ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಲಬೆರಿಕೆಯಾಗಿ ಮಾರುಕಟ್ಟೆಗೆ ಬರುತ್ತಿದೆ ರೈತ ಕೊಳ್ಳುವ ರಾಸಾಯನಿಕ ಗೊಬ್ಬರವನ್ನು ಕಲಬೆರಿಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ರಸಗೊಬ್ಬರ ಖರೀದಿಸುವಾಗ ರೈತರು ಜಾಗ್ರತೆ ವಹಿಸಬೇಕು ಎಂದು ಮಣ್ಣು ವಿಜ್ಞಾನಿ ಡಾ. ಗಣಪತಿ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಹಳೇಮುಗಳಗೆರೆಯಲ್ಲಿ ರಸಗೊಬ್ಬರಗಳ ಕಲಬೆರಿಕೆ ಪತ್ತೆ ಹಚ್ಚುವುದು ಹೇಗೆ ಎಂದು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ ನಡೆಸಲಾಯಿತು.
ರಸಗೊಬ್ಬರ ಕೊಳ್ಳುವಾಗ ಗಮನಿಸಬೇಕಾದ ಅಂಶಗಳು
- ರಸಗೊಬ್ಬರ ಚೀಲದ ಬಾಯಿ ಹೊಲೆದಿರಬೇಕು. ಕೈಯಿಂದ ಹೊಲೆದಿದ್ದರೆ ಅದಕ್ಕೆ ಸೀಸದ ಮೊಹರಿರಬೇಕು.
- ಚೀಲವನ್ನು ತೂಕ ಮಾಡಿಸಿಯೇ ಕೊಳ್ಳಬೇಕು.
- ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು ಮತ್ತು ಕೊಂಡಿದ್ದಕ್ಕೆ ನಮೂನೆ ಎಂ.ನಲ್ಲಿ ರಸೀತಿ ಪಡೆಯಬೇಕು. ಇದರಲ್ಲಿ ಖರೀದಿಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿದ್ದು ರೈತರ ಮತ್ತು ಮಾರಾಟಗಾರರ ಸಹಿಯಿರಬೇಕು.
- ಚೀಲದ ಮೇಲೆ ರಸಗೊಬ್ಬರದ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ರಾಂಡ್, ಪೋಷಕಾಂಶಗಳ ವಿವರ, ಗರಿಷ್ಠ ಮಾರಾಟ ಬೆಲೆ, ಗರಿಷ್ಠ ಮತ್ತು ನಿವ್ವಳ ತೂಕ, ಬ್ಯಾಚ್ ಸಂಖ್ಯೆ ಮತ್ತು ರಿಜಿಸ್ಟ್ರೇಷನ್ ಸಂಖ್ಯೆ~ ಇರುವುದನ್ನು ಗಮನಿಸಬೇಕು.
- ಪ್ರಾಥಮಿಕ ಹಂತದಲ್ಲಿಯೇ ಈ ವಿವರ ಪರೀಕ್ಷಿಸಿ ಅಧಿಕೃತ ಮಾರಾಟಗಾರರಿಂದ ಮಾತ್ರ ಕೊಂಡರೆ ನಕಲಿ ಹಾಗೂ ಕಲಬೆರಕೆ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ಕೊಂಡ ನಂತರ ಕೆಲವು ಸರಳ ಪರೀಕ್ಷೆಗಳಿಂದ ಅವು ನಕಲಿಯೇ ಅಥವಾ ಕಲಬೆರಕೆಯಾಗಿದೆಯೇ ಎಂಬುದನ್ನು ಪತ್ತೆ ಹಚ್ಚಬಹುದು.
ಪರೀಕ್ಷೆ ಮಾಡುವುದು ಹೇಗೆ?
ಭೌತಿಕ ಪರೀಕ್ಷೆ
ಹರಳು ರೂಪದ ರಸಗೊಬ್ಬರಗಳು ಒಂದೇ ಬಣ್ಣ, ಆಕಾರ, ಗಾತ್ರದಿಂದ ಕೂಡಿದ್ದು ಕಣ್ಣಿಗೆ ಕಾಣುವಂತಹ ಇತರೆ ಪದಾರ್ಥಗಳು ಇರಬಾರದು. ಹೆಚ್ಚು ಪುಡಿ ಮತ್ತು ಹೆಚ್ಚಿನ ತೇವಾಂಶ ಹೊಂದಿರಬಾರದು. ಹರಳು ರೂಪದ ರಂಜಕ ಗೊಬ್ಬರ ಮತ್ತು ಜಿಪ್ಪಂ ಹರಳುಗಳು ಮೃದುವಾಗಿದ್ದು ಬೇರೆ ರಸಗೊಬ್ಬರದ ಹರಳುಗಳು ಗಟ್ಟಿಯಾಗಿರುತ್ತವೆ.
ನೀರಿನಲ್ಲಿ ಕರಗುವ ಪರೀಕ್ಷೆ
ಕೆಲವು ರಸಗೊಬ್ಬರಗಳು (ಯೂರಿಯ, ಅಮೋನಿಯಂ ಸಲ್ವೇಟ್, ಅಮೋನಿಯಂ ಕ್ಲೋರೈಡ್, ಮ್ಯೂರಿಯೇಟ್ ಆಫ್ ಪೊಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್) ನೀರಿನಲ್ಲಿ ಸಂಪೂರ್ಣ ಕರಗುತ್ತವೆ. ಅವನ್ನು ಪರೀಕ್ಷೆಗಾಗಿ ನೀರಿನಲ್ಲಿ ಹಾಕಿದಾಗ ಕರಗದೆ ಇರುವ ಪದಾರ್ಥ ಉಳಿದರೆ ಅದು ಕಲಬೆರಕೆ.
ಕೆಲವು ರಸಗೊಬ್ಬರಗಳು ನೀರಿನಲ್ಲಿ ಕರಗಿಸಿದಾಗ ತಣ್ಣನೆ ಅನುಭವ ನೀಡುತ್ತವೆ (ಯೂರಿಯ, ಅಮೋನಿಯಂ ಕ್ಲೋರೈಡ್, ಎಂಒಪಿ, ಸಿಎಎನ್, ನೈಟ್ರೋ ಫಾಸ್ಪೇಟ್ 20:20, 15:15:15, 19:19:19 ಇತ್ಯಾದಿ). ಹಾಗಿರದಿದ್ದಲ್ಲಿ ಅವು ಕಲಬೆರಕೆಯಾಗಿರುವ ಸಾಧ್ಯತೆಗಳಿರುತ್ತವೆ.
ಬಸಿ ಮಾಡುವ ಪರೀಕ್ಷೆ
ಯೂರಿಯವನ್ನು ಬಿಸಿ ಮಾಡಿದಾಗ ಸಂಪೂರ್ಣವಾಗಿ ಕರಗುತ್ತದೆ. ಕರಗದೇ ಇರುವ ವಸ್ತುಗಳು ಉಳಿದರೆ ಕಲಬೆರಕೆಯಾಗಿದೆ ಎಂದು ತಿಳಿಯಬೇಕು. ಡಿಎಪಿಯನ್ನು ಒಂದು ತಗಡಿನ ಮೇಲೆ ಬಿಸಿ ಮಾಡಿದಾಗ ಹರಳುಗಳು ಸುಣ್ಣದಂತೆ ಅರಳುತ್ತವೆ ಮತ್ತು ತಳಕ್ಕೆ ಅಂಟಿಕೊಳ್ಳುತ್ತವೆ. ಇದಿಲ್ಲದಿದ್ದರೆ
Also read: ಶಿವಮೊಗ್ಗ | ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಕುವೆಂಪು, ರಾಮಾನುಜನ್ ಜನ್ಮದಿನ ಆಚರಣೆ
ಪೋಷಕಾಂಶಗಳ ಪರೀಕ್ಷೆ
ಸಾರಜನಕದ ಪರೀಕ್ಷೆ: ಅಮೋನಿಯ ರೂಪದ ಸಾರಜನಕವಿರುವ ರಸಗೊಬ್ಬರಗಳನ್ನು ತೇವ ಮಾಡಿ ಸುಟ್ಟ ಸುಣ್ಣದಿಂದ ತೀಡಿದಾಗ ಅಮೋನಿಯ ಘಾಟು ವಾಸನೆ ಬರುತ್ತದೆ. ಅದು ಬರದಿದ್ದರೆ ನಕಲಿ ಎಂದು ತಿಳಿಯಬಹುದು. ಹೀಗೆ 30 ರಸಗೊಬ್ಬರಗಳ ಪರೀಕ್ಷೆ ಮಾಡಬಹುದು.
ರಂಜಕದ ಪರೀಕ್ಷೆ
ಸ್ವಲ್ಪ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ. ಸೂಪರ್ ಫಾಸ್ಪೇಟ್ ಮತ್ತು ಡಿಎಪಿ ರಸಗೊಬ್ಬರಗಳಾದಲ್ಲಿ ಸಿಲ್ವರ್ ನೈಟ್ರೇಟ್ ದ್ರಾವಣ, ಇತರೆ ಸಾರಜನಕ, ರಂಜಕ ಮತ್ತು ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ರಸಗೊಬ್ಬರಗಳಿಗೆ ಫೆರಿ ಕ್ಲೋರೈಡ್ ದ್ರಾವಣ ಹಾಕಿದಾಗ ಹಳದಿ, ಬಿಳಿ ಮಿಶ್ರಿತ ಹಳದಿ ಬಣ್ಣ ಬರಬೇಕು.
ಪೊಟ್ಯಾಷ್ ಪರೀಕ್ಷೆ: ಪೊಟ್ಯಾಷ್ ಅಂಶವನ್ನು ಕೋಬಾಲ್ಟ್ ನೈಟ್ರೇಟ್ ದ್ರಾವಣದಿಂದ ಕಂಡು ಹಿಡಿಯಬಹುದು. ನಕಲಿ ಗೊಬ್ಬರ ಕೊಬಾಲ್ಟ್ ನೈಟ್ರೇಟ್‌ನೊಂದಿಗೆ ಬೆರೆತರೂ ಹಳದಿ ಬಣ್ಣವನ್ನು ಕೊಡುವುದಿಲ್ಲ ಎಂಬ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ನೀಡಲಾಯಿತು. ಊರಿನ ರೈತರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಉಪಯೋಗ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post