ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಶಕುನವಳ್ಳಿ #Shakunavalli ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರಶೇಖರ್ ಹೆಂಡಗಾರ್ ಅವರನ್ನು ಸದಸ್ಯ ಸ್ಥಾನದಿಂದ ವಜಾ ಮಾಡಲಾಗಿದ್ದು, ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಲಾಗಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಪೀಠಾಧಿಕಾರಿ ಶಿವಕುಮಾರ್ ಅವರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಸದಸ್ಯ ಸ್ಥಾನದಿಂದ ತೆಗೆದು ಹಾಕಿ, ಅರು ವರ್ಷಗಳ ಕಾಲ ಚುನಾವಣೆಗೆ #Election ಸ್ಪರ್ಧಿಸದಂತೆ ನಿಷೇಧ ಹೇರಿದ್ದಾರೆ.
ಏನಿದು ಪ್ರಕರಣ?
ಶಿವಮೊಗ್ಗ ಜಿಲ್ಲೆ ಸೊರಬ #Soraba ತಾಲೂಕಿನ ಶಕುನವಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಚಂದ್ರಶೇಖರ್ ಹೆಂಡಗಾರ್ ಅವರು ಶಕುನವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 2021-22 ನೇ ಸಾಲಿನ ಬಸವ ವಸತಿ ಯೋಜನೆಯಡಿ ಗ್ರಾಮ ಸಭೆಯಲ್ಲಿ ಪೂಜಾ ಕೋಂ ಎನ್ನುವವರಿಗೆ ಆದ್ಯತೆ ನೀಡಿ, ಸದರಿ ಫಲಾನುಭವಿಯ ಮನೆಯು ಶಿಥಿಲಾವಸ್ಥೆಯಲ್ಲಿದೆ ಎಂದು ವರದಿ ನೀಡಿದ್ದರೂ, ಸದರಿ ವರದಿಯನ್ನು ಧಿಕ್ಕರಿಸಿ, ಹಳೇ ಪಟ್ಟಿಯನ್ನು ಅನುಮೋದನೆಗೆ ಕಳುಹಿಸಿದ್ದಾರೆ ಎಂದು ದಾಖಲಾಗಿತ್ತು.
ದೂರಿನ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಈ ಹಿಂದೆ ವಸತಿ ಯೋಜನೆಯಲ್ಲಿ ಮನೆ ನೀಡಲಾದ ಸವಿತಾ ಎನ್ನುವವರನ್ನು ಸೇರಿಸಿ, ಒಟ್ಟು 08 ಜನ ಫಲಾನುಭವಿಗಳನ್ನು ತಿದ್ದುಪಡಿ ಮಾಡಿ ಬೇರೆ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಸಲ್ಲಿಕೆಯಾದ ವರದಿಯಲ್ಲಿರುವ ಆಪಾದನೆಯ ಕುರಿತು ಚಂದ್ರಶೇಖರ್ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43-ಎ(1) ರಡಿ ಕ್ರಮ ಜರುಗಿಸುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಗಣೆಗಳನ್ನು ನಡೆಸಲು ಇಲಾಖೆ ಮುಂದಾಗಿತ್ತು. ಇದರ ಭಾಗವಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 2024ರ ಫೆಬ್ರವರಿ 7 ಹಾಗೂ 2025ರ ಮಾರ್ಚ್ 15ರಂದು ವಿಚಾರಣೆಗೆ ಕರೆದರೂ ಇವರು ಹಾಜರಾಗಿರಲಿಲ್ಲ. ಆದರೆ, ಚಂದ್ರಶೇಖರ್ ಅವರು ಇಲಾಖೆಗೆ ನೀಡಿರುವ ಲಿಖಿತ ಸಮಜಾಯಿಷಿಯಲ್ಲಿ ತಮ್ಮಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಅಲ್ಲದೇ, ಬೆಂಗಳೂರಿನಲ್ಲಿರುವ ಪ್ರಾದೇಶಿಕ ಆಯುಕ್ತರು ಈ ಪ್ರಕರಣದ ವಿಚಾರಣೆ ಕೈಗೊಂಡು ವರದಿಯನ್ನು ಸಲ್ಲಿಸಿದ್ದಾರೆ.

ನಂತರ ಚಂದ್ರಶೇಖರ್ ಅವರಿಗೆ 2ನೇ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು. ಆದರೆ, ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಪ್ರಾದೇಶಿಕ ಆಯುಕ್ತರ ವರದಿಯೊಂದಿಗೆ ಜಾರಿ ಮಾಡಿದ ಕಾರಣ ಕೇಳುವ ನೋಟೀಸ್’ಗೆ ಅವರು ಯಾವುದೇ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ.
ಈ ಹಿನ್ನೆಲೆಯಲ್ಲಿ 2021-22 ನೇ ಸಾಲಿನ ಬಸವ ವಸತಿ ಯೋಜನೆಯಡಿ ಅರ್ಹರಲ್ಲದ ಫಲಾನುಭವಿಗಳ ಹೆಸರನ್ನು ಸೇರಿಸಿ ಮಂಜೂರು ಮಾಡಿರುವ ಆರೋಪವು ಸಾಬೀತಾಗಿದೆ. ಹೀಗಾಗಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2020 ರ ಪ್ರಕರಣ 43(ಎ)(1)(ಜಿ) ರನ್ವಯ ಚಂದ್ರಶೇಖರ್ ಅವರನ್ನು ಸದಸ್ಯ ಸ್ಥಾನದಿಂದ ತೆಗೆದು ಹಾಕಲು ಮತ್ತು 43(ಎ)(2) ರನ್ವಯ ಆರು ವರ್ಷಗಳ ಕಾಲ ಪಂಚಾಯಿತಿ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಲು ಸರ್ಕಾರವು ಆದೇಶಿಸಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















