ಸೊರಬ: ಪರಿಸರ ಜಾಗೃತಿ ಟ್ರಸ್ಟ್ ವಿಶೇಷವಾಗಿ ಸ್ವಾತಂತ್ರೋತ್ಸವ ಆಚರಿಸಿದ್ದು, ಚಂದ್ರಗುತ್ತಿ ಹೋಬಳಿ ನ್ಯಾರ್ಶಿ ಗ್ರಾಮದ ಅರಣ್ಯದಲ್ಲಿ ಧ್ವಜಾರೋಹಣ ನೆರವೇರಿಸಿತು.
ಟ್ರಸ್‌ಟ್ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಂ.ಆರ್ ಪಾಟೀಲ್ ಮಾತನಾಡಿ, ನೈಸರ್ಗಿಕ ಅರಣ್ಯದ ಮಹತ್ವ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿನೂತನವಾಗಿ ಮೊದಲ ಬಾರಿಗೆ ಅರಣ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಅರಣ್ಯ ಅತೀ ಅವಶ್ಯಕವಾಗಿದೆ. ಈ ಬಗ್ಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕು. ಮನುಷ್ಯನಿಲ್ಲದೆ ಅರಣ್ಯ ಜೀವಿಸಬಲ್ಲದು. ಆದರೆ, ಅರಣ್ಯ ಇಲ್ಲದಿದ್ದರೆ ಮನುಷ್ಯನ ಜೀವನವಿಲ್ಲ. ಆಹಾರಕ್ಕಾಗಿ ಕೃಷಿ, ಕೃಷಿಗಾಗಿ ಕಾಡು ಉಳಿಯಬೇಕು. ಅರಣ್ಯನಾಶ ನಿಲ್ಲಬೇಕು ಎಂದರು.
ಅರಣ್ಯ, ಜಲ ಮೂಲ, ಪ್ರಾಣಿ ಸಂಕುಲವನ್ನು ಕಾಪಾಡುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ. ರಾಸಾಯನಿಕ ಕೃಷಿ ಪದ್ಧತಿಯನ್ನು ಬಿಟ್ಟು ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿಯನ್ನು ರೈತರು ಆಳವಡಿಸಿಕೊಂಡರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆಯಾ ಗ್ರಾಮದ ರೈತರು ಅವರವರ ಗ್ರಾಮದ ಅರಣ್ಯಗಳನ್ನು, ಕೆರೆಗಳನ್ನು, ಜಲಮೂಲವನ್ನು ರಕ್ಷಣೆ ಮಾಡಿದರೆ ಮಾತ್ರ ನಾವು ಹಸಿರು ಕರ್ನಾಟಕ ಮಾಡಲು ಸಾಧ್ಯ ಎಂದರು.
ಟ್ರಸ್‌ಟ್ ಕಾರ್ಯದರ್ಶಿ ಸಿ.ಪಿ. ಈರೇಶಗೌಡ, ಗ್ರಾಮದ ಮುಖಂಡರಾದ ಎನ್.ಎಸ್. ಶಿವಕುಮಾರಗೌಡ, ಮಂಜುನಾಥಗೌಡ ಎನ್.ಎಸ್. ಗುರುಪ್ರಸಾದ, ಗಣಪತಿ, ರಾಜಪ್ಪಗೌಡ, ನಿಖಿಲ್, ದೇವರಾಜಗೌಡ ಹಾಗೂ ಗ್ರಾಮಸ್ಥರು ಇದ್ದರು.
(ವರದಿ: ಮಧುರಾಮ್, ಸೊರಬ)
Discussion about this post