ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಂದು ನಗರದ ಕುವೆಂಪು ವಿಶ್ವವಿದ್ಯಾಲಯ ನಗರ ಕಚೇರಿಯಲ್ಲಿ ವಿಶ್ವ ಜಲ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಮಾತನಾಡಿ, ನೀರಿನ ಮಹತ್ವವನ್ನು ಇಂದು ಸರ್ವರಿಗೂ ತಿಳಿಸಬೇಕಾಗಿದೆ. ಜಲವೇ ಜೀವನ ನೀರಿಲ್ಲದ ಜೀವನ ಕಲ್ಪಿಸಲೂ ಸಾಧ್ಯವಿಲ್ಲ. ಆದ್ದರಿಂದ ನಾವುಗಳೆಲ್ಲಾ ನೀರಿನ ಮೂಲಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.
ಹೆಚ್ಚು ಗಿಡ ಮರಗಳನ್ನು ಬೆಳೆಸುವುದರಿಂದ ಮತ್ತು ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಸಾಕಷ್ಟು ಯುವಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಅರಣ್ಯ ಮತ್ತು ಕೆರೆಗಳ ರಕ್ಷಣೆಯಿಂದ ಜೀವವೈವಿಧ್ಯತೆ ಉಳಿಯುವುದು. ಜಲಯೋಧರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಯವರು ಹೇಳಿರುವಂತೆ ಕ್ಯಾಚ್ ದಿ ರೈನ್ (ಮಳೆ ಎಲ್ಲಿ ಬೀಳುವುದೋ ಅಲ್ಲಿಯೇ ಸಂಗ್ರಹಿಸಿ)ಯನ್ನು ಪಾಲಿಸಿ ಈ ಅಭಿಯಾನದಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಕೈ ಜೋಡಿಸಬೇಕಾಗಿದೆ ಎಂದರು.
ಬಹುಮುಖ್ಯ ವಿಷಯವೆಂದರೆ, ಸರ್ಕಾರದ ಅನುದಾನ ಸಮರ್ಪಕವಾಗಿ ವಿನಿಯೋಗವಾಗಬೇಕು. ಕೆರೆಗೆ ನೀರು ತುಂಬಿಸುವ ಯೋಜನೆ ಬಹಳ ಉತ್ತಮವಾಗಿದೆ. ಆದರೆ, ಗುಣಮಟ್ಟವಿಲ್ಲದ ಕಾರಣ ಕೆರೆಗಳನ್ನು ತುಂಬಿಸುವ ಎಷ್ಟೊ ಕಾಮಗಾರಿಗಳು ನಿರುಪಯುಕ್ತವಾಗಿ ಕೆರೆಗೆ ನೀರು ಹರಿದು ಬರದೆ ವ್ಯರ್ಥವಾಗಿವೆ. ಗುಣಮಟ್ಟದ ಕಾಮಗಾರಿಗಳನ್ನು ಮಾಡದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆರೆ ಹೂಳು ತೆಗೆಯುವ ಯೋಜನೆಯೂ ಸಹ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆದರೆ ಉತ್ತಮ ಯೋಜನೆಯಾಗುವುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಡಾ. ವೆಂಕಟೇಶ್, ಅಡಿಕೆ ವರ್ತಕ ಚಂದ್ರಪ್ಪ, ಸ್ವಯಂ ಸೇವಕರು ಮತ್ತು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post