ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬ್ರಾಹ್ಮಣ ಎಂಬುದು ಜಾತಿಯಲ್ಲ ಅದು ಶಕ್ತಿ. ಜಗತ್ತಿನ ಉದ್ಧಾರಕ್ಕೆ ಬ್ರಾಹ್ಮಣತ್ವದ ಅಗತ್ಯವಿದೆ. ಮನುಕುಲ ನೆಮ್ಮದಿಯಿಂದಿರಲು ಅವರು ಪ್ರತಿನಿತ್ಯ ಮಾಡುವ ಯಾಗ-ಯಜ್ಞಗಳೇ ಕಾರಣವಾಗಿವೆ ಎಂದು ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಇಂದು ವಿಪ್ರ ಯುವ ಪರಿಷತ್ ಮತ್ತು ವೈದಿಕ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಸಮೀಪದ ಹರಕೆರೆಯ ಶ್ರೀ ರಾಮೇಶ್ವರ ದೇವಸ್ತಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಏರ್ಪಡಿಸಲಾಗಿದ್ದ ಮಹಾರುದ್ರಯಾಗ, ಧನ್ವಂತರಿ ಹೋಮ ಹಾಗೂ ಮಹಾಮೃತ್ಯುಂಜಯ ಹೋಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಮಾಜಕ್ಕೆ, ದೇಶಕ್ಕೆ ಚೈತನ್ಯ, ಶಕ್ತಿ ತುಂಬುವ ವಿಪ್ರ ಯುವಕರ ಸತ್ಕಾರ್ಯ ಸರ್ವರಲ್ಲಿ ಸ್ಫೂರ್ತಿ ತುಂಬಲಿದೆ. ಗುರು ಕರುಣಾಮಯಿ. ಭಕ್ತನ ಕೋರಿಕೆಯೆಲ್ಲವೂ ಗುರುವಿನ ಕೃಪೆಯಿಂದ ನೆರವೇರುತ್ತದೆ. ಗುರುವನ್ನು ನಂಬಿದ ಭಕ್ತ ತಪ್ಪುದಾರಿಗೆ ಹೋಗದಂತೆ, ಅನ್ಯ ಚಿಂತನೆ ಮಾಡದಂತೆ ಸಂಸ್ಕಾರ-ಸಂಸ್ಕೃತಿಯಿಂದ ವಿಮುಖನಾಗದಂತೆ ಗುರು ಭಕ್ತನಿಗೆ ತಂದೆ-ತಾಯಿಯಂತಿದ್ದು, ಸಕಾಲದಲ್ಲಿ ಮಾರ್ಗದರ್ಶನ ಮಾಡಿ ತಿದ್ದಿ ಹೇಳುವ ಮಾರ್ಗದರ್ಶಕನಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಭೀಮೇಶ್ವರ ಜೋಷಿ ಅವರು ಮಾತನಾಡಿ, ಸಮಾಜದಲ್ಲಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಅಪರಿಮಿತ ಆನಂದ ಲಭಿಸಲಿದೆ ಎಂದರು.
ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಾಗ ಅನೇಕ ಎಡರು-ತೊಡರುಗಳುಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಅವೆಲ್ಲವನ್ನು ಮೆಟ್ಟಿನಿಂತು ಸಾಮಾಜಿಕ ಕಾರ್ಯಕ್ರಮವನ್ನು ಮಾಡಿದ್ದಲ್ಲಿ ಮನಸಿಗೆ ಶಾಂತಿ ಸಿಗುವುದರಲ್ಲಿ ಸಂದೇಹವಿಲ್ಲ ಎಂದ ಅವರು, ಸಂಘಟನೆಗಿಂತ ಹೃದಯ ವೈಶಾಲ್ಯತೆಯ ಕಾರ್ಯ ಅತ್ಯಂತ ಪ್ರಮುಖವಾದುದು. ಸಂಘಟನೆ ಸಮುದಾಯವನ್ನು ಜೊತೆಜೊತೆಗೆ ತೆಗೆದುಕೊಂಡು ಹೋಗುವಂತಹ ಕಾರ್ಯ ಮಾಡಬೇಕು. ಆಗ ಸಹಜವಾಗಿ ಸಂಘಟನೆಯ ಶಕ್ತಿ ಹೆಚ್ಚಲಿದೆ ಎಂದರು.
ಸಮಾಜದಲ್ಲಿ ಎಂತಹದೇ ವಿಷಮ ಪರಿಸ್ಥಿತಿ ಎದುರಾದರೂ ಸಹ ಅದಕ್ಕೆ ಪರ್ಯಾಯವಾಗಿ ಪರಿಹಾರದ ಶಕ್ತಿ ಕೂಡಾ ಭಗವಂತ ಸೃಷ್ಠಿ ಮಾಡಿರುತ್ತಾನೆ. ಕೊರೋನಾದಂತಹ ಸಂಕಷ್ಟ ಎದುರಾದಾಘ ನಮ್ಮ ನಡುವೆ ಅನೇಕ ಸಂಘಟನೆಗಳು ಇದರ ವಿರುದ್ದ ಹೋರಾಡುವಂತ ಕಾರ್ಯ ಮಾಡಿದವು. ಇವೆಲ್ಲವೂ ಭಗವಂತನ ಕೃಪೆಯಿಂದಾದ ಕಾರ್ಯವೆಂದರು.
ಸಮಾಜದಲ್ಲಿ ತೊಂದರೆಗೊಳಗಾದ ವ್ಯಕ್ತಿಗಳಿಗೆ ನೆರವಿನ ಹಸ್ತವನ್ನು ಚಾಚಬೇಕು. ಇದರಲ್ಲಿ ಯಾವುದೇ ಸ್ವಾರ್ಥವಿರಬಾರದು. ನಿಸ್ವಾರ್ಥ ಸೇವೆಯಿಂದ ನೆರವನ್ನು ಕಲ್ಪಿಸಿದರೆ ಅದು ಭಗವಂತನಿಗೆ ಸಲ್ಲುವ ಭಕ್ತಿಯಾಗುತ್ತದೆ ಎಂದರು.
ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ॥ ವಿ.ಆರ್.ಗೌರಿಶಂಕರರ್ ಅರು ಮಾತನಾಡಿ ವಿಪ್ರ ಸಮಾಜ ನಂಬಿಕಸ್ಥರಿಗೆ ಮಾರ್ಗದರ್ಶಕ. ಇಡೀ ಸಮುದಾಯ ವಿಪ್ರ ಸಮಾಜಕ್ಕೆ ಗುರುವಿನ ಸ್ಥಾನವನ್ನು ನೀಡಿ ಗೌರವಿಸಿದೆ. ವಿಪ್ರರು ಹೃದಯ ಶ್ರೀಮಂತಿಕೆ ಉಳ್ಳವರು. ಎಷ್ಟೇ ಸಮಸ್ಯೆಗಳು ಎದುರಾದರೂ ಅವುಗಳಿಂದ ಮೇಲೇಳುವ ಶಕ್ತಿ ವಿಪ್ರರಿಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ವಿಪ್ರ ಬಾಂಧವರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಲಗೂರಿನ ಶ್ರೀ ವಿಜಯಮಾರುತಿ ಶರ್ಮ ಗುರೂಜಿ ಅವರು ಮಾತನಾಡಿದರು. ಶೃಂಗೇರಿಯ ಆಡಳಿತಾಧಿಕಾರಿ ಡಾ॥ ವಿ.ಆರ್.ಗೌರಿಶಂಕರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಪ್ರ ಯುವ ಪರಿಷತ್ತಿನ ಗೌರವಾಧ್ಯಕ್ಷ ಪ್ರಸನ್ನಭಟ್, ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಉಡುಪ, ಸಂತೋಷ ಭಾರದ್ವಾಜ್, ವೈದಿಕ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯಭಟ್, ಜಿ.ಪಂ ಸದಸ್ಯ ಕೆ.ಇ.ಕಾಂತೇಶ್ ಸೇರಿದಂತೆ ವಿಪ್ರ ಯುವ ಸಂಘಟನೆಯ ಪದಾಧಿಕಾರಿಗಳು ಹಾಗು ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post