ಶಿವಮೊಗ್ಗ: ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರಾಗಿರುವ ಮಲೆನಾಡು ಹಲವಾರು ರೀತಿಯ ವಿಭಿನ್ನ ಪ್ರತಿಭೆಗಳಿಗೆ ಸಾಕ್ಷಿಯಾಗಿದ್ದು, ಇದೀಗ ಐತಿಹಾಸಿಕ ಎನ್ನುವ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಲು ಸಿದ್ದವಾಗಿದೆ.
ಇಂತಹ ಮಲೆನಾಡಿನ ಪ್ರಖ್ಯಾತ ಸಹಚೇತನ ನಾಟ್ಯಾಲಯ ತನ್ನ 9ನೆಯ ವರ್ಷದ ನಾಟ್ಯಾರಾಧನೆಯನ್ನು ಆಚರಿಸಲು ಸಿದ್ದವಾಗಿದ್ದು, ಆ.24, 25 ಹಾಗೂ 26ರಂದು ಮೂರು ದಿನಗಳ ಕಾಲ ವಿಭಿನ್ನವಾದ ನಾಟ್ಯೋತ್ಸವವನ್ನು ಆಯೋಜನೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ವಿವರಣೆ ನೀಡಿದ ಸಹಚೇತನ ನಾಟ್ಯಾಲಯದ ನೃತ್ಯಗುರು ಸಹನಾಚೇತನ್, ಆಗಸ್‌ಟ್ 24ರಂದು ಶ್ರೀ ಆದಿಶಂಕರಾಚಾರ್ಯಸಂಸ್ಥಾನ ಅದ್ವೈತ ಕೃತಿಗಳಾಧಾರಿತ ಲೋಕಶಂಕರಂ ಎಂಬ ಶೀರ್ಷಿಕೆಯ ಅಡಿಯಲ್ಲಿ ಶಾಸ್ತರೀಯ ಮಾರ್ಗ ಆಧಾರಿತ ಆದಿ ಶಂಕರಾಚಾರ್ಯರ ರಚನೆಯ ಕೃತಿಗಳ ಜೊತೆ, ಶ್ರೀ ಶ್ರೀ ಚಂದ್ರಶೇಖರ ಭಾರತೀಗಳ ಹಾಗೂ ಶ್ರೀ ಶ್ರೀ ಭಾರತೀ ತೀರ್ಥರ ರಚನೆಯ ಕೃತಿಗಳನ್ನು ನೃತ್ಯಕ್ಕೆ ಅಳವಡಿಸಲಾಗಿದ್ದು, ನಾಟ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಾರೆ ಎಂದರು.
ಆಗಸ್‌ಟ್ 25 ರಂದು ನೃತ್ಯಗುರು ಸಹನಾ ಚೇತನ್ ತಮ್ಮ ಏಕವ್ಯಕ್ತಿ ನೃತ್ಯ ರೂಪಕದಲ್ಲಿ ಪುರಂದರದಾಸ ಕೃತಿಗಳ ಆಧಾರಿತ ಪುರಂದರ ಕೃಷ್ಣ ನೃತ್ಯದಲ್ಲಿ ಕೃಷ್ಣನ ಬಾಲ ಲೀಲೆಗಳ ಜೊತೆಜೊತೆಗೆ ಆತನ ಅದ್ಭುತ ಕೈಂಯರ್ಕಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.
ನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಮೂಹ ಮೈಸೂರು ನೃತ್ಯ ಪರಂಪರೆಯನ್ನು ಪ್ರತಿಬಿಂಬಿಸುವ ನೃತ್ಯಗಳಲ್ಲಿ, ಲಲಿತ ಕಲೆಗಳಿಗೆ ಮೈಸೂರು ಮಹಾರಾಜರು ನೀಡಿದ ಕೊಡುಗೆಗಳನ್ನು, ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ರವರ ಹಾಗೂ ಅವರ ಆಸ್ಥಾನ ವಿದ್ವಾಂಸರ ಕೃತಿಗಳನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಗುವುದು ಎಂದರು.
ಆಗಸ್‌ಟ್ 26ರಂದು ವಿಶೇಷವಾಗಿ ಮಲೆನಾಡಿಗರ ಪಾಲಿಗೆ ವಿಶೇಷ ಅನುಭವವನ್ನು ಕೊಡುವ ರೋಚಕ ಸಾಹಸೀಮಯ ನೃತ್ಯಮಾಲಿಕೆಗಳಾದ ರಾಜಸ್ಥಾನದ ಮಹಿಪಾಲ್ ಭಟ್ ಹಾಗೂ ವೃಂದದವರಿಂದ ರಾಜಸ್ಥಾನಿ ಜಾನಪದ ನೃತ್ಯಗಳ ರಸದೌತಣದ ಜೊತೆ ನವದೆಹಲಿಯ ಇಬುದೌ ಲೋಯಲಕ್ಪ ಮಣಿಪುರಿ ಡಾನ್‌ಸ್ ಗ್ರೂಪ್‌ನ ಚನ್ನಂಬ್ಬಂ ಪ್ರದೀಪ್ ಸಿಂಗ್ ಹಾಗೂ ತಂಡದವರು ಮಣಿಪುರದ ಸ್ಟಿಕ್ ಡಾನ್‌ಸ್ ಹಾಗೂ ಬಾಂಬೂ ಡಾನ್‌ಸ್ಗಳನ್ನು ಪ್ರದರ್ಶಿಸಲಾಗುವುದು ಎಂದರು.
ಈ ಮೂರೂ ದಿನಗಳ ಕಾರ್ಯಕ್ರಮಕ್ಕೆ ವಾಸು, ವಿಕ್ರಂ ಆರ್ಟ್‌ಸ್ರವರ ರಂಗ ಸಜ್ಜಿಕೆ, ಹರಿಗೆ ಗೋಪಾಲಸ್ವಾಮಿಯವರ ಬೆಳಕಿನ ವಿನ್ಯಾಸ, ಪುರುಷೋತ್ತಮ ತಲವಾಟ ಮತ್ತು ವೃಂದದವರ ಪ್ರಸಾಧನವಿದ್ದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನವದೆಹಲಿಯ ಭಾರತೀಯ ಸಂಸ್ಕೃತಿ ಸಚಿವಾಲಯದ ಸಹಕಾರವಿದೆ ಎಂದರು.
ನೃತ್ಯ ಅಭಿವ್ಯಕ್ತಿಯ ಸಂವಹನದ ಮಾಧ್ಯಮ. ದಕ್ಷಿಣ ಭಾರತದಲ್ಲಿ ಉಳಿದೆಲ್ಲ ನೃತ್ಯಕ್ಕೆ ಹೋಲಿಸಿದರೆ ಭರತನಾಟ್ಯ ನೃತ್ಯ ಪರಂಪರೆಗೆ ಇರುವಷ್ಟು ಇತಿಹಾಸ, ಸೊಗಡು ಉಳಿದ ನೃತ್ಯಕ್ಕೆ ಕಡಿಮೆಯೇ ಎಂದು ಹೇಳಬಹುದು. ಅದರಲ್ಲೂ ಶಿವಮೊಗ್ಗೆಯ ಸಾಂಸ್ಕೃತಿಕ ನೃತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಹಚೇತನ ಬಳಗ ನೀಡಿರುವ ಕೊಡುಗೆ ಹೇರಳವೆಂದರೆ ಅತಿಶಯೋಕ್ತಿಯಲ್ಲ ಎಂದರು.
ದೇಶದ ಮೂಲೆಮೂಲೆಗಳಿಂದ ಕಂಡುಕೇಳರಿಯದ ನೃತ್ಯ ಪ್ರಕಾರಗಳನ್ನು ಕರೆಯಿಸಿ ಶಿವಮೊಗ್ಗೆಯ ರಸಿಕರಿಗೆ ಕಲಾರಸಸ್ವಾದವನ್ನು ಕಳೆದ ಎಂಟು ವರ್ಷಗಳಿಂದ ನೀಡುತ್ತಾ ಬಂದಿದ್ದು ಈ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಪ್ರಾಚೀನ ಪರಂಪರೆಯಾದ ನೃತ್ಯಕಲೆಗೆ ಸಹಚೇತನ ನಾಟ್ಯಾಲಯ ನಾಟ್ಯಾರಾಧನಾ-9 ನ್ನು ಗೌರವಪೂರ್ವಕವಾಗಿ ಸಲ್ಲಿಸುತ್ತಿದೆ ಎಂದರು.
ಉದ್ಘಾಟನಾ ದಿನದಂದು ಶಾಸಕ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ಸಮಾರೋಪದಂದು ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅತಿಥಿ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದರು.
ಈ ಮೂರೂ ದಿನಗಳ ಸಾಂಸ್ಕೃತಿಕ ರಸದೌತಣಕ್ಕೆ ಉಚಿತ ಪ್ರವೇಶವಿದ್ದು ಕಲಾಭಿಮಾನಿಗಳೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಹಚೇತನ ಬಳಗದ ಗೌರವಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಾಟ್ಯಾಲಯದ ಅಧ್ಯಕ್ಷ ಎನ್.ಆರ್. ಪ್ರಕಾಶ್, ಖಜಾಂಚಿಗಳಾದ ಎಸ್. ಚೇತನ್, ನಿರ್ದೇಶಕರುಗಳಾದ ಆನಂದ್ ರಾಮ್, ಹರೀಶ್ ಕಾರ್ಣಿಕ್, ಲಕ್ಷ್ಮೀನಾರಾಯಣ್, ಮಾಲತೇಶ್, ಗಿರೀಶ್, ಮಾಲಿನಿ, ವಿದ್ಯಾಗಂಗಾ ಉಪಸ್ಥಿತರಿದ್ದರು.
Discussion about this post