ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಹೊಸ ಜಾಹೀರಾತು ನೀತಿ #new advertising policy ಜಾರಿಗೊಳಿಸುವ ಮುನ್ನ ಸಮಗ್ರವಾಗಿ ಪುನರ್ ಪರಿಶೀಲಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ಸಂಪಾದಕರ ಸಂಘ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ಜಾಹೀರಾತು ನೀತಿ-2026 ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ ಹಾಗೂ ಸೇಡಿನ ಮನೋಭಾವ ಒಳಗೊಂಡ ನೀತಿಯಾಗಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಲಿದೆ.
ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಹಾಗೂ ಸಂಪಾದಕರ ಸಂಘ ಅಭಿಪ್ರಾಯಪಟ್ಟಿದೆ. ರಾಜ್ಯ ಸರಕಾರವು `ಕರ್ನಾಟಕ ಜಾಹೀರಾತು ನೀತಿ’ಯನ್ನು ಜಾರಿಗೆ ತರಲು ಮುಂದಾಗುವ ಮೂಲಕ ಸಂಕಷ್ಟದಲ್ಲಿರುವ ಪತ್ರಿಕೆಗಳನ್ನು ಮೇಲೆತ್ತುವ ಬದಲು, ಕುತ್ತಿಗೆ ಹಿಸುಕಿ ಕೊಲ್ಲಲು ಸಂಚು ರೂಪಿಸಿದೆ ಎಂದೇ ವಿಷಾದದಿಂದ ಹೇಳಬೇಕಾಗಿದೆ.
ಸಾಮಾನ್ಯ ವರ್ಗದ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಲು 2 ವರ್ಷದಿಂದ 3 ವರ್ಷಕ್ಕೆ ಪ್ರಕಟಣಾ ಅವಧಿಯನ್ನು ವಿಸ್ತರಿಸಿರುವುದು ಹಾಗೂ ಪರಿಶಿಷ್ಟ ಜಾತಿ, ವರ್ಗ, ವಿಶೇಷ ಸ್ಥಾನಮಾನ ಹೊಂದಿರುವ ಜಿಲ್ಲೆಗಳ ಪತ್ರಿಕೆಗಳು ಹಾಗೂ ಪ್ರಾದೇಶಿಕ ಭಾಷಾ ಪತ್ರಿಕೆಗಳಿಗೆ ಇದ್ದ 1 ವರ್ಷದ ಪ್ರಸಾರಣ ಅವಧಿಯನ್ನು 2ವರ್ಷಕ್ಕೆ ವಿಸ್ತರಿಸಿರುವುದು ಹೊಸ ಪತ್ರಿಕೆಗಳ ಆರಂಭಕ್ಕೆ ಕಡಿವಾಣ ಹಾಕುವ ಹುನ್ನಾರ ಎನ್ನದೇ ವಿಧಿ ಇಲ್ಲ.
ಸದ್ಯ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆಗಳ ಮಾನ್ಯತೆಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಮಾಧ್ಯಮ ಪರಿಶೀಲನಾ ಸಮಿತಿಯಿಂದ ಪುನರ್ ಪರಾಮರ್ಶಿಸುವುದು, ಪ್ರಾದೇಶಿಕ ಪತ್ರಿಕೆಗಳು ಸ್ವಂತ ಕಛೇರಿ ಮತ್ತು ಮುದ್ರಣಾ ಘಟಕ ಹೊಂದಿರಬೇಕು ಹಾಗೂ ಕನಿಷ್ಠ 15ಜನ ಖಾಯಂ ನೌಕರರರನ್ನು ಹೊಂದಿರಬೇಕು ಹಾಗೂ ಕನಿಷ್ಠ 6 ಜಿಲ್ಲೆಗಳಲ್ಲಿ 25,000 ಪ್ರತಿಗಳ ಪ್ರಸಾರ ಸಂಖ್ಯೆಯನ್ನು ಹೊಂದಿರಬೇಕು ಎಂದು ಷರತ್ತು ಹಾಕಲಾಗಿರುವುದು, ಸ್ಥಳೀಯ ಪತ್ರಿಕೆಗಳು ಕನಿಷ್ಠ 3000 ಪ್ರಸರಣ ಸಂಖ್ಯೆ ಹೊಂದಿರಬೇಕು ಎನ್ನುವುದೂ ಸಮರ್ಥನೀಯ ಅಲ್ಲ.
ಸರ್ಕಾರವೇ ಖಾಯಂ ನೌಕರರನ್ನು ನೇಮಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ, ಅಲ್ಲಿ ಎಲ್ಲವೂ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿದೆ. ಹೀಗಿರುವಾಗ ಪತ್ರಿಕೆ ಅದರಲ್ಲೂ ಸ್ಥಳೀಯ ಪತ್ರಿಕೆಗಳಲ್ಲಿ ಖಾಯಂ ನೌಕರರು ಇರಬೇಕು, ಅದೂ ಇಂತಿಷ್ಟೇ ಇರಬೇಕು, ಅವರಿಗೆ ಎಲ್ಲಾ ಸೌಲಭ್ಯಗಳು ನೀಡಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ ?
ಇದರ ಜೊತೆಗೆ ಬಹಳ ಮುಖ್ಯವಾಗಿ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಪ್ರಸರಣ ಸಂಖ್ಯೆಯನ್ನು ನಿಗಧಿ ಪಡಿಸಿರುವುದೂ ಸಹ ಅವೈಜ್ಞಾನಿಕ. ಹೊಸ ನೀತಿಯಲ್ಲಿ, ಬೆಂಗಳೂರೂ ಒಂದೇ, ಮಲೆನಾಡಿನ ಮೂಲೆಯ ತಾಲೂಕೂ ಒಂದೇ ಎನ್ನುವಂತಾಗಿದೆ.. ಇದನ್ನು ಕೈ ಬಿಟ್ಟು, ಆಯಾ ತಾಲೂಕಿನ ಜನಸಂಖ್ಯೆಯ ಆಧಾರದ ಮೇಲೆ ಪ್ರಸರಣ ಸಂಖ್ಯೆಯನ್ನು ನಿಗಧಿ ಪಡಿಸುವಂತಾಗಬೇಕು. ಪ್ರಾದೇಶಿಕ ಪತ್ರಿಕೆ ನಡೆಸುತ್ತಿರುವ ಎಲ್ಲರೂ ಪ್ರತ್ಯೇಕ ಮುದ್ರಣ ಘಟಕ ಸ್ಥಾಪಿಸಲು ಸಾಧ್ಯವೇ ? ಇದು ಸಾಧ್ಯವಾಗದ ಮಾತು. ಈ ನೀತಿ ನಿಜಕ್ಕೂ ಆಘಾತಕಾರಿ. ಇನ್ನು, ಪತ್ರಿಕೆಯ ಟೈಟಲ್ ವರ್ಗಾವಣೆಯನ್ನು ಕೇವಲ ಕುಟುಂಬಕ್ಕೆ ಸೀಮಿತಗೊಳಿಸುವುದು, ಒಂದು ಪತ್ರಿಕೆಯ ಪರಂಪರೆ ಮುಂದುವರೆಕೆಗೆ ಧಕ್ಕೆಯಾಗಲಿದೆ. ಸಂಪಾದಕ ಸತ್ತರೂ ಪತ್ರಿಕೆಗಳು ಸಾಯಬಾರದು. ಪತ್ರಿಕೆಗಳ ಟೈಟಲ್ ವರ್ಗಾವಣೆ ಮಾಡಿದರೆ ಮಾನ್ಯತಾ ಪಟ್ಟಿಯಿಂದ ಕೈಬಿಡುವ ಕ್ರಮವೂ ಸಹ ಪತ್ರಿಕೆ ಮಾಲೀಕನ ಹಕ್ಕುಗಳನ್ನು ಕಸಿದುಕೊಳ್ಳುವಂತಾಗಲಿದೆ. ಹಾಗೂ ಪತ್ರಿಕೆಗಳು ದೀರ್ಘಕಾಲ ಮುದ್ರಣಗೊಳ್ಳಲು ತೊಡಕಾಗಲಿದೆ.
ಜಾಹೀರಾತು ದರ ಪರಿಷ್ಕರಣೆ ವಿಷಯದಲ್ಲಿ ಕರ್ನಾಟಕ ಜಾಹೀರಾತು ನೀತಿ-2013 ಅನ್ವಯ ಶೇ.12ರಷ್ಟು ಜಾಹಿರಾತು ದರವನ್ನು 2 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿತ್ತು. ಅದರೆ, ಕಳೆದ ಐದು ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ. ಈ ನಡುವೆ, ಪರಿಶಿಷ್ಟ ಜಾತಿ ಮತ್ತು ವರ್ಗದವರ ಮಾಲಿಕತ್ವದ ಪತ್ರಿಕೆಗಳಿಗೆ ಜಾಹಿರಾತು ಹಣವನ್ನು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿಗೆ ಅನುದಾನದ ವ್ಯಾಪ್ತಿಗೆ ಒಳಪಡಿಸಿ ವಾರ್ತಾ ಇಲಾಖೆಯಿಂದ ಬೇರ್ಪಡಿಸಿ, ಈ ಸಮುದಾಯಗಳ ಪತ್ರಿಕೆಗಳನ್ನು ಮುಖ್ಯವಾಹಿನಿಯಿಂದ ದೂರವಿಡುವ ಷಡ್ಯಂತರ ನಡೆದಿದೆ ಎಂದರೆ ತಪ್ಪಿಲ್ಲ.
ಕರ್ನಾಟಕ ಹೊಸ ಜಾಹಿರಾತು ನೀತಿಯ ಈ ಪ್ರಮುಖ ನ್ಯೂನ್ಯತೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಕೂಡಲೇ ಇವುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಜಾಪ್ರಭುತ್ವವಾದಿಗಳು. ಪ್ರಜಾಪ್ರಭುತ್ವ ಉಳಿವಿನಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು ಎಂದು ಸದಾ ಹೇಳುವವರು. ಆದರೆ, ಕರ್ನಾಟಕ ಜಾಹೀರಾತು ನೀತಿ-2026 ಮೂಲಕ ಅನವಶ್ಯಕ ಷರತ್ತುಗಳನ್ನು ವಿಧಿಸಿ ಪತ್ರಿಕೆಗಳ ಕುತ್ತಿಗೆ ಹಿಸುಕುವ ಕಾರ್ಯಕ್ಕೆ ಸರಕಾರವೇ ಮುಂದಾಗಿರುವುದು ಸಮರ್ಥನೀಯ ಅಲ್ಲ. ವಾರ್ತಾ ಇಲಾಖೆಯು ಸಹ ಪೂರ್ವಾಗ್ರಹ ಮನಸ್ಥಿತಿಯಿಂದ ಹೊರ ಬಂದು, ಹೊಸ ಜಾಹಿರಾತು ನೀತಿಯನ್ನು ಎಲ್ಲರ ಸಲಹೆ ಪಡೆದು ಪುನರ್ ಪರಿಶೀಲಿಸಬೇಕು.
ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು ಎಂದು ಈ ಮನವಿ ಮೂಲಕ ಮನವರಿಕೆ ಮಾಡಿಕೊಡಲಾಗಿದೆ. ಸದರಿ ಜಾಹಿರಾತು ನೀತಿ 2026ನ್ನು ಈ ತಕ್ಷಣವೇ ಜಾರಿಗೊಳಿಸಿದೆ ತಡೆಹಿಡಿಯಬೇಕು ಮತ್ತು “ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಪುನರ್ ರೂಪಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ವೈದ್ಯನಾಥ್ ಹೆಚ್.ಯು., ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಶಿವಮೊಗ್ಗ ಪ್ರೆಸ್ ಟ್ರಸ್ಟ್ನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ. ಗಜೇಂದ್ರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಹ್ಯಾದ್ರಿ ಮಂಜುನಾಥ್ ಹಾಗೂ ಸಂಪಾದಕರಾದ ಜಿ. ಪದ್ಮನಾಭ್, ಶಿ.ಜು.ಪಾಷಾ, ವೈ.ಕೆ. ಸೂರ್ಯನಾರಾಯಣ್, ಶೃಂಗೇಶ್, ಜಿ. ಚಂದ್ರಶೇಖರ್, ಗಾ.ರಾ. ಶ್ರೀನಿವಾಸ್, ಬಿ. ನಾಗರಾಜ್ ಶೆಣೈ, ಕಣ್ಣಪ್ಪ, ಸುಭಾಷ್, ಅಜೆಯ ಶ್ರೀನಿವಾಸ್, ಲಿಯಾಖತ್, ರಾಕೇಶ್ ಡಿಸೋಜಾ, ಭರತೇಶ್, ಹೆಚ್.ಎನ್. ಮಂಜುನಾಥ್, ವಿ.ಟಿ. ಅರುಣ್, ಆನಂದ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















