ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಕಲಿ ಅಶ್ಲೀಲ ಸಿಡಿ ತಯಾರಿಸಿ, ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾನಹಾನಿಗೆ ಪ್ರಯತ್ನಿಸಿದ್ದ ಪ್ರಕರಣದ ವಿಚಾರಣೆಯನ್ನು ರದ್ದು ಮಾಡುವಂತೆ ಕೋರಿ ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ಒಂದು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗಿ ಕುಮಟಾದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಶ್ರೀಗಳ ತೇಜೋವಧೆ ಮಾಡುವ ಏಕೋದ್ದೇಶದಿಂದ ದುಷ್ಟಕೂಟವನ್ನು ಕಟ್ಟಿಕೊಂಡು ನಕಲಿ ಅಶ್ಲೀಲ ಸಿಡಿ ತಯಾರಿಸಿ, ಶ್ರೀಗಳ ಮಾನಹರಣವನ್ನು ಮಾಡುವ ಕುಪ್ರಯತ್ನ 2010 ರಲ್ಲಿ ನಡೆದಿತ್ತು. ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ; ಶ್ರೀಗಳ ಹಾವ ಭಾವಗಳನ್ನು ಆತನಿಗೆ ಕಲಿಸಿ ಚಿತ್ರೀಕರಿಸಲಾಗಿತ್ತು. ಹಾಲಿವುಡ್ ತಂತ್ರಜ್ಞಾನ ಬಳಸಿ, ಶ್ರೀಗಳ ಚಿತ್ರಗಳನ್ನು ಆಶ್ಲೀಲ ವಿಡಿಯೋಗಳ ಜೊತೆ ಸೇರಿಸಿ ಅದನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಶ್ರೀರಾಮಚಂದ್ರಾಪುರಮಠದ ಶ್ರೀಗಳ ಧವಳ ಕೀರ್ತಿಗೆ ಮಸಿ ಬಳಿಯುವ ಕಾರ್ಯತಂತ್ರವನ್ನು ರೂಪಿಸಿದ್ದರು ಶ್ರೀಮಠ ಆರೋಪಿಸಿದೆ.
ಈ ಮಧ್ಯೆ ಈ ಷಡ್ಯಂತ್ರ ನಡೆಯುತ್ತಿರುವುದು ಶ್ರೀಮಠದ ಗಮನಕ್ಕೆ ಬಂದು, ಗೋಪಾಲ್ ಹೊಸೂರ್ ನೇತೃತ್ವದ ಪೋಲಿಸರು ದಾಳಿ ಮಾಡಿದಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಈ ಹೀನಕಾರ್ಯ ಅಲ್ಲಿಗೆ ನಿಂತಿತು.
ವಿಚಾರಣೆ ನಡೆಸಿದ ಪೋಲಿಸರು ಆರೋಪಿಗಳ ವಿರುದ್ಧ ಚಾರ್ಜ್’ಶೀಟ್ ಸಲ್ಲಿಸಿದ್ದು, ಪ್ರಸ್ತುತ ಪ್ರಕರಣ ಕುಮಟಾದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಚಾರ್ಜ್ ಫ್ರೇಮಿಂಗ್ ಹಂತದಲ್ಲಿದ್ದು, ಆರೋಪಿಗಳು ನ್ಯಾಯಾಲಯದ ಕಲಾಪಕ್ಕೆ ಹಲವು ಬಾರಿ ಹಾಜರಾಗದೇ, ತಮ್ಮ ವಿರುದ್ದದ ಮೊಕದ್ದಮೆಯಲ್ಲಿ ವಿಚಾರಣೆಗೆ ತಡೆ ನೀಡಿ, ಮೊಕದ್ದಮೆಯನ್ನು ವಜಾಗೊಳಿಸುವಂತೆ ಆರೋಪಿಗಳು ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ಅರ್ಜಿಯ ಬಗ್ಗೆ ಸುದೀರ್ಘವಾದ ವಾದವಿವಾದಗಳನ್ನ ಆಲಿಸಿದ ಉಚ್ಚ ನ್ಯಾಯಾಲಯವು, ಇಂದು ಈ ಬಗ್ಗೆ ಆದೇಶಿಸಿ, ಆರೋಪಿಗಳ ಅರ್ಜಿಯನ್ನ ವಜಾಗೊಳಿಸಿ, ಒಂದು ವರ್ಷದ ಅವಧಿಯಲ್ಲಿ ಕೇಸನ್ನು ಮುಕ್ತಾಯಗೊಳಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚನೆ ನೀಡುವ ಮೂಲಕ ಆದೇಶ ನೀಡ್ತಿದೆ.
ತಂತ್ರಜ್ಞಾನದ ದುರ್ಬಳಕೆಗೆ, ತಂತ್ರಜ್ಞಾನದ ಸದ್ಭಳಕೆಯ ಮೂಲಕ ಉತ್ತರ
ಈ ಕುರಿತಂತೆ ಶ್ರೀಮಠ ಪ್ರತಿಕ್ರಿಯೆ ನೀಡಿದ್ದು, ಅಂದು – ಅತ್ಯಾಧುನಿಕ ಹಾಲಿವುಡ್ ತಂತ್ರಜ್ಞಾನ ಬಳಸಿ, ಪೂಜ್ಯ ಶ್ರೀಗಳ ನಕಲಿ ಅಶ್ಲೀಲ ಸಿಡಿ ತಯಾರಿಸಿ; ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಶ್ರೀಗಳ ಮಾನಹಾನಿಗೆ ಆರೋಪಿಗಳು ಯತ್ನಿಸಿದ್ದರು. ಇಂದು – ಲಾಕ್’ಡೌನಂತಹಾ ವಿಕಟ ಸನ್ನಿವೇಶದ ಸಂದರ್ಭದಲ್ಲೂ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು, ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉಚ್ಚನ್ಯಾಯಾಲಯ ಧಾರವಾಡ ಪೀಠದ ನ್ಯಾ. ಸೂರಜ್ ಗೋವಿಂದರಾಜ್ ಈ ಆದೇಶವನ್ನು ನೀಡಿದರು. ಆ ಮೂಲಕ ತಂತ್ರಜ್ಞಾನದ ದುರ್ಬಳಕೆಯ ಪ್ರಕರಣಕ್ಕೆ, ತಂತ್ರಜ್ಞಾನದ ಸದ್ಭಳಕೆಯ ಮೂಲಕ ಉತ್ತರ ಸಿಕ್ಕಿದಂತಾಗಿದೆ ಎಂದಿದೆ.
ಶ್ರೀಗಳ ಪೀಠತ್ಯಾಗ ಮಾಡಿಸಿ, ಅವಿಚ್ಛಿನ್ನ ಶಾಂಕರಪರಂಪರೆಗೆ ತೊಡಕುಂಟು ಮಾಡುವ ಉದ್ದೇಶದಿಂದ ಮಾಡಲಾದ ಅತ್ಯಾಚಾರದ ಮಿಥ್ಯಾರೋಪದ ಪೂರ್ವಭಾವಿಯಾಗಿ ನಡೆದ ಈ ನಕಲಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಪೂಜ್ಯ ಶ್ರೀಗಳ ಪೀಠಾರೋಹಣದ ವಾರ್ಷಿಕೋತ್ಸವದಂದೇ ಬಂದಿರುವುದು ವಿಶೇಷವೇ ಆಗಿದೆ ಎಂದು ಶ್ರೀಮಠ ಹೇಳಿದೆ.
ತಾಂತ್ರಿಕ ಕಾರಣಗಳನ್ನು ಬಳಸಿಕೊಂಡು, ಸುಮಾರು 10 ವರ್ಷಗಳಿಂದ ಪ್ರಕರಣದ ಆರೋಪದಿಂದ ತಪ್ಪಿಸಿಕೊಳ್ಳಲು ಸದರಿ ಆರೋಪಿಗಳು ಪ್ರಯತ್ನಿಸುತ್ತಿದ್ದರು. ಪೂಜ್ಯ ಶ್ರೀಗಳ ಧವಳ ಕೀರ್ತಿಗೆ ಮಸಿ ಬಳಿಯುವ ಕುಪ್ರಯತ್ನ ಮಾಡಿದ್ದ ಆರೋಪಿಗಳಿಗೆ ಹಾಗೂ ಅವರಿಗೆ ಬೆಂಬಲವಾಗಿರುವ ಕಾಣದ ಕೈಗಳಿಗೆ ಸೂಕ್ತ ಶಿಕ್ಷೆಯಾಗಲಿ ಎಂಬುದು ಭಕ್ತರ ಅಪೇಕ್ಷೆ ಎಂದು ಶ್ರೀಮಠ ಪ್ರತಿಕ್ರಿಯೆ ನೀಡಿದೆ.
Get in Touch With Us info@kalpa.news Whatsapp: 9481252093
Discussion about this post