ಕಲ್ಪ ಮೀಡಿಯಾ ಹೌಸ್ | ಸೊರಬ |
ಜೈವಿಕ ವೈವಿಧ್ಯ ಅಧಿನಿಯಮಗಳ ಪ್ರಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಡ್ಡಾಯ ಜೀವವೈವಿಧ್ಯ ನಿರ್ವಹಣಾ ಸಮಿತಿ ಸ್ಥಾಪನೆಯಾಗಬೇಕು ಎಂದು ವೃಕ್ಷಲಕ್ಷ ಆಂದೋಲನ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯತ್ ಅಧಿಕಾರಿ, ಸದಸ್ಯರಿಗೆ ನಡೆದ ಕಾರ್ಯಾಗಾರ ಉದ್ಧೇಶಿಸಿ ಮಾತನಾಡಿದರು.
ಅರಣ್ಯೇತರ ಭೂಮಿಯಲ್ಲಿ ಸುಸ್ಥಿರ ಅಭಿವೃದ್ಧಿ ಮುಖ್ಯ. ಪ್ರಸ್ತುತ ನಮ್ಮೆಲ್ಲರ ಕಾರ್ಯಚಟುವಟಿಕೆಗಳ ತೀವ್ರತೆ ಗಮನಿಸಿದರೆ ಜೀವವೈವಿಧ್ಯತೆಗೆ ಆಗಿರುವ ಹಾನಿಯ ಪ್ರಮಾಣವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಭೂ ಕುಸಿತ, ಅರಣ್ಯನಾಶ, ಕೃಷಿ ಪದ್ಧತಿ ಬದಲಾವಣೆ, ಯಾಂತ್ರಿಕತೆಯಿಂದ ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯೇತರ ಭೂಮಿಯಲ್ಲೂ ಸುಸ್ಥಿರ ಅಭಿವೃದ್ಧಿ ಚಟುವಟಿಕೆ ನಡೆಸುವುದು ತೀರಾ ಅಗತ್ಯವಿದೆ ಎಂದರು.
ಅರಣ್ಯ ಭೂಮಿ, ಕೃಷಿ ಜಮೀನು, ಸಂರಕ್ಷಿತ ಅರಣ್ಯ ಪ್ರದೇಶ, ಅರಣ್ಯ ಸಂಪತ್ತು, ಸಸ್ಯ-ಪ್ರಾಣಿ ಪ್ರಭೇದ ತಳಿಯ ಮಾಹಿತಿ, ಔಷಧ ಗಿಡಮೂಲಿಕೆಗಳ ವಿವರ, ಪಾರಂಪರಿಕ ತಾಣಗಳ ಅಂಕಿ ಅಂಶಗಳನ್ನು ದಾಖಲಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವವೈವಿಧ್ಯ ಸಮಿತಿ ರಚನೆಯಾಗಬೇಕು, ಜಲಾನಯನ ಪ್ರದೇಶದ ಮೇಲಿನ ಮಾನವ ದಾಳಿ ತಡೆಯುವುದು ಅಗತ್ಯವಿದೆ.ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ದೊಡ್ಡ ಅಭಿವೃದ್ಧಿ ಬಗ್ಗೆ ನಿಗಾ ವಹಿಸುವ ಅಗತ್ಯ, ಆವಾಸ ಸ್ಥಾನಗಳ ಗುರುತಿಸುವಿಕೆ, ಸಂರಕ್ಷಣೆ, ಸೂಕ್ಷ್ಮಾಣುಜೀವಿ, ಹಾಗೂ ಜೈವಿಕ ಸಂಪನ್ಮೂಲಗಳ ಸಂಬಂಧಿತ ಜ್ಞಾನವನ್ನು ಸಮಿತಿ ಹೊಂದಿರಬೇಕು.
ರೈತರು ಕೀಟಾನಾಶಕಗಳ ಗಂಭೀರ ಪರಿಣಾಮ ಅರ್ಥಮಾಡಿಕೊಳ್ಳಬೇಕು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಯುವ ದೊಡ್ಡ ಅಭಿವೃದ್ಧಿ ಕಾರ್ಯಕ್ರಮ, ಕಳ್ಳ ಸಾಗಾಣಿಕೆಗಳ ಬಗ್ಗೆ ನಿಗಾವಹಿಸಬೇಕು. ಸಮಿತಿಗೆ ಸ್ವಾತಂತ್ರ್ಯ ಇದ್ದು ಪರಿಸರ ಸಂರಕ್ಷಣೆಯ ಕಾರ್ಯವನ್ನು ಚುರುಕುಗೊಳಿಸಬೇಕು ಎಂದರು.
ಸೊರಬ ತಾಲ್ಲೂಕು ಜೀವವೈವಿಧ್ಯ ನಿರ್ವಹಣ ಸಮಿತಿ ಸದಸ್ಯ ಶ್ರೀಪಾದ್ ಬಿಚ್ಚುಗತ್ತಿ, ಜೀವವೈವಿಧ್ಯತೆಯ ರಕ್ಷಣೆಗೆ ಗ್ರಾಪಂ ಆಡಳಿತದಲ್ಲಿ ವಿಫುಲ ಅವಕಾಶವಿದ್ದು, ಮೊದಲು ಗ್ರಾಪಂನ ಆಡಳಿತಾತ್ಮಕ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಆಡಳಿತದ ಸಮರ್ಥ ಬಳಕೆಯಾಗಬೇಕು ಆಗ ಜೀವವೈವಿಧ್ಯ ನಿರ್ವಹಣೆಯ ವಿಧಾನಗಳು ಸುಲಭವಾಗುತ್ತದೆ ಎಂದರು.
ಮ್ಯಾಮ್‌ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೈಲಾ ಎನ್., ಎಸಿಎಫ್’ ಪ್ರಕಾಶ್, ವಲಯ ಅರಣ್ಯಾಧಿಕಾರಿಗಳಾದ ಮಧುಕರ್, ಲೋಕೇಶ್ ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಪಂ ಅಧ್ಯಕ್ಷ, ಸದಸ್ಯರು, ಅಧಿಕಾರಿಗಳು, ಪರಿಸರಾಸಕ್ತರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post