ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುಗಾದಿಗೆ ಸಂಬಂಧಿಸಿದ ಕವಿತೆಯನ್ನೊಳಗೊಂಡ ಸಹಚೇತನ ಸಂಸ್ಥೆಯ ಕೊಡುಗೆ ಕವಿಕಂಡ ಯುಗಾದಿ ಎಂಬ ಕಿರುಹೊತ್ತಿಗೆಯನ್ನು ಶಾಸಕ ಕೆ.ಎಸ್. ಈಶ್ವರಪ್ಪ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಇನ್ನಿತರ ಕಲೆಗಳು ಮನುಷ್ಯರನ್ನು ಯಾಂತ್ರಿಕ ಲೋಕದಿಂದ ಹೊರತಂದು ನಮ್ಮ ಸಂಸ್ಕೃತಿ ಹಾಗೂ ನಮ್ಮ ನೆಲದ ಸಂಸ್ಕಾರದ ಬಗ್ಗೆ ಅರಿವು ಉಂಟು ಮಾಡಿ, ತಾಯ್ನಾಡಿನ ಬಗ್ಗೆ ಅಭಿಮಾನ ಬೆಳೆಸುತ್ತದೆ. ಇಂದಿನ ಯುವಜನತೆಗೆ ಇದರ ಬಗ್ಗೆ ಇನ್ನಷ್ಟು ಹೆಚ್ಚು ಅರಿವು, ಒಲವು ಎರಡೂ ಮೂಡಬೇಕಾಗಿದೆ. ಹತ್ತು ಹಲವಾರು ವರ್ಷಗಳಿಂದ ವಿದೇಶದ ನೆಲದಲ್ಲಿದ್ದೂ ಪ್ರಬುದ್ಧ ಕನ್ನಡವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಹಲವು ಕವಿಗಳ ಕವನವನ್ನು ಇದರಲ್ಲಿ ಓದಿ ನಾನೇ ದಿಗ್ಭ್ರಮೆಗೆ ಒಳಗಾಗಿದ್ದೇನೆ. ಕನ್ನಡವನ್ನು ಯಾವುದೇ ರೀತಿಯಲ್ಲಾಗಲಿ ಬಳಸಿದರೆ ಮಾತ್ರ ಅದು ಉಳಿಯುತ್ತದೆ. ಅದೇ ರೀತಿ ನಮ್ಮ ಹಬ್ಬಗಳ ಆಚರಣೆಯೂ ಕೂಡ. ಅದು ಇಂದಿನ ಅನಿವಾರ್ಯತೆ. ಸಹನಾ-ಚೇತನ್ ದಂಪತಿಗಳ ಈ ಕಾರ್ಯ ಶ್ಲಾಘನೀಯ ಎಂದು ಅಭಿಮಾನದ ಮಾತುಗಳಲ್ಲಿ ನುಡಿದರು.
ಈ ಪುಸ್ತಕದಲ್ಲಿ ಈ ಬಾರಿ ಒಟ್ಟು 111 ಕವಿಗಳ ಕವಿತೆಯನ್ನು ಅಡಕಗೊಳಿಸಲಾಗಿದ್ದು, ಸ್ಥಳೀಯ ಶಿವಮೊಗ್ಗೆಯ ಕವಿಗಳು ಸೇರಿದಂತೆ ರಾಜ್ಯದ ಮೂಲೆಮೂಲೆಗಳ ಹಳ್ಳಿಯಿಂದಲೂ ಹಲವಾರು ಕವಿಗಳು ಕವಿತೆಗಳನ್ನು ಬರೆದಿದ್ದಾರೆ. ಪುಟ್ಟಪ್ರಾಯದ 11 ವರ್ಷದ ಬಾಲೆ, ಸಿಟಿ ಆರ್‍ಮ್ಡ್ ರಿಸರ್ವ್ ಪೋಲಿಸ್, ಸೈನಿಕರು, ಅರ್ಚಕರು, ದರ್ಜಿ, ವಿಜ್ಞಾನ ಉಪನ್ಯಾಸಕರು, ವೈದ್ಯರು, ಕೈಗಾರಿಕೋದ್ಯಮಿಗಳು, ಚಿತ್ರರಂಗದ ಕಲಾವಿದರು, 91 ವರ್ಷದ ಕೃಷಿಕರು ಹೀಗೆ ಸಮಾಜದ ವಿವಿಧ ಸ್ಥರದವರಲ್ಲಿರುವ ಕವಿಗಳನ್ನು ಹುಡುಕಿ ಅವರಲ್ಲಿನ ಕವಿತ್ವವನ್ನು ಜಾಗೃತರನ್ನಾಗಿಸಿರುವುದು ಒಂದು ಸಾಹಸವೇ ಸರಿ. ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಾದ ಜಯಶ್ರೀ ಅರವಿಂದ್ ಹಾಗೂ ಸಾಹಿತ್ಯ ಕ್ಷೇತ್ರದ ಹೆಸರಾಂತ ಕಾದಂಬರಿಕಾರರಾದ ಜಗದೀಶ ಶರ್ಮ ಸಂಪ ಅವರು ಹಲವು ವರ್ಷಗಳಿಂದ ಈ ಕವನಸಂಕಲನಕ್ಕೆ ತಮ್ಮ ಸ್ವರಚಿತ ಕವಿತೆಯನ್ನು ಬರೆಯುತ್ತಲೇ ಬರುತ್ತಿದ್ದಾರೆ. ಕೇವಲ ನವ್ಯಕಾವ್ಯದ ರೀತ್ಯಾ ಕವಿತೆಗಳಲ್ಲದೆ ಪ್ರಬುದ್ಧ ತ್ರಿಪದಿ, ಭಾಮಿನಿ ಷಟ್ಪದಿ, ಅನುಪ್ರಾಸ, ಜಾನಪದ ಶೈಲಿ ಕವಿತೆಗಳೂ ಇದು ಒಳಗೊಂಡಿದೆ.
ಯುಗಾದಿ ನಮ್ಮ ಸನಾತನ ಸಂಸ್ಕೃತಿ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೊಸತನಕ್ಕೆ ಹೊಸ ಯೋಚನೆಗಳೇ ಸ್ಪೂರ್ತಿ. ಕನ್ನಡವನ್ನು ಉಳಿಸುವ ಕಾಯಕದಲ್ಲಿ ನಮ್ಮದು ಇದೊಂದು ಅಳಿಲು ಸೇವೆ ಅಷ್ಟೇ ಎನ್ನುತ್ತಾರೆ ಇದರ ರೂವಾರಿ ಸಹನಾ ಚೇತನ್. ಈ ಸಂದರ್ಭದಲ್ಲಿ ಚೇತನ್ ಎಸ್, ಕೆ. ಈ. ಕಾಂತೇಶ್, ದಿನೇಶ್ ಆಚಾರ್ಯ, ಡಾ. ನಾಗಮಣಿ, ಆನಂದ್ ರಾಮ್, ಹರೀಶ್ ಕಾರ್ಣಿಕ್, ಕೌಶಿಕ್ ಪಂಡಿತ್, ವಿವೇಕ್ ಹೆಬ್ಬಾರ್, ವಿನಯ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post