ ವಾಪಾಸು ಪಡೆಯಬಹುದು ಎಂದು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ರೈತ ಚಳುವಳಿಯು ಬಹದೊಡ್ಡ ಶಕ್ತಿಯಾಗಿದೆ. ಈ ಶಕ್ತಿಯ ಜೊತೆಗೆ ಸಾವಯವ ಕೃಷಿಯ ಮಹತ್ವ, ಕೌಟುಂಬಿಕ ಸಮಸ್ಯೆಗಳಿಂದ ಛಿದ್ರವಾದ ಕುಟುಂಬ ಮತ್ತೆ ಒಂದುಗೂಡುವುದು, ರೈತಮುಖಂಡರ ಕಷ್ಟ ಕಾರ್ಪಣ್ಯಗಳನ್ನು ಸೂಕ್ಷ್ಮವಾಗಿ ಇದರಲ್ಲಿ ಚಿತ್ರಿಸಲಾಗಿದೆ. ಜೊತೆಗೆ ಹಳ್ಳಿಯ ಬದುಕು ಅಲ್ಲಿನ ಸಂಸ್ಕೃತಿ, ರೈತರು ಬದುಕುತ್ತಿರುವ ರೀತಿಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ ಎನ್ನುತ್ತಾರೆ.
ಚಿತ್ರದ ನಿರ್ದೇಶಕ ನಂಜುಂಡೇಗೌಡರು ಕೂಡ ರೈತ ಹೋರಾಟದಿಂದಲೇ ಬಂದವರಾಗಿದ್ದಾರೆ ಈಹಿಂದೆಯೂ ಕೂಡ ರೈತರ ಬದುಕು ಹೋರಾಟಕ್ಕೆ ಸಂಬಂಧಿಸಿದಂತೆ ಹಲವು ಕಿರುಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಹೆಬ್ಬೆಟ್ಟು ರಾಮಕ್ಕ, ನೋಡು ಬಾ ನಮ್ಮೂರ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ದೊರಕಿದೆ. ರೈತರು, ರೈತಹೋರಾಟಗಾರರು ಈ ಸಿನಿಮಾ ವೀಕ್ಷಿಸುವುದರ ಮೂಲಕ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಬಹುದಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post