ಕಲ್ಪ ಮೀಡಿಯಾ ಹೌಸ್ | ಲೇಖನ: ಮಹಾಲಕ್ಷ್ಮೀ ರಮೇಶ್, ಶಿವಮೊಗ್ಗ |
ಶಿವಮೊಗ್ಗದಲ್ಲಿ ಕಳೆದ 13 ವರ್ಷಗಳಿಂದ ಭರತನಾಟ್ಯ ನೃತ್ಯ ಕಲೆಯ ಉನ್ನತಿ ಹಾಗೂ ಏಳಿಗೆಗಾಗಿ ಶ್ರಮಿಸುತ್ತಿರುವ ನೃತ್ಯ ಗುರು ಶ್ರೀಮತಿ ಸಹನಾ ಚೇತನರವರ’ಕನಸಿನ ಕೂಸು ‘ಸಹಚೇತನ ನಾಟ್ಯಾಲಯ’.
ಮಲೆನಾಡಿನ ಈ ಪ್ರತಿಷ್ಠಿತ ಸಂಸ್ಥೆ ಮೂಲಕ ಭರತನಾಟ್ಯವನ್ನು ಆಸಕ್ತರಿಗೆ ಹೇಳಿಕೊಡುತ್ತಿದ್ದು, ಬಹು ದೊಡ್ಡ ವಿಶ್ವವೃಂದವನ್ನೇ ಹೊಂದಿದೆ. ಇಷ್ಟೇ ಅಲ್ಲದೆ, ನಮ್ಮ ಈ ಸಾಂಪ್ರದಾಯಿಕ ನೃತ್ಯ ಶೈಲಿಯನ್ನು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳು ಮತ್ತು ಸರ್ಕಾರಿ ಶಾಲೆಯ ಮಕ್ಕಳನ್ನು ಒಳಗೂಡಿಸಿಕೊಂಡು ಅವರಿಗೆ ವೇದಿಕೆ ಕಲ್ಪಿಸಿ ಬೃಹತ್ ಸಭಾಂಗಣದಲ್ಲಿ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಆ ಮಕ್ಕಳ ನೃತ್ಯ ಪ್ರಸ್ತುತಿಗೆ ವಿಪುಲ ಅವಕಾಶವನ್ನು ನೀಡುತ್ತಿರುವುದು ಈ ಸಂಸ್ಥೆಯ ವಿಶೇಷ.
ಈ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳಿಗೆ ಪಠ್ಯ ದರ್ಶಿನಿ, ಹಿಂದುಳಿದ ಬಡಾವಣೆ( ಸ್ಲಂ) ಮಕ್ಕಳಿಗೆ ಭಾರತೀಯಂ, ನಾಟ್ಯಾರಾಧನ ಎಂಬ ಮೂರು ದಿನಗಳ ರಾಷ್ಟ್ರೀಯ ನೃತ್ಯ ಮಹೋತ್ಸವ, ಸಮಾಜಮುಖಿ ಸೇವಾ ನಿರತ ವ್ಯಕ್ತಿಗಳಿಗೆ ‘ಅಜಿತ ಶ್ರೀ’ ಪುರಸ್ಕಾರ , ಸಾಹಿತ್ಯಕವಾಗಿ ಕವಿ ಕಂಡ ಯುಗಾದಿ, ಎಂಬ ಯುಗಾದಿ ಕವನ ಸಂಕಲನ ಮುಂತಾದ ಮಹತ್ವದ ಕಾರ್ಯಕ್ರಮಗಳನ್ನು ಕಳೆದ 13 ವರ್ಷಗಳಿಂದ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ.
ಈ ಸಂಸ್ಥೆಯ ಮತ್ತೊಂದು ವಿಶಿಷ್ಟ ಕಾರ್ಯಕ್ರಮ ಉಚಿತ ಸಾಮೂಹಿಕ ರಂಗ ಪ್ರವೇಶ. ಭರತನಾಟ್ಯವನ್ನು ಶಿಸ್ತುಬದ್ಧವಾಗಿ ಕಲಿತು ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ, ಮುಂದಿನ ಹಂತಕ್ಕೆ ತಯಾರಾಗುವ ಪ್ರಕ್ರಿಯೆ ಇದು. ಸಕಲವೂ ಅಪಾರ ಆರ್ಥಿಕ ಬೆಂಬಲ ಬೇಡುವ ಇಂದಿನ ಕಾಲಘಟ್ಟದಲ್ಲಿ ಭರತ ನಾಟ್ಯ ಕಲೆಯು ಸರ್ವರ ಸ್ವತ್ತಾಗಲಿ ಎಂಬ ಸದುದ್ದೇಶದಿಂದ ಹಮ್ಮಿಕೊಂಡಿರುವ ಒಂದು ವಿಭಿನ್ನ ಯೋಜನೆಯ ಫಲ ಉಚಿತ ಸಾಮೂಹಿಕ ರಂಗ ಪ್ರವೇಶ.
ಇದೇ ಬರುವ ಭಾನುವಾರ, ಜೂನ್ 25, 2023 ,5:30ಕ್ಕೆ ಸರಿಯಾಗಿ ಕುವೆಂಪು ರಂಗಮಂದಿರದಲ್ಲಿ ನಡೆಯುತ್ತಿದ್ದು ಸಂಸ್ಥೆಯವರು ಸರ್ವರಿಗೂ ಆತ್ಮೀಯ ಸ್ವಾಗತ ಕೋರುತ್ತಿದ್ದಾರೆ. ಬನ್ನಿ, ಈ ವಿಶಿಷ್ಟ ಕಾರ್ಯಕ್ರಮಕ್ಕೆ ನಿಮ್ಮ ಕುಟುಂಬದವರು ಹಾಗೂ ಮಿತ್ರರನ್ನು ಕರೆತನ್ನಿ, ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post