ಕಲ್ಪ ಮೀಡಿಯಾ ಹೌಸ್ | ಸೊರಬ | (ವರದಿ: ಮಧುರಾಮ್, ಸೊರಬ) |
ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಶನಿವಾರ ಸಂಜೆ ಸೊರಬ (Soraba) ಪಟ್ಟಣದಲ್ಲಿ ಪಂಜಿನ ಮೆರವಣಿಗೆ (Torch Rally) ನಡೆಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಬಳಿಕ ತಾಲೂಕಿನ ಆರಾಧ್ಯ ದೈವ ಶ್ರೀ ರಂಗನಾಥ ದೇವಾಲಯದ ಆವರಣಕ್ಕೆ ತೆರಳಿ, ಕಾನುಕೇರಿ ಮಠದ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
Also Read>> 2027 ವಿಶ್ವಕಪ್‌ಗೆ ವೆಸ್ಟ್ ಇಂಡೀಸ್‌ಗೆ ಮತ್ತೊಂದು ಆಘಾತ | ಸತತ ಮೂರನೇ ಬಾರಿ ಅರ್ಹತಾ ಸುತ್ತಿನ ಹಾದಿ
ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ದೇಶಭಕ್ತಿಯ ಘೋಷಣೆಗಳ ನಡುವೆ ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ವಲಯ ಪ್ರಚಾರಕ ನವೀನ ಸುಬ್ರಹ್ಮಣ್ಯ, “ಅಖಂಡ ಭಾರತಕ್ಕಾಗಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಅಂದಿನ ಕೆಲವರ ಸ್ವಾರ್ಥದಿಂದಾಗಿ ದೇಶ ವಿಭಜನೆ ಮಾಡುವ ಮೂಲಕ ಅಪಮೌಲ್ಯಗೊಳಿಸಲಾಯಿತು. ಅಂದು ನೂರಾರು ವರ್ಷಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟವು ಇಂದಿನ ನಕ್ಷೆಯಲ್ಲಿರುವ ಭಾರತಕ್ಕಾಗಿ ಮಾತ್ರ ನಡೆದಿರಲಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಒಳಗೊಂಡ ಭೂಪ್ರದೇಶವೂ ಭಾರತದ ಭೂಭಾಗವಾಗಿತ್ತು. ಕೆಲವರ ತಪ್ಪು ನಿರ್ಧಾರಗಳಿಂದ ದೇಶವು ಮತೀಯ ಆಧಾರದ ಮೇಲೆ ವಿಭಜನೆಯಾಯಿತು,” ಎಂದರು.
“ದೇಶ ವಿಭಜನೆಯ ಇತಿಹಾಸವನ್ನು ಯುವ ಸಮೂಹ ಅರಿತುಕೊಳ್ಳಬೇಕು. ದೇಶದ ಅಖಂಡತೆ ಹಾಗೂ ರಾಷ್ಟ್ರೀಯ ಭದ್ರತೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ,” ಎಂದು ಹೇಳಿದರು.
Soraba : ಸೈನಿಕರ ತ್ಯಾಗ ಮತ್ತು ಬಲಿದಾನದ ಫಲವಾಗಿದೆ
ಶ್ರೀ ಕುಮಾರ ಕೆಂಪಿನ ಸಿದ್ದವೃಷಭೇಂದ್ರ ಜಡೆ ಮಠ, ಮಾತನಾಡಿ, “ದೇಶದ ಗಡಿಗಳನ್ನು ಹಗಲಿರುಳು ಸೈನಿಕರು ಕಾಯುತ್ತಿರುವುದರಿಂದ ಶತ್ರು ರಾಷ್ಟ್ರಗಳ ಉಪಟಳವನ್ನು ದಿಟ್ಟವಾಗಿ ಎದುರಿಸಿ ನಾವು ಸುರಕ್ಷಿತವಾಗಿ ಬದುಕುತ್ತಿದ್ದೇವೆ. ಅದೇ ರೀತಿ ದೇಶದೊಳಗಿನ ಭಯೋತ್ಪಾದನೆ ಹಾಗೂ ಸಂಘರ್ಷಗಳನ್ನು ಎದುರಿಸಲು ಯುವ ಸಮೂಹ ಸದಾ ಸಿದ್ಧರಾಗಬೇಕು. ಭಾರತದ ಅಖಂಡತೆಗೆ ಧಕ್ಕೆ ತಂದ ನೈಜ ಇತಿಹಾಸವನ್ನು ಭಾರತೀಯರು ತಿಳಿದುಕೊಳ್ಳಬೇಕು. ದೇಶದ ಭದ್ರತೆ ಹಾಗೂ ಅಖಂಡತೆಗಾಗಿ ಹಿಂದೂ ಸಮಾಜ ಒಗ್ಗಟ್ಟಾಗಬೇಕು. ಸ್ವಾತಂತ್ರ್ಯವು ಸಾವಿರಾರು ಮಂದಿಯ ತ್ಯಾಗ ಮತ್ತು ಬಲಿದಾನದ ಫಲವಾಗಿದೆ,” ಎಂದರು.
ತಾಲೂಕಿನ ವಿವಿಧ ಕೇಂದ್ರಗಳಿಂದ ಆಗಮಿಸಿದ್ದ ಹಿಂದೂ ಜಾಗರಣ ವೇದಿಕೆಯ ಸದಸ್ಯರು, ಮಾಜಿ ಯೋಧರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನೂರಾರು ದೇಶಭಕ್ತರು, ಮಹಿಳೆಯರು ಹಾಗೂ ಮಕ್ಕಳು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









