ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಕರ್ನಾಟಕ ಸಂಘ ಈಚೆಗೆ ಕೆಲವು ವರ್ಷಗಳಿಂದ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದೆ. ಈ ರೀತಿಯ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದೆ.
ಅಂತಹ ಎಷ್ಟೋ ಕಾರ್ಯಕ್ರಮಗಳಲ್ಲಿ ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಗೆ ಹೊಸ ಭಾಷೆ ಬರೆದ ಸಾಹಿತಿಗಳಲ್ಲಿ ಅಗ್ರಗಣ್ಯರಾದ ಕವಿ ಹೆಚ್ ಎಸ್ ವಿ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಆ ಮಹಾನ್ ಚೇತನವನ್ನು ಸ್ಮರಿಸುವ ಸಲುವಾಗಿ ಆಯೋಜಿಸಿದ ಕಾರ್ಯಕ್ರಮ ಭಾವಾಂಜಲಿಯು ನನ್ನಲ್ಲಿ ಬರೆಯುವ ಭಾವ ಮೂಡಿಸಿತು.
ಕೇವಲ ಭಾವಗೀತೆಯ ಕವಿಯಾಗಿಯೇ ಅಲ್ಲ ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಕವಿ, ಭಾವಗೀತೆಗಳ ಸರದಾರ ಎಂದೇ ಕರೆಸಿಕೊಂಡವರು ಹೆಚ್. ಎಸ್ ವೆಂಕಟೇಶ್ ಮೂರ್ತಿಯವರು. ಉತ್ತಮೋತ್ತಮ ಕವಿಯಾಗಿ ಅಷ್ಟೇ ಅಲ್ಲ, ಕಥೆಗಾರರು, ಕಾದಂಬರಿಕಾರರು, ರಂಗಭೂಮಿಯಲ್ಲಿಯೂ ಶ್ರೇಷ್ಠ ಎನಿಸುವಂತಹ ನಾಟಕಗಳನ್ನು ನೀಡಿದವರು. HSV ನಾಡು ಕಂಡಂತಹ ವಿಶೇಷ ಕವಿ. ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಮಹಾನ್ ಸಾಹಿತಿ. ಇವರು ಆನಂದದ ಚಿಲುಮೆ. ಅದರಂತೆ ಇವರ ಸಾಹಿತ್ಯದ ಮೂಲಕ ಭಾವಗೀತೆ ಹಾಗೂ ಸುಗಮ ಸಂಗೀತ ಕ್ಷೇತ್ರಗಳು ಅತ್ಯಂತ ಶ್ರೀಮಂಗೊಂಡಿವೆ. ಆ ಸಮಯದಲ್ಲಿ ಜನ ಇವರನ್ನು ಕ್ಯಾಸೆಟ್ ಕವಿಗಳು ಎಂದು ಕರೆದರೆ ಜೋಗಿಯವರು ಇವರನ್ನು ಅಸೆಟ್ ಕವಿ ಎಂದಿದ್ದಾರೆ. HSV ಯವರು ಅಂದಿನ ಹಾಗೂ ಇಂದಿನ ಪೀಳಿಗೆಯನ್ನು ಕೊಂಡಿಯಂತೆ ಬೆಸೆದವರು.ಇವರ ಸಾಹಿತ್ಯ ಮನಸ್ಸಿಗೆ ಅಷ್ಟೇ ಅಲ್ಲ ಆತ್ಮಕ್ಕೆ ಹೊಂದುವಂತದ್ದು.
ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ನಾಟಕ, ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ, ಅಂಕಣ ಬರಹ, ಚಲನಚಿತ್ರ, ಭಾವಗೀತೆ, ಶಿಶುಗೀತೆ, ನಟ, ನಿರ್ದೇಶಕ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿ ಕನ್ನಡ ಸಾಹಿತ್ಯ ಲೋಕವನ್ನು ಅಚ್ಚರಿಗೊಳಿಸಿ, ನನ್ನದೇನು ಅಲ್ಲ ಹಿರಿಯರು ಬಿಟ್ಟ ಸ್ಥಳವನ್ನು ನಾನು ತುಂಬಿದೆ ಎನ್ನುವ ನಮ್ರ ಕವಿ. ಅಗ್ನಿವರ್ಣ, ಊರ್ಮಿಳಾ, ಮಂಥರಾ, ಚಿತ್ರಪಟ ಹೀಗೆ ಅನೇಕ ನಾಟಕಗಳನ್ನು ರಚಿಸಿದ ಕವಿಯ, ಅಂತರಾಳ ಅವರು ಸ್ತ್ರೀಯರನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ರೀತಿ, ಕಲಾ ನೈಪುಣ್ಯತೆ, ಅವರು ತಮ್ಮ ಕಾವ್ಯ ಮತ್ತು ಕೃತಿಗಳಲ್ಲಿ ವ್ಯಕ್ತಿಗಳನ್ನು ಪಾತ್ರಗಳನ್ನು ಕಟ್ಟಿಕೊಡುವ ರೀತಿ, ಬರೆದ ಸಾಲಿನಲ್ಲೇ ಮೂಡುವ ವಿಶೇಷತೆ, ಸಾಹಿತ್ಯದ ಅನೇಕ ಬೆರಗಿನ ಮಜಲುಗಳಲ್ಲಿ HSV ಅವರ ಛಾಪು ಮತ್ತು ಅದರ ವೈಶಿಷ್ಟ್ಯ ಈ ಎಲ್ಲವುಗಳನ್ನು ತಾನು ಕೇವಲ ಎ. ಕೆ. ರಾಮಾನುಜನ್ ಅವರ ಕಾವ್ಯವಾದ ಅಂಗುಲದ ಹುಳದಂತೆ ಎಂದು ವಿನಮ್ರವಾಗಿ ಹೇಳುತ್ತಲೇ ತಮ್ಮ ಮಾತುಗಳಲ್ಲಿ ನಮ್ಮೆಲ್ಲರನ್ನು ಮೆಸ್ಮರೈಜ್ ಮಾಡಿದ್ದು ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ವಾಗ್ಝರಿ. ಒಮ್ಮೊಮ್ಮೆ ವಿವರಣೆ ಒಮ್ಮೊಮ್ಮೆ ಹಾಡು ಒಮ್ಮೊಮ್ಮೆ ತಾವೇ ಆ ಪಾತ್ರವೇನೋ ಎನ್ನುವಷ್ಟು ಏಕಾತ್ಮತೆಯಿಂದ ಸಹೃದಯ ಪ್ರೇಕ್ಷಕರಿಗೆ ಅವರ ಬಗ್ಗೆ ಇವರು ಇನ್ನಷ್ಟು ಹೇಳಿದರೂ ಕೇಳಿಬಿಡೋಣ ಎಂದೆನಿಸುವಂತೆ ಹೇಳಿದ್ದಂತೂ ಸತ್ಯ. ಸಮಯ ಕಳೆದದ್ದೇ ಅರಿವಿಗೆ ಬಾರದಂತೆ ನಮ್ಮನ್ನೆಲ್ಲ ಹೆಚ್ಚೆಸ್ವಿಯವರ ಲೋಕಕ್ಕೆ ಕೊಂಡೊಯ್ದು ನಿಜವಾದ ಭಾವಾನಂದದಲಿ ಸಮರ್ಪಿಸಿ ದರೆಂದರೆ ಅದು ಹೆಚ್ಚುಗಾರಿಕೆಯಲ್ಲ.
ಇನ್ನು ನಾದ ನಮನದಲ್ಲಿ ಸದಾ ನಮ್ಮ ಕಿವಿಯಲ್ಲಿ ಅನುರಣಿಸುವ HSV ಅವರ ಗೀತೆಗಳನ್ನು ಅದರ ಸೊಗಸಾದ ವಿವರಣೆಯೊಂದಿಗೆ ನಮ್ಮನ್ನು ಬೇರೊಂದು ಲೋಕದ ಭಾವ ಲಹರಿಗೆ ಕೊಂಡೊಯ್ಯುವಂತೆ ಮಾಡಿದ್ದು ಒಂದು ವಿನಯ್ ಶಿವಮೊಗ್ಗ ಅವರ ಸಾಹಿತ್ಯ ವಾದರೆ ಇನ್ನೊಂದು ಶಿವಮೊಗ್ಗದ ಹೆಮ್ಮೆಯ ಗಾಯಕರಾದ ಶ್ರೀ ಪಾರ್ಥ ಚಿರಂತನ್ ಹಾಗೂ ಕು. ಸಂಜನಾ ಕೆ ರಾವ್ ಹಾಗೂ ಇವರಿಗೆ ಸಾತ್ ನೀಡಿದ ತಬಲಾ, ರಿದಮ್ ಪ್ಯಾಡ್ ಹಾಗು ಕೀಬೋರ್ಡ್ ನ ಎಲ್ಲ ವಾದಕರು ನಮ್ಮನ್ನು ನಾದಲೋಕದಲ್ಲಿ ಕೊಂಡೊಯ್ದು ಬಾವಲೋಕದಲ್ಲಿ ಮಿಂದೇಳುವಂತೆ ಮಾಡಿದವರು. ಎಷ್ಟು ಬಾರಿ ಕೇಳಿದರೂ ಬೇಸರವೇ ಆಗದ ಹೆಚ್ಚೆಸ್ವಿ ಹಾಡುಗಳಾದ ಅಮ್ಮ ನಾನು ದೇವರಾಣೆ, ಲೋಕದ ಕಣ್ಣಿಗೆ ರಾಧೆಯು ಕೂಡ,ಹುಚ್ಚು ಖೋಡಿ ಮನಸ್ಸು, ತೂಗು ಮಂಚದಲ್ಲಿ, ಮ್ಯಾಲೆ ಕವ್ಕೌಕೊಂಡ ಮುಂಗಾರು ಮೋಡ, ಇಷ್ಟು ಕಾಲ ಒಟ್ಟಿಗಿದ್ದು, ಸಂಜೆಯಾಗುತ್ತಿದೆ ನಡೆ ನಡೆ ಗೆಳೆಯ ಅಲ್ಲದೆ ಭಾವಗೀತೆಯಷ್ಟೇ ಪ್ರಸಿದ್ಧಿ ಪಡೆದ ಮುಕ್ತ ಧಾರವಾಹಿಯ ಶೀರ್ಷಿಕೆ ಗೀತೆ ನಮ್ಮೆಲ್ಲರನ್ನ ಭಾವ ಲಹರಿಯಲ್ಲಿ ತೇಲಿಸಿದವು.
ಇನ್ನೊಂದು ವಿಶೇಷ ಅಂದರೆ ಕಾರ್ಯಕ್ರಮದಲ್ಲಿ ಎಚ್ಎಸ್ ವಿ ಕುಟುಂಬ ವರ್ಗ ಉಪಸ್ಥಿತರಿದ್ದು ಅವರ ಮಗನಾದ ಶ್ರೀ ಸುಧೀರ್ ಅವರು ತಮ್ಮ ತಂದೆಯವರೇ ಹೇಳುತ್ತಿದ್ದ ಮಾತಾದ ಸತ್ತವರನ್ನು ಮರೆತರೆ ಮತ್ತೆ ಅವರನ್ನು ಸಾಯಿಸಿದಂತೆ ಎಂದು ಹೇಳಿ 47 ಕಾರ್ಯಕ್ರಮಗಳು ತಮ್ಮ ತಂದೆಯವರ ಸ್ಮರಣೆಯಲ್ಲಿ ಆಗಿದೆ ಎನ್ನುವುದೇ ವಿಶೇಷವಾದ ಸಂಗತಿ ಎಂದರು. ನಾಡಿನ ಉದ್ದಗಲಕ್ಕೂ ಇತ್ತೀಚಿನ ದಿನಗಳಲ್ಲಿ ನುಡಿ ನಮನ ಸಲ್ಲಿಸಿಕೊಂಡ ವಿಶೇಷ ವ್ಯಕ್ತಿ HSV ಎಂದರೆ ಅದು ಅತಿಶೋಕ್ತಿ ಅಲ್ಲ.
ಈ ರೀತಿಯ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮಕ್ಕೆ ನಮ್ಮೆಲ್ಲರನ್ನೂ ಸಾಕ್ಷಿಯಾಗುವಂತೆ ಮಾಡಿದ ಕರ್ನಾಟಕ ಸಂಘದ ಈಗಿನ ಅಧ್ಯಕ್ಷರಾದ ಪ್ರೊ. ಹೆಚ್ ಆರ್ ಶಂಕರನಾರಾಯಣ ಶಾಸ್ತ್ರಿ ಹಾಗೂ ಕಾರ್ಯದರ್ಶಿಗಳಾದ ವಿನಯ್ ಶಿವಮೊಗ್ಗ ಹಾಗೂ ಅವರ ತಂಡದ ಸರ್ವರಿಗೂ ನಗರದ ಎಲ್ಲ ಜನತೆಯ ಪರವಾಗಿ ಅನಂತಾನಂತ ಧನ್ಯವಾದಗಳು.
ಡಾ. ಮೈತ್ರೇಯಿ ಆದಿತ್ಯಪ್ರಸಾದ್, ಉಪನ್ಯಾಸಕರು, ಪೇಸ್ ಪಿ ಯು ಕಾಲೇಜು, ಶಿವಮೊಗ್ಗ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post