ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತಾವು ರಾಜ್ಯಪಾಲರ ಬಳಿ ಯಡಿಯೂರಪ್ಪ ವಿರುದ್ಧ ದೂರು ನೀಡಲು ಹೋಗಿರಲಿಲ್ಲ. ವ್ಯವಹಾರಿಕ ವಹಿವಾಟು ನಿಯಮ ಕುರಿತ ಸ್ಪಷ್ಟೀಕರಣ ಕೇಳಲು ಅವರನ್ನು ಭೇಟಿ ಮಾಡಿದ್ದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರ್ಯಾನ್ಸಾಕ್ಷನ್ ಆಫ್ ದ ಬಿಸಿನೆಸ್ ರೂಲ್ಸ್ 1977 ಪ್ರಕಾರ ನಮ್ಮ ಇಲಾಖೆಗೆ 1300 ಕೋಟಿ ರೂ. ಹಣ ಬಿಡುಗಡೆ ಆಗಬೇಕಿತ್ತು. ಅದು ಆಗದಿದ್ದ ಕಾರಣ ಅದರ ನೀತಿ ನಿಯಮಗಳನ್ನು ಪ್ರಸ್ತಾಪ ಮಾಡುವ ಸಲುವಾಗಿ ರಾಜ್ಯಪಾಲರನ್ನು ಭೇಟಿ ಮಾಡಲು ಹೋಗಿದ್ದೆ ಹೊರತು ದೂರು ನೀಡಲು ಅಲ್ಲ. ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಸಂಘಟನಾ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಎಲ್ಲರ ಗಮನಕ್ಕೂ ತಂದಿದ್ದು, ಅವರುಗಳು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಸಲಹೆ ಮಾಡಿದ್ದರಿಂದ ಅದನ್ನು ಕೈಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ತಾನು ಹಲವು ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದೇನೆ ಹಾಗೂ ಅದರಂತೆ ಉತ್ತಮ ಕಾರ್ಯನಿರ್ವಹಿಸುತ್ತೇನೆ. ಖಾಸಗಿ ವಾಹಿನಿಗಳು ಇಡೀ ರಾಜ್ಯ ಸಮೀಕ್ಷೆ ನಡೆಸಿ ಉತ್ತಮ ಸಚಿವ ಪ್ರಶಸ್ತಿ ಪಡೆದುಕೊಂಡಿದ್ದೇನೆ. ತಾವು ರಾಜ್ಯಪಾಲರ ಬಳಿ ವ್ಯವಹಾರ ವಹಿವಾಟು ನಿರ್ವಹಣೆಯ ಕ್ರಮಗಳ ಕುರಿತು ಸ್ಪಷ್ಟೀಕರಣ ಕೇಳಲು ಅವರನ್ನು ಭೇಟಿ ಮಾಡಿದ್ದೆ ಹೊರತು ದೂರು ನೀಡಲು ಅಲ್ಲ. ರಾಜ್ಯಪಾಲರು 14ಬಾರಿ ಗುಜರಾತ್‌ನಲ್ಲಿ ಅರ್ಥ ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆದ್ದರಿಂದರ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಈಗಾಗಲೇ ಹೇಳಿರುವಂತೆ ಮುಖ್ಯಮಂತ್ರಿ ವಿರುದ್ಧ ದೂರು ನೀಡಿಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆಯೂ ಕೊರೋನಾ ಮಧ್ಯೆಯೇ ಗ್ರಾಮಪಂಚಾಯಿತಿ ಚುನಾವಣೆಯನ್ನು ಎಲ್ಲಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು. ಅದರಂತೆಯೇ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸಲಾಗುವುದು. ಇನ್ನೂ ಹೆಚ್ಚಿನ ಸೂಕ್ತ ನಿರ್ಧಾರಗಳನ್ನು ಚುನಾವಣಾ ಆಯೋಗ ತೆಗೆದುಕೊಳ್ಳಲಿದೆ ಎಂದರು.
ಚುನಾವಣೆ ಎಂದರೆ ಬಿಜೆಪಿಗೆ ಗೆಲವು ಎಂದರ್ಥ. ಸಂಸತ್ ಚುನಾವಣೆಯಲ್ಲಿ ಎರಡು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಕುಹಕವಾಡುತ್ತಿದ್ದರು. ಆದರೆ, 28 ಸ್ಥಾನಗಳನ್ನು ಗೆದ್ದಿದ್ದೇವೆ. ಕೋವಿಡ್ ವಿಚಾರವಾಗಿ ಸಲಹೆ, ಸಹಕಾರಗಳಿಗಾಗಿ ಮುಖ್ಯಮಂತ್ರಿ ಕರೆದ ಸಭೆಯ ಕುರಿತಾಗಿಯೂ ತಾತ್ಸಾರದ ಮಾತುಗಳನ್ನು ಆಡುತ್ತಿದ್ದಾರೆ. ರಾಷ್ಟ್ರಪತಿ ಆಡಳಿತ ತರಲು ಹೇಳುತ್ತಿದ್ದಾರೆ. ಅವರಿಗೆ ಅಧಿಕಾರಿದ ವ್ಯಾಮೋಹದಿಂದಾಗಿ ಇಂತಹ ಅಥವಿಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊರೋನಾ ಲಸಿಕೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿರುವ ಬಗ್ಗೆಯೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಾರತೀಯ ಸಂಸ್ಕೃತಿಯೇ ಹಂಚಿಕೊಂಡು ತಿನ್ನುವುದು. ಅದರಂತೆ ಬೇರೆ ದೇಶಗಳಿಗೂ ಲಸಿಕೆ ಕಳಿಸಿಕೊಡಲಾಗುತ್ತಿದೆ. ಈ ಸಂಸ್ಕೃತಿ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿದ ಅವರು, ಬಸವಕಲ್ಯಾಣ ಮತ್ತು ಮಸ್ಕಿ ಚುನಾವಣಾ ಪ್ರಚಾರಗಳಲ್ಲಿ ಪಕ್ಷಾಂತರಿಗಳನ್ನು ದೂರವಿಡಿ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಸ್ವತಃ ಸಿದ್ಧರಾಮಯ್ಯ ಅವರೇ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ ಅವರು ಕೂಡ ಪಕ್ಷಾಂತರಿ ಅಲ್ಲವೇ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತದೆ. ತಾವು ಮುಖ್ಯಮಂತ್ರಿಯಾಗುತ್ತೇನೆ ಎಂದು ಬೀಗುತ್ತಿದ್ದ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ರಾಜಕೀಯ ಇರುವವರೆಗೂ ಪಕ್ಷಾಂತರ ಅನ್ನುವುದು ಇದ್ದೇ ಇರುತ್ತದೆ ಇನ್ನೊಬ್ಬರನ್ನು ದೂಷಿಸುವುದನ್ನು ಬಿಡಿ ಎಂದು ಅವರು ಹೇಳಿದ್ದಾರೆ.
ತಮ್ಮ ಪಕ್ಷದವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಯಾವ ಕಾರಣಕ್ಕಾಗಿ ಹೋಗಿದ್ದರು. ಇಡಿಯವರು ಏಕೆ ತನಿಖೆ ನಡೆಸಿದರು. ಅವರೂ ಸಹ ತಪ್ಪಿತಸ್ಥರಾಗಿದ್ದು, ಭೂತ ಬಾಯಲ್ಲಿ ಭಗವದ್ಗಿತೆ ಎಂಬಂತೆ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೋದಕಡೆಯಲ್ಲೆಲ್ಲ ದಿನಕ್ಕೊಂದು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಷ್ಟ್ರಾಚಾರದ ಬಗ್ಗೆ ಮಾತನಾಡುವ ಅಧಿಕಾರ ಅವರಿಗೆ ಎಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post