ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಉಡುಪಿ ಮಣ್ಣಿನ ಸುವಾಸನೆ, ಅಮ್ಮನ ಕನಸು, ಕಾಲೇಜಿನ ದಿನಗಳ ಉತ್ಸಾಹ – ಇವುಗಳ ಸಂಗಮವೇ ಶಿಲ್ಪಾ ಶೆಟ್ಟಿ ಅವರ ಕಲಾಜೀವನದ ಬುನಾದಿ.
ಬಾಲ್ಯದಿಂದಲೇ ಕಲೆ ಅವರ ಹೃದಯದ ನಂಟಾಗಿದ್ದು, ಕಾಲೇಜು ಸಂದರ್ಭದಲ್ಲಿ NSS ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹವ್ಯಾಸಿ ರಂಗತಂಡಗಳ ಮೂಲಕ ಅವರು ಮೊದಲ ಬಾರಿಗೆ ರಂಗಮಂಟಪವನ್ನು ಮುಟ್ಟಿದರು. ಆ ದಿನದ ಆ ಹೆಜ್ಜೆ, ಮುಂದಿನ ದಾರಿ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟಿತು. ನಂತರ ಮೈಸೂರಿನ ಪ್ರಸಿದ್ಧ ರಂಗಾಯಣದಲ್ಲಿ ನಟನಾ ತರಬೇತಿ ಪಡೆದು ತಮ್ಮ ಕಲೆಗೊಂದು ಹೊಸ ಶಕ್ತಿ ತುಂಬಿಕೊಂಡರು.

ಇಂದು ಶಿಲ್ಪಾ ಶೆಟ್ಟಿ ಅವರು 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, ನೂರಕ್ಕೂ ಅಧಿಕ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಹೃದಯದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಪಾತ್ರವು ಎಷ್ಟು ದೊಡ್ಡದು, ಚಿಕ್ಕದು ಎಂಬುದಲ್ಲ – ಅದಕ್ಕೆ ಅವರು ತುಂಬುವ ಜೀವವೇ ಮುಖ್ಯ ಎಂಬ ನಂಬಿಕೆ ಅವರ ನಟನೆಯ ಕೌಶಲ್ಯವನ್ನು ವಿಶಿಷ್ಟವಾಗಿಸಿದೆ.
ರಂಗಭೂಮಿಯ ಹೊರತಾಗಿಯೂ, ಚಲನಚಿತ್ರ ಮತ್ತು ವೆಬ್‌ಸೀರೀಸ್ ಜಗತ್ತಿನಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಪರಿಚಯಿಸಿದ್ದಾರೆ. ನವ್ಯ ರಾವ್ ನಿರ್ದೇಶನದ ಪುಟ್ಟ ಭಯ, ಪ್ಯಾರಮ್ಹವ್ ಸ್ಪಾಟ್‌ಲೈಟ್ ನಿರ್ಮಾಣದ ಸ್ಟ್ರಾಬೆರಿ, ತುಳು ಕಿರುಚಿತ್ರ 2 ಪಜ್ಜೆ, ನಾಗೇಂದ್ರ ಗಾಣಿಗ ನಿರ್ದೇಶನದ ಅಭಿರಾಮಚಂದ್ರ, ಮನ್ಸೋರೆ ಅವರ ದೂರತೀರಯಾನ ಮೊದಲಾದ ಚಿತ್ರಗಳಲ್ಲಿ ಅವರು ತಮ್ಮ ಕಲಾಶಕ್ತಿಯನ್ನು ತೋರಿಸಿದ್ದಾರೆ. ಶಿಮಾರೋ ಚಾನೆಲ್‌ನ ಹಿಂದಿ ವೆಬ್‌ಸೀರೀಸ್‌ನಲ್ಲಿ ನಟನೆಯ ಮೂಲಕ ದೇಶದಾದ್ಯಂತ ಪ್ರೇಕ್ಷಕರಿಗೆ ತಲುಪಿದ್ದಾರೆ. ವಿಶೇಷವಾಗಿ ರೂಪಾ ಅಯ್ಯರ್ ನಿರ್ದೇಶನದ ಬಾಲಿವುಡ್ ಚಿತ್ರ “ನೀರಾ ಆರ್ಯ” ಅವರ ಕಲಾಜೀವನಕ್ಕೆ ಮತ್ತೊಂದು ಬಣ್ಣ ತುಂಬಿದ ಚಿತ್ರವಾಗಿದೆ.


ಮಕ್ಕಳಲ್ಲಿ ಕಲೆ ಬೆಳೆಸುವುದು ಅವರ ಹೃದಯದ ಹಂಬಲ. ಬೆಂಗಳೂರಿನ ಆರ್ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ರಂಗಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಅನೇಕ ಮಕ್ಕಳ ಮನಸ್ಸಿನಲ್ಲಿ ಕಲೆಗೊಂದು ಹೊಸ ದಾರಿ ತೆರೆದಿದ್ದಾರೆ.

ಮನೆಯಲ್ಲಿ ಆರ್ಥಿಕ ಸಂಕಷ್ಟಗಳಿದ್ದರೂ, ತಮ್ಮ ಕಲಾ ಜೀವನಕ್ಕೆ ಯಾವುದೇ ಅಡಚಣೆ ಬಾರದಂತೆ ಶಿಲ್ಪಾ ಶೆಟ್ಟಿ ಸ್ವಾವಲಂಬಿಯಾಗಿ ಬೆಂಗಳೂರಿನಲ್ಲಿ ತಮ್ಮ ಕಲಾ ಪಯಣವನ್ನು ಮುಂದುವರಿಸಿಕೊಂಡಿದ್ದಾರೆ. ದುಡಿಮೆ ಮತ್ತು ದೃಢಸಂಕಲ್ಪದ ಮೂಲಕ ಸ್ವಂತ ಮನೆಯ ಕನಸನ್ನೂ ಅವರು ನನಸಾಗಿಸಿಕೊಂಡಿದ್ದಾರೆ. ನಮ್ಮೂರಿನ ಹೆಮ್ಮೆಯ ಪ್ರತಿಭೆಯಾದ ಈ ಕಲಾಶಿಲ್ಪಾಳಿಗೆ ನಮ್ಮೆಲ್ಲರ ಪ್ರೋತ್ಸಾಹ ಅವಶ್ಯಕ. ಅವರ ಮುಂದಿನ ಕಲಾ ಪಯಣ ಇನ್ನಷ್ಟು ಯಶಸ್ಸುಗಳನ್ನು ತಂದುಕೊಡಲೆಂದು ಕಲ್ಪ ಡಿಜಿಟಲ್ ಮೀಡಿಯಾ ಕಡೆಯಿಂದ ಹಾರೈಸುತ್ತೇವೆ.
ಲೇಖನ. ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post