ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬದ ಬಿಜೆಪಿ ಶಾಸಕ ಕುಮಾರ್‌ಬಂಗಾರಪ್ಪ MLA Kumar Bangarappa ಅವರ ಆಪ್ತ ಸಹಾಯಕ ಉಮೇಶ್‌ಗೌಡ ಮಾಜಿ ಸೈನಿಕರ ಕೋಟಾದಡಿ ರಾಜಕೀಯ ಪ್ರಭಾವ ಬಳಸಿಕೊಂಡು ಅಕ್ರಮವಾಗಿ 4 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಆರೋಪಿಸಿದ್ದಾರೆ.
ಸೇನೆಯಿಂದ ನಿವೃತ್ತಿ ಹೊಂದಿ ಪಿಡಿಓ ಹುದ್ದೆಯಲ್ಲಿರುವ ಉಮೇಶ್ ಗೌಡ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಆಪ್ತಸಹಾಯಕರಾಗಿ, ಕಾರ್ಯನಿರ್ವಹಿಸುತ್ತಿದ್ದು, ಶಾಸಕರ ರಾಜಕೀಯ ಪ್ರಭಾವ ಬಳಸಿಕೊಂಡು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಕುಂಬತ್ತಿ ಗ್ರಾಮದಲ್ಲಿ ಮಾಜಿ ಸೈನಿಕರ ಕೋಟಾದಡಿ ನಾಲ್ಕು ಎಕರೆ ಜಮೀನು ಕಬಳಿಸಿರುವುದು ಬಯಲಾಗಿದೆ ಎಂದು ಹೇಳಿದರು.
ಭೂ ಮಂಜೂರಾತಿ ಅರ್ಜಿಯಲ್ಲಿ ಮಾಜಿ ಸೈನಿಕ ಎಂದು ನಮೋದಿಸದೆ, ಶಾಸಕರ ಆಪ್ತಸಹಾಯಕ ಎಂದು ನಮೋದಿಸುವ ಮೂಲಕ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುವ ಹುನ್ನಾರ ನಡೆಸಿರುವ ಉಮೇಶ್ ಗೌಡ ವಾರ್ಷಿಕ 5.14ಲಕ್ಷ ರೂ. ಆದಾಯ ಬರುತ್ತಿದೆ ಎಂದು ಕೇವಲ ಪ್ರಮಾಣಪತ್ರ ಸಲ್ಲಿಸಿದ್ದಾರೆ ವಿನಃ ದೃಢೀಕೃತ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಮೂಲತಃ ಸಿದ್ದಾಪುರ ತಾಲ್ಲೂಕಿನ ನಿವಾಸಿಯಾಗಿರುವ ಉಮೇಶ್ ಗೌಡ ಸಿದ್ದಾಪುರ ತಾಲ್ಲೂಕಿನ ಕೊಂಡ್ಲಿ ಹೋಬಳಿ ಕಸ್ತೂರ ಗ್ರಾಮದ ಸ.ನಂ 3/7ರಲ್ಲಿ ತಾನು ಹೊಂದಿರುವ ಆಸ್ತಿ ಇದ್ದರೂ ಅದನ್ನು ಮರೆಮಾಚಿ ಸೊರಬ ನಿವಾಸಿ ಎಂದು ಹೇಳಿಕೊಂಡಿದ್ದು ಯಾವುದಕ್ಕೂ ನಿರ್ಧಿಷ್ಟ ದಾಖಲೆಗಳನ್ನು ಸಲ್ಲಿಸದೆ ಸರ್ಕಾರಕ್ಕೆ ವಂಚಿಸಿದ್ದಾನೆ. ಈತನ ವಿರುದ್ದ ಸರ್ಕಾರ ಈ ಕೂಡಲೆ ಪೊಲೀಸ್ ಕೇಸು ದಾಖಲಿಸಿ ಅಕ್ರಮವಾಗಿ ಮಂಜೂರು ಮಾಡಿರುವ ಭೂಮಿ ಯ ಪಾಣಿಯನ್ನು ರದ್ದು ಪಡಿಸಬೇಕು ಎಂದು ಮಹೇಶ್ ಶಕುನವಳ್ಳಿ ಆಗ್ರಹಿಸಿದರು.
ಉಮೇಶ್ ಗೌಡನಿಗೆ ಮಂಜೂರು ಮಾಡಿರುವ ಭೂಮಿಯ ಮಹಜರ್‌ನಲ್ಲಿ ಕಂದಾಯಾಧಿಕಾರಿಗಳು ಯಾವುದೇ ಬೆಲ ಬಾಳುವ ಮರಗಳಿಲ್ಲ ಎಂದು ವರದಿ ನೀಡಿದ್ದರೆ. ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಜಾಗದಲ್ಲಿ 1988 ರಿಂದ ಅಕೇಶಿಯ ನಡುತೋಪು ಇದೆ. ಸಂಬಂಧಪಟ್ಟ ಇಲಾಖೆ ಅನುಮತಿ ಪಡೆಯಬೇಕು ಎಂದು ವರದಿ ಸಲ್ಲಿಸಿದ್ದಾರೆ. ಹಾಗಾದರೆ ಕಂದಾಯಾಧಿಕಾರಿಗಳ ಮಹಜರ್ ವರದಿ ಶಾಸಕರ ಕಚೇರಿಯಲ್ಲಿ ಸಿದ್ದಪಡಿಸಲಾಯಿತಾ?, ಅಕ್ರಮ ಭೂಮಿ ನೋಂದಣಿಯನ್ನು ತಡೆಯುತ್ತೇನೆ ಎಂದು ಘೋಷಿಸುವ ಶಾಸಕರು ತಮ್ಮ ಆಪ್ತ ಸಹಾಯಕನೆ ಸುಳ್ಳು ದಾಖಲೆಗಳನ್ನು ಕೊಟ್ಟು, ಮರೆಮಾಚಿ ಅಕ್ರಮವಾಗಿ ಭೂಮಿ ಪಡೆದಿರುವ ಬಗ್ಗೆ ಯಾಕೆ ಮೌನವಹಿಸಿದ್ದಾರೆ? ಇದಕ್ಕೆ ಶಾಸಕರು ಉತ್ತರಿಸಬೇಕು ಎಂದು ಡಿಎಸ್ ಎಸ್ ಆಗ್ರಹಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post