ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮತದಾನ ಜಾಗೃತಿಗಾಗಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸ್ವೀಪ್ ಕಮಿಟಿ ವತಿಯಿಂದ ಸಿಟಿ ಸೆಂಟರ್ ಮಾಲ್‌ನಲ್ಲಿ ವಿಶೇಷವಾಗಿ ಸ್ಟೈಲ್ ಡ್ಯಾನ್ಸ್ ಮೂಲಕ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವೀಪ್ ಸಮಿತಿಯ ಅನುಪಮ, ಈ ಬಾರಿಯ ಚುನಾವಣೆಯಲ್ಲಿ ಅತಿಹೆಚ್ಚು ಶೇಕಡವಾರು ಮತದಾನವಾಗಬೇಕು ಎಂಬ ಸಂಕಲ್ಪದಿಂದ ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ಮತದಾನದ ಜಾಗೃತಿ ಮೂಡಿಸುತ್ತಿದ್ದೇವೆ. ಇದಕ್ಕಾಗಿ ವಿಶಿಷ್ಟ, ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಮತದಾರರು ಯಾವುದೇ ಕಾರಣಕ್ಕೂ ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದರು.
ಸ್ಟೈಲ್ ಡ್ಯಾನ್ಸ್ ಕ್ರಿವ್‌ನಿಂದ ನೃತ್ಯ ಕಾರ್ಯಕ್ರಮ ಹಾಗೂ ಲಹರಿ ಸ್ವಸಹಾಯ ಸಂಘದ ಮಹಿಳೆಯರಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಸುಪ್ರಿಯಾ, ಲೋಕೇಶಪ್ಪ, ರತ್ನಾಕರ್, ಗೀತಾ, ರೇಣು ಮತ್ತು ಸಿಬ್ಬಂದಿಗಳು ಇದ್ದರು.
ಪಲ್ಲವಿ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿರುವುದು ಖಂಡನೀಯ: ರಾಜೇಶ್
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ಜಿ. ಪಲ್ಲವಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡದೆ ಇರುವುದು ತುಂಬಾ ಬೇಸರ ತಂದಿದ್ದು, ಮುಂದಿನ ನಡೆಯ ಬಗ್ಗೆ ಒಂದೆರಡು ದಿನದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಗ್ರಾಮಾಂತರ ಕ್ಷೇತ್ರದ ವಿವಿಧ ಸಮುದಾಯದ ಕಾಂಗ್ರೆಸ್ ಮುಖಂಡರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿ. ಪಲ್ಲವಿ ಅವರು 2018ರಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಸಮಾಧಾನಪಡಿಸಿ ಈ ಬಾರಿ ಬೇರೆಯವರಿಗೆ ಅವಕಾಶ ಕೊಡಿ. ಮುಂದಿನ ಬಾರಿ ನಿಮಗೆ ಟಿಕೆಟ್ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಭರವಸೆ ಈಗ ಹುಸಿಯಾಗಿದೆ. ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಇದು ಖಂಡನೀಯ ಎಂದು ಚೋರಡಿ ಗ್ರಾಪಂ ಸದಸ್ಯ ರಾಜೇಶ್ ತಿಳಿಸಿದರು.
ಜಿ. ಪಲ್ಲವಿ ಅವರು, ಸಮಾಜಮುಖಿ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಪಾದರಸದಂತೆ ಒಡಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತವರನ್ನು ಬಿಟ್ಟು ಏನೂ ಕೆಲಸ ಮಾಡದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಕಳೆದ 20 ವರ್ಷಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಈ ಬಾರಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶವಿದೆ. ಆದರೆ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜಿ. ಪಲ್ಲವಿಗೆ ಬಿ-ಫಾರಂ ನೀಡುವ ಮೂಲಕ ತನ್ನ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಬದಲಿಸಬೇಕು ಎಂದು ಒತ್ತಾಯಿಸಿದರು.
ಮತ್ತೊಬ್ಬ ಮುಖಂಡ ಕೆಪಿಸಿಸಿ ಸಂಚಾಲಕ ಬಿ.ಸಿ. ನಾಗರಾಜ್ ಮಾತನಾಡಿ, ಪಲ್ಲವಿಯವರಿಗೆ ಟಿಕೆಟ್ ಸಿಗದಿದ್ದರೆ ಮುಂದಿನ ನಿರ್ಧಾರವನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ. ೧೯ನೇ ತಾರೀಖಿನೊಳಗಾಗಿ ಪಲ್ಲವಿಯವರೊಂದಿಗೆ ಮಾತನಾಡಿ, ಬಂಡಾಯವಾಗಿ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹೇಶ್ ಹಾರನಹಳ್ಳಿ, ಮಂಜುನಾಥ್, ಸಂತೋಷ್, ನಿರಂಜನ, ನಾಗಪ್ಪ, ರಮೇಶ್, ಬೆಟ್ಟದಳ್ಳಿ ಪ್ರಕಾಶ್, ಶಿವಣ್ಣ, ಅವಿನಾಶ್, ಬಸವರಾಜು ಮುಂತಾದವರಿದ್ದರು.
ಆಮ್ ಆದ್ಮಿ ಪಕ್ಷದಿಂದ ನೇತ್ರಾವತಿ ಗೌಡ ನಾಮಪತ್ರ ಸಲ್ಲಿಕೆ
ಆಮ್ ಆದ್ಮಿ ಪಕ್ಷದಿಂದ ನೇತ್ರಾವತಿ ಗೌಡ ಅವರು ಇಂದು ತಮ್ಮ ಅಪಾರ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದರು.
ಅವರು ಶಿವಪ್ಪನಾಯಕ, ಬಸವಣ್ಣ, ಹಾಗೂ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಉತ್ತಮ ಆಡಳಿತ ನೀಡಿದೆ. ಪಕ್ಷದ ಕಾರ್ಯಕ್ರಮವನ್ನು ಸಾರ್ವಜನಿಕರು ಗಮನಿಸಿದ್ದು, ನಿರಂತರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಕ್ಕೆ ನಗರದ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ನನಗೆ ಗೆಲ್ಲುವ ಪೂರ್ಣ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಸುರೇಶ್ ಕೋಟೇಕಾg, ನಜೀರ್ ಅಹ್ಮದ್, ಮುಕ್ಬುಲ್ ಅಹ್ಮದ್ ಹಾಗೂ ಪ್ರಮುಖರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post