ಕಲ್ಪ ಮೀಡಿಯಾ ಹೌಸ್ | ಸೊರಬ |
ಇಂದು ಇಂಟರ್‌ನೆಟ್ ವೇಗ ಎಷ್ಟಿದ್ದರೂ ಸಾಲದೆನ್ನುವ ನಮ್ಮ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಗುರಿಯಲ್ಲಿ ಮಾತ್ರ ಇಂದಿಗೂ 2ಜಿಬಿ ವೇಗದಲ್ಲಿಯೆ ಇದ್ದಾರೆ. ತಲ್ಲೀನತೆ, ಶ್ರದ್ಧೆ, ಗುರಿ ಇಲ್ಲದ ಕಾರಣ ಯಾವ ಸಾಧನೆಯೂ ಇಲ್ಲದೆ ಕೇವಲ ಪದವಿ ಪಟ್ಟಿಯನ್ನು ಮಾತ್ರ ಹಣೆಗಂಟಿಸಿಕೊಂಡಂತಾಗಿದೆ ಎಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಜಿ.ಜಗದೀಶ್ ಖೇದ ವ್ಯಕ್ತಪಡಿಸಿದರು.
ಪಟ್ಟಣದ ನಿಜಗುಣ ರೆಸಿಡೆನ್ಸ್ ಸಭಾಂಗಣದಲ್ಲಿ ಅವರ ಗುರುವೃಂದ ಮತ್ತು ಸ್ನೇಹಿತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪೋಷಕರು ಮಕ್ಕಳ ಮನೋಭಿಲಾಷೆಗೆ ಪೂರಕವಾಗಿ ಶಿಕ್ಷಣ ನೀಡಿ, ಅವರು ಎಲ್ಲೆ, ಯಾವುದೇ ವೃತ್ತಿಯಲ್ಲಿದ್ದರೂ ಸಾಧನೆಗೆ ಅವಕಾಶವಿದೆ. ಅಂತಹುದಕ್ಕೆ ಪ್ರೋತ್ಸಾಹಿಸಿ ಎಂದರು.
ಸ್ನೇಹಿತರು ಮತ್ತು ಅವರ ಗುರುಗಳಿಗೆ ವಂದಿಸಿದ ಅವರು, ಕಷ್ಟದ ಜೀವನದಿಂದ ಇವತ್ತು ಇಂತಹ ಅತ್ಯುನ್ನತ ಹುದ್ದೆಗೆ ಬಂದಿರುವೆ, ಸನ್ಮಾನ, ಹೊಗಳಿಕೆ ನನಗೆ ಮುಜುಗರ ತರುವಂತಾಗಿದ್ದು, ಮುಂದಿನ ಪೀಳೀಗೆಗೆ ಪ್ರೇರಣೆಯಾದೀತು ಎಂಬ ಅವರಿಚ್ಛೆಗೆ ನಾನಿಂದು ಈ ಸಮಾರಂಭದಲ್ಲಿ ಪಾಲ್ಗೊಂಡಿರುವೆ. ತಾಲ್ಲೂಕಿನಲ್ಲಷ್ಟೆ ಅಲ್ಲ ರಾಜ್ಯದಲ್ಲಿನ ಕಡುಬಡವರು, ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಶ್ರಮಿಸುವ ಗುರುತರ ಜವಾಬ್ಧಾರಿ ನನ್ನ ಮೇಲಿದೆ. ಈ ನಿಟ್ಟಿನಲ್ಲಿ ಅಧಿಕಾರದವಧಿ, ನಂತರವೂ ಸೇವಾ ಮನೋಭಾವವನ್ನು ನನ್ನ ಗುರಿಯನ್ನಾಗಿರಿಸಿಕೊಂಡಿದ್ದೇನೆ, ಸೊರಬದಿಂದ ಇನ್ನಷ್ಟು ಐಎಎಸ್, ಐಪಿಎಸ್ ಓದಿ ಉನ್ನತ ಹುದ್ಧೆ ಅಲಂಕರಿಸಬೇಕೆಂಬುದು ನನ್ನಿಚ್ಛೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಪ್ರಾಚಾರ್ಯ ಹೆಚ್.ಬಿ. ಪಂಚಾಕ್ಷರಯ್ಯ, ನಮಗೆ ಯಾವುದೇ ಅಧಿಕಾರ ದೊರೆತರೂ ಅದು ಖಾಸಗಿಯದ್ದಲ್ಲ. ನಮ್ಮ ವೃತ್ತಿ ಸೇವೆ ಯಾವಾಗಲೂ ಸಾರ್ವಜನಿಕವಾಗಿರಬೇಕು. ಮಾನವ ಸಂಪನ್ಮೂಲಗಳು ರಾಷ್ಟ್ರೀಯ ಪ್ರಗತಿಯಾಗುವಂತೆ ನಮ್ಮ ಸೇವೆ ಇರಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರ ಕಲ್ಯಾಣದ ಬದ್ಧತೆ ಇರಿಸಿ ಮುಂದುವರೆದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ವಿದ್ಯಾರ್ಥಿ, ಯುವ ಪೀಳಿಗೆ ಮರೆಯಬಾರದು ಎಂದರು.
ಜಗದೀಶ್ ಅವರ ಕುರಿತು ಅವರ ಸಹಪಾಠಿಗಳಾದ ಶಿವಮೂರ್ತಿ, ಭಾರ್ಗವ ನಾಡಿಗ್, ಸುರೇಶ್ ಕಲ್ಲಂಬಿ, ನಾಗರಾಜ ಬಲೀಂದ್ರ ನಾಯ್ಕ್, ಮಹೇಶ್ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಈ ವೇಳೆ ಜಗದೀಶ್ ದಂಪತಿಗಳಿಗೆ ಮತ್ತು ಅವರ ತಂದೆ ಕರಡಿ ಗಣಪತಿಯಪ್ಪ ದಂಪತಿಗಳಿಗೆ, ಗುರುಗಳಾದ ಹೆಚ್.ಬಿ.ಪಂಚಾಕ್ಷರಯ್ಯ, ಡಾ.ಶ್ಯಾಮ್ ಸಂದರ್, ಮಹೇಶ್ವರಪ್ಪ ಅವರನ್ನು ಸಹಾ ಅಭಿನಂದಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಡಾ.ಶ್ಯಾಮ್‌ಸುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮಹೇಶ್ವರಪ್ಪ, ಸೌಮ್ಯಾ ಜಗದೀಶ್, ಕರಡಿ ಗಣಪತಿಯಪ್ಪ, ಕರಡಿ ಹಾಲಮ್ಮ, ಕರಡಿ ರಾಜಪ್ಪ ಇನ್ನೂ ಅನೇಕರಿದ್ದರು. ಸಚಿನ್ ನಿರೂಪಿಸಿ, ಸುರೇಶ್ ಪ್ರಾರ್ಥಿಸಿದರು. ಪಿ.ಮಂಜಪ್ಪ ಸ್ವಾಗತಿಸಿ, ರಾಜಶೇಖರಪ್ಪ ಪ್ರಾಸ್ತಾವಿಕ ಮಾತನಾಡಿದರು. ಫಕ್ಕೀರಪ್ಪ ವಂದಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post