ಕರಾವಳಿಯಲ್ಲಿ ಮನೆಮಾತಾಗಿರುವ ಕಲಾವಿದೆ ಶ್ವೇತಾ ಪೂಜಾರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಆರಂಭದಲ್ಲಿಯೇ ಶುಭ ಕೋರುವ ಮೂಲಕ ಇವರ ಹುಟ್ಟು ಹಬ್ಬದ ಈ ಶುಭದಿನದಂದು, ಯಕ್ಷಗಾನ ಲೋಕದ ಯುವ ಮಹಿಳಾ ಪ್ರತಿಭೆಯಾದ ಇವರ ಕಿರು ಪರಿಚಯ ಮಾಡಲು ಬಯಸುತ್ತೇನೆ.
ಯಕ್ಷಗಾನ ಕರಾವಳಿ ಕನ್ನಡಿಗರ ಕನಸಿನ ಕಲೆ. ಯಕ್ಷಗಾನ ಕಡಲ ಮಕ್ಕಳ ಕಲ್ಪನೆಯ ಕೂಸು. ಕನ್ನಡದ ಕಂಪು ಇಂಪುಗಳನ್ನು ಕಡಲಾಚೆಗೆ ಪಸರಿಸಿದ ಪರಮ ಶ್ರೇಷ್ಟ ಕಲೆ ಯಕ್ಷಗಾನ. ಕರಾವಳಿ ಭಾಗದಲ್ಲಿ ಯಕ್ಷಗಾನ ಕಲೆ ಜನ ಮಾನಸದಲ್ಲಿ ಒಂದು ಮನೋರಂಜನಾ ಕಲೆಯಾಗದೆ ಜೀವನ ಸಂದೇಶವನ್ನು ತಿಳಿಸುವ ಮಹೋನ್ನತ ಕಲೆ ಎಂದರೆ ತಪ್ಪಾಗಲಾರದು.
ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ತಲಾ ತಲಾಂತರಗಳಿಂದಲು ಯಕ್ಷಗಾನ ಗಂಡುಕಲೆಯೆಂದು ಪ್ರಸಿದ್ಧಿ ಗಳಿಸಿದೆ. ಆದರೆ ಈಗ ಪುರುಷರಷ್ಟೇ ಮಹಿಳೆಯರು ಕೂಡ ಯಕ್ಷಗಾನದಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿರುವುದು ಗಮನಾರ್ಹ ವಿಷಯ. ಮಂಗಳೂರಿನ ಸಮೀಪದ ಮಲ್ಲೂರಿನ ನಿವಾಸಿಗಳಾದ ಶೀನಾ ಪೂಜಾರಿ ಮತ್ತು ಶಾಂತ ದಂಪತಿಗಳ ಪುತ್ರಿ ಶ್ವೇತಾ ಪೂಜಾರಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲ ಹೊತ್ತ ಯುವ ಕಲಾವಿದೆ. ಶ್ವೇತಾ ತಾವು 10ನೆಯ ತರಗತಿ ಇರುವಾಗ ಮೊದಲ ಬಾರಿ ಯಕ್ಷಗಾನದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು.
ದೇವದಾಸ್ ಅರ್ಕುಲ ಎನ್ನುವವರಿಂದ ಯಕ್ಷಗಾನದ ಹೆಜ್ಜೆ ಕಲಿತು, ಸತೀಶ್ ಮಡಿವಾಳ ಕಾರ್ಕಳ ಇವರಿಂದ ಅಭಿನಯ ನಾಟ್ಯವನ್ನು ಅಭ್ಯಾಸ ಮಾಡಿ, ರಕ್ಷಿತ್ ಶೆಟ್ಟಿ ಪಡ್ರೆ ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ಕಲಾವಿದೆ ಶ್ವೇತಾ ಪೂಜಾರಿ. ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಯಕ್ಷಾಗಾನಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಉದ್ದೇಶವನ್ನು ಹೊತ್ತು ಬೆಳೆಯುತ್ತಿರುವ ಮಹಿಳಾ ಪ್ರತಿಭೆ ಶ್ವೇತಾ ಪೂಜಾರಿ.
ಒಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಶ್ವೇತಾ ತಮ್ಮ ವೃತ್ತಿಯ ಜೊತೆಗೆ ಶ್ರೀ ಸುಬ್ರಹ್ಮಣ್ಯ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿ ತಂಡ ಗುರುಪುರ ಕೈಕಂಬ ಇದರ ಸದಸ್ಯೆಯಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಲಕ್ಷ್ಮೀ, ದೇವಿ, ವಿಷ್ಣು, ದೇವೇಂದ್ರ, ಈಶ್ವರ ಹೀಗೆ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಶ್ವೇತಾ ಅವರಿಗೆ ಸುದರ್ಶನ ವಿಜಯ ಪ್ರಸಂಗದಲ್ಲಿ ನಿರ್ವಹಿಸದ ಲಕ್ಷ್ಮಿಯ ಪಾತ್ರ ಅತೀ ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿತು.
ಪ್ರಾರಂಭದಲ್ಲಿ ಶ್ವೇತಾ ಅವರಿಗೆ ಅವರ ತಂದೆ ತಾಯಿ ಯಕ್ಷಗಾನಕ್ಕೆ ಹೋಗುವುದಕ್ಕೆ ಬೆಂಬಲವನ್ನು ನೀಡಲಿಲ್ಲ. ಆದರೆ ಶ್ವೇತಾ ಒಂದೆರಡು ಪ್ರದರ್ಶನದಲ್ಲೇ ತಮ್ಮ ನೃತ್ಯ ಹಾಗೂ ಅಭಿನಯದ ಮೂಲಕ ಜನರನ್ನು ಆಕರ್ಷಿಸತೊಡಗಿದರು. ಮಗಳ ಕಲಾ ಪ್ರೇಮದ ಬಗ್ಗೆ ಊರಿನ ಜನರು ಹೆಮ್ಮೆಯಿಂದ ಮಾತನಾಡುವುದನ್ನು ನೋಡಿ ಶ್ವೇತಾ ಅವರ ತಂದೆ ಮಗಳ ಯಕ್ಷಗಾನ ಹವ್ಯಾಸಕ್ಕೆ ಬೆಂಬಲವನ್ನು ನೀಡುತ್ತಾರೆ. ಶ್ವೇತಾ ತಮ್ಮ ಮನೆಯ ಸಮೀಪದಲ್ಲಿ ಎಲ್ಲೇ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿದ್ದರೂ ಇಡೀ ರಾತ್ರಿ ನಿದ್ದೆಬಿಟ್ಟು ಯಕ್ಷಗಾನವನ್ನು ವೀಕ್ಷಿಸಿ ನಾನು ಕೂಡ ಅವರಂತೆ ನಟಿಸಬೇಕು ಎಂದು ಕನಸು ಕಾಣುತ್ತಾ ಪರಿಶ್ರಮ ಪಟ್ಟು ಬೆಳೆದ ಹುಡುಗಿ.
ಹೀಗೆ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಯ ಅಂಬೆಗಾಲಿಡುತ್ತಿರುವ ಕುಮಾರಿ ಶ್ವೇತಾ ಪೂಜಾರಿ ಇವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮಾಡಿ ಗೌರವಿಸಲಾಗಿದೆ. ಯಕ್ಷಗಾನದಲ್ಲಿ ನಾನು ಮಾಡಿರುವ ಸಾಧನೆ ಕೇವಲ ಹತ್ತು ಶೇಕಡಾ ಅಷ್ಟೇ, ಇನ್ನು ತೊಂಬತ್ತು ಶೇಕಡಾ ಸಾಧನೆ ಮಾಡಲು ಬಾಕಿಯಿದೆ ಎನ್ನುವುದು ಶ್ವೇತಾ ಅವರ ಮನದಾಳದ ಮಾತುಗಳು.
ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಯುವ ಮಹಿಳಾ ಪ್ರತಿಭೆ ಶ್ವೇತಾ ಪೂಜಾರಿ ಅವರು ಇವತ್ತು ತಮ್ಮ ಹುಟ್ಟು ಹಬ್ಬವನ್ನು ಆಚರಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುವುದರೊಂದಿಗೆ ನಿಮ್ಮ ಮುಂದಿನ ಜೀವನ ಸುಖವಾಗಿರಲಿ ಎಂದು ಆಶಿಸುತ್ತೇನೆ.
ಯುವ ಜನತೆ ಯಕ್ಷಗಾನ ಕ್ಷೇತ್ರದಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಯಕ್ಷಗಾನ ರಂಗಕ್ಕೆ ಸ್ವಇಚ್ಛೆಯಿಂದ ಬಂದು ಯಕ್ಷರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ನಿಮ್ಮ ಮೇಲೆ ಯಕ್ಷಮಾತೆಯ ಆಶೀರ್ವಾದ ಸದಾ ಇರಲಿ ಎಂದು ಕಲಾಭಿಮಾನಿಗಳ ಪರವಾಗಿ ವಿನಂತಿಸುತ್ತೇನೆ.
ಲೇಖನ: ಗೌರೀಷ್ ಆವರ್ಸೆ
ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post