ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಯೋಗಶಾಸ್ತ್ರ ಪ್ರಧಾನೀಕರಿಸುವ ಮೂಲಕ ಸಮಾಹಿತಗೊಳಿಸಿ, ಮಾತೃ ಛಾಯೆಯ ಶಿಕ್ಷಣದ ಗುರುಕುಲ ಆರಂಭವಾಗಬೇಕು ಎಂದು ಚೆನ್ನೇನಹಳ್ಳಿ ವೇದವಿಜ್ಞಾನ ಗುರುಕುಲದ ವಿದ್ವಾನ್ ರಾಮಚಂದ್ರಭಟ್ ಕೋಟೆಮನೆ ಹೇಳಿದರು.
ಸೊರಬ ತಾಲೂಕು ವಿದ್ವಾನ್ ರಂಗನಾಥಶರ್ಮಾ ಸೇವಾ ಪ್ರತಿಷ್ಠಾನದ ವತಿಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಪ್ರಬೋಧಿನಿ ಗುರುಕುಲದ ಸಹಯೋಗದಲ್ಲಿ ಶೃಂಗೇರಿ ಸಮೀಪದ ಹರಿಹರಪುರದ ಗುರುಕುಲದಲ್ಲಿ ಆಯೋಜಿಸಿದ್ದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥ ಶರ್ಮಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮನೆಯಲ್ಲಿ ಸಂಸ್ಕಾರ ಕ್ಷೀಣಿಸಿರುವ ಕಾರಣ ಗುರುಕುಲದ ಶಿಕ್ಷಣ ಕಷ್ಟವಾದರೂ ಪ್ರಸ್ತುತ ಕಾಲಮಾನದಲ್ಲಿ ಮಾನವೀಕ ಮೌಲ್ಯವನ್ನು ವೃದ್ಧಿಸುವ ಹಾಗೂ ಸಂಸ್ಕಾರಯುತ ಜೀವನ ನಿರ್ವಹಣೆಗೆ ಗುರುಕುಲ ಶಿಕ್ಷಣ ಪೂರಕ. ಈ ಹಿನ್ನೆಲೆಯಲ್ಲಿ ಈಗಾಗಲೇ ಬೇರೆಬೇರೆ ದೇಶಗಳಲ್ಲಿ ಇಂತಹ ಶಿಕ್ಷಣ ಆರಂಭವಾಗಿದೆ. ಪ್ರಗತಿಯನ್ನೂ ಕಂಡಿವೆ. ಭರತೀಯ ಜ್ಞಾನದೃಷ್ಟಿ ಜಾಗೃತವಾಗಬೇಕು ಎಂದರು.
ಮನಃಸಂಸ್ಕಾರಕ್ಕೆ ಪೂರಕವಾಗುವ ಸಾಹಿತ್ಯ ಬಳಕೆಯಾಗಬೇಕು. ತೋಚಿದ್ದನ್ನೆಲ್ಲ ಗೀಚುವುದೆ ಸಾಹಿತ್ಯ ಆಗಲಾರದು ಎಂದ ಅವರು ಎನ್. ರಂಗನಾಥ ಶರ್ಮಾ, ಸತ್ಯಕಾಮ ಅವರ ಸಾಹಿತ್ಯವನ್ನ ನೆನಪಿಸಿಕೊಂಡರು. ಶರ್ಮಾರ ಬಗ್ಗೆ ಸ್ವರಚಿತ ಸಂಸ್ಕೃತ ಕಾವ್ಯ ವಾಚಿಸಿದರು.
ಮುಖ್ಯ ಮಾತುಗಾರರಾಗಿ ಆಗಮಿಸಿದ್ದ ಶೃಂಗೇರಿ ವಿದ್ವಾಂಸರಾದ ಡಾ.ಗಿರಿಧರ ಶಾಸ್ತ್ರಿಗಳು ಪ್ರಶಸ್ತಿ ಪುರಸ್ಕೃತ ವಿದ್ವಾನ್ ರಾಮಚಂದ್ರಭಟ್ ಅವರ ಬಗ್ಗೆ ಮಾತನಾಡಿ, ಸಾರ ಗ್ರಹಿತ್ವವುಳ್ಳ ಪ್ರಾಜ್ಞಾರ ಮೂಲಕ ವಿದ್ಯೆ ಕಲಿತರೆ ಶಿಕ್ಷಣ ಸಾರ್ಥಕವಾಗುತ್ತದೆ. ಸಮಾಜಕ್ಕೆ ನಿಸ್ವಾರ್ಥ ಕೊಡುಗೆ ನೀಡುತ್ತಿರುವ ಶ್ರೀಯುತರು ಪೂಜಾರ್ಹರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಕೇಂದ್ರೀಯ ಸಂಸ್ಕೃತ ವಿವಿ ನಿರ್ದೇಶಕ ವಿ. ಸುಬ್ರಾಯಭಟ್ ಎನ್. ರಂಗನಾಥ ಶರ್ಮಾ ಕೃತಿಗಳ ಕುರಿತು ಅವಲೋಕಿಸಿದರು.
ವಿದ್ವಾನ್ ಎನ್. ರಂಗನಾಥ ಶರ್ಮಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎನ್. ಶ್ರೀಧರಮೂರ್ತಿ ನಡಹಳ್ಳಿ, ಶೃಂಗೇರಿ ಅಭಾಸಾಪ ಅಧ್ಯಕ್ಷ ಎಂ.ಎಂ.ಪ್ರಭಾಕರ ಕಾರಂತ ಉಪಸ್ಥಿತರಿದ್ದರು.
ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೆವಿರೆ, ರಾಜ್ಯ ಕಾರ್ಯಕಾರಿ ಸದಸ್ಯರಾದ ಜಗದೀಶ್‌ಭಂಡಾರಿ, ಗುರುರಾಜ ಗಂಟಿಹೊಳಿ, ಗುರುಕುಲದ ಪ್ರಮುಖ ಉಮೇಶ್, ಸಿದ್ಧಾಪುರ ಅಭಾಸಾಪ ಸಂಚಾಲಕ ಶ್ರೀಪಾದಭಟ್, ಪೂರ್ಣಿಮಾಶೆಟ್ಟಿ, ಜಯಶ್ರೀ, ನಾಗಭೂಷಣ, ಸುವರ್ಣ, ಗುರುಕುಲದ ಅಧ್ಯಾಪಕ ವರ್ಗದವರು, ಶಿಕ್ಷಣಾರ್ಥಿಗಳು, ಸಾಹಿತ್ಯಾಸಕ್ತರು ಇದ್ದರು.
ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನಭಟ್ ನರೂರು ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ ನಾಗರಾಜ್ ಪ್ರಾರ್ಥಿಸಿ, ಕೊಪ್ಪ ಗಿರಿಧರ ನಿರೂಪಿಸಿದರು. ಶ್ರೀಪಾದ ಬಿಚ್ಚುಗತ್ತಿ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ಸಮ್ಮಾನ ಪಾತ್ರ ಓದಿದರು. ಭಾರತಿ ವಂದಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















