ಶ್ರೀ ಮಹಾಲಕ್ಷ್ಮಿಯನ್ನು ಯಜ್ಞವಿದ್ಯೆಯನ್ನಾಗಿ ಋಷಿ ಮುನಿಗಳು ಆರಾಧಿಸುತ್ತಾರೆ.ಸರ್ವ ಯಜ್ಞ ಶರೀರವಾದ ಶ್ರೀ ಮಹಾವಿಷ್ಣುವನ್ನು ಆರಾಧಿಸುವವರ ಗೃಹದಲ್ಲಿ ಆಕೆ ಸ್ಥಿರವಾಗಿರುತ್ತಾಳೆ.ಪುರುಷೋತ್ತಮನಾದ ಶ್ರೀಹರಿಯು ಯಾವ ಯುಗದಲ್ಲಿ ದುಷ್ಟ ಶಿಕ್ಷಣ ನಿಮಿತ್ತವಾಗಿ ಯಾವ ಯಾವ ಅವತಾರಗಳನ್ನು ಎತ್ತಿದರೂ ಆ ಅವತಾರಕ್ಕೆ ಅನುಗುಣವಾಗಿ ತನ್ನ ಸಹಾಯ ಸಂಪತ್ತನ್ನು ನೀಡುತ್ತಾಳೆ.
ಹಗಲು ಮತ್ತು ರಾತ್ರಿಗಳು ಶ್ರೀ ಮಹಾಲಕ್ಷ್ಮಿಯ ಅಧೀನದಲ್ಲಿಯೇ ನಡೆಯುತ್ತವೆಯೆಂದು ಪ್ರಕೃತಿ ಶಕ್ತಿಗಳು ಹಲವಾರು ಸಾರಿ ನಿರೂಪಿಸುತ್ತಲೇ ಇವೆ.ಜ್ಞಾನವು ಶ್ರೀ ಮಹಾಲಕ್ಷ್ಮಿಯ ಅಧೀನ. ಸಮೃದ್ಧಿ ಆಕೆಯ ಕುಡಿಗಣ್ಣ ನೋಟದಿಂದ ಸಾಧ್ಯ ! ಯಶಸ್ಸು ಆಕೆಯ ಅನುಗ್ರಹವೇ ! ಶ್ರೀ ಮಹಾಲಕ್ಷ್ಮಿಯ ಸ್ಪರ್ಶ ಮಾತ್ರದಿಂದಲೇ ಸಕಲ ತೀರ್ಥಗಳು ಪರಿಪೂರ್ಣವಾಗುತ್ತವೆ.
ಮಹಾಮಹಾವಿದ್ಯೆಗಳಿಂದ ಸಕಲ ಲೋಕಗಳನ್ನು ಐಶ್ವರ್ಯಮಯವಾಗಿಸುವ ಲೋಕಪಾವನಿ ಶ್ರೀ ಮಹಾಲಕ್ಷ್ಮಿ.ಸತ್ಯ, ಶೌಚ, ಸತ್‍ಪ್ರವರ್ತನೆ, ಸಂಪದ, ಪ್ರತಿಭೆ, ಶೀಲ ಇರುವೆಡೆ ಶ್ರೀ ಮಹಾಲಕ್ಷ್ಮಿ ವಾಸ ಮಾಡುತ್ತಿರುತ್ತಾಳೆ ಎಂದು ದೇವತಾಶಕ್ತಿಗಳು ಕೀರ್ತಿಸುತ್ತಿವೆ.ಧನಧಾನ್ಯಗಳು, ದೇಹಾರೋಗ್ಯ, ಐಶ್ವರ್ಯ, ಭೋಗಭಾಗ್ಯಗಳು ಶ್ರೀ ಮಹಾಲಕ್ಷ್ಮಿಯ ಕಿರುಗಣ್ಣ ನೋಟವೇ ಎಂದು ಮಾನವ ಗಣಗಳು ಕೀರ್ತಿಸುತ್ತಿವೆ. ದೇವೇಂದ್ರನಿಗರುವ ಸಹ ಸಕಲ ಸಂಪದಗಳು ಆಕೆಯ ಕೃಪಾಕಟಾಕ್ಷವೇ
ಶ್ರೀ ಲಕ್ಷ್ಮೀ ನಿವಾಸ ಸ್ಥಾನಗಳು
- ಗೃಹ, ಗೃಹಿಣಿ, ಮನೆಯ ಒಳಗೆ ಹೊರಗೆ (ಮುಖ್ಯವಾಗಿ ಹೊಸ್ತಿಲು) ,ಶರೀರ ಪರಿಶುದ್ಧವಾಗಿರುವ ಸ್ಥಳ.
- ಹಸಿರು ತೋರಣ, ರಂಗವಲ್ಲಿ, ಮಂಗಳವಾದ್ಯಗಳು, ದೀಪ, ದೈವ, ಇರುವ ಸ್ಥಳಗಳಲ್ಲಿ.
- ಕಪಟ, ಕಲಹ, ಕಾಲುಷ್ಯ, ಕಲ್ಮಷ ಇಲ್ಲದ ಜಾಗದಲ್ಲಿ.
- ಧಾನ್ಯದ ರಾಶಿ, ಹಿರಿಯರು ನಡೆಯುವ ಜಾಡಿನಲ್ಲಿ ನಡೆಯುವ ಜನರಲ್ಲಿ, ಹರಿಶಿಣ, ಗಂಧ, ಕುಂಕುಮ, ಕಾಡಿಗೆ, ಆಭರಣಗಳಿಂದ ಕೂಡಿದ ಮುತ್ತೈದೆಯರಲ್ಲಿ.
- ಪತಿವ್ರತೆಯರಾದ ಸ್ತ್ರೀಯರ ಪಾದಗಳಲ್ಲಿಯೂ, ಭಕ್ತರ ಪಾದಧೂಳಿಯಲ್ಲಿಯೂ, ಸಂತೃಪ್ತಿ, ವಿನಯ ವಿಧೇಯತೆಗಳು, ಸತ್ಯಶೀಲರಾದ ವಿದ್ವಾಂಸರಲ್ಲಿಯೂ, ಪರಿಶುಭ್ರವಾದ ವಸ್ತ್ರಗಳನ್ನು ಧರಿಸಿರುವವರಲ್ಲಿಯೂ.
- ಪರಧನ, ಪರಸ್ತ್ರೀ, ಪರರ ಸ್ವತ್ತನ್ನು ತೃಣವಾಗಿ ಭಾವಿಸುವವರನ್ನು.
- ದಾಂತಿ (ಇಂದ್ರಿಯ ನಿಗ್ರಹ) ಶಾಂತಿ ಹೊಂದಿರುವವರಲ್ಲಿ ಬ್ರಾಹ್ಮಣರ, ಭಾಗವತೋತ್ತಮರ, ಸಾಧುಸಜ್ಜನರನ್ನು ನಿಂದಿಸದವರಲ್ಲಿ.
- ಶುಕ್ರವಾರದ ಪ್ರಾತಃಕಾಲದಲ್ಲಿ, ಸೂರ್ಯೋದಯ, ಸೂರ್ಯಾಸ್ತಮಾನ ಸಂಧ್ಯಾಕಾಲದಲ್ಲಿ.
- ಹಸುಗೂಸುಗಳಲ್ಲಿ ವ್ರತ-ನಿಯಮಗಳನ್ನು ಆಚರಿಸುವವರಲ್ಲಿ, ತೀರ್ಥಯಾತ್ರೆಗಳನ್ನು ನಿಯಮವಾಗಿ ಮಾಡುವವರಲ್ಲಿ.
- ಲಲಿತಕಲೆಗಳಲ್ಲಿ
- ಅತಿಥಿ ಅಭ್ಯಾಗತರನ್ನು ಆದರಿಸುವವರಲ್ಲಿ
- ಮದ್ಯಮಾಂಸವನ್ನು ವಿಸರ್ಜಿಸಿರುವ ಜಿಹ್ವಾಚಾಪಲ್ಯ ಇಲ್ಲದಿರುವವರಲ್ಲಿ.
- ದಾನ, ಧರ್ಮ ಉಳ್ಳವರಲ್ಲಿ
- ಮಾನಾವಮಾನಗಳು, ಶೀತೋಷ್ಣಗಳು, ಸುಖದುಃಖಗಳು, ಲಾಭಾಲಾಭಗಳು, ಜಯಾಪಜಯಗಳು, ಆದಾಯ ವ್ಯಯಗಳು, ಈತಿಭಾದೆಗಳನ್ನು ಸಮಾನವಾಗಿ ಕಾಣುವವರಲ್ಲಿ.
- ಜೀವನದಿಗಳಲ್ಲಿ, ತುಂಬಿರುವ ಸರಸ್ಸುಗಳು, ದಿವ್ಯಕ್ಷೇತ್ರಾದಿಗಳಲ್ಲಿ, ಗೋವಿನ ಬಾಲದಲ್ಲಿ, ಗೋಧೂಳಿಯಲ್ಲಿ, ಕರ್ತವ್ಯ ಪರಾಯಣರಲ್ಲಿ.
- ಬಿಲ್ವ, ತುಳಸಿ, ಅಶ್ವತ್ಥ ಮರುಗ, ದವನ, ಚಂಪಕ (ಸಂಪಿಗೆ) ಪಾರಿಜಾತ, ಮಲ್ಲಿಗೆ, ಮೊಲ್ಲೆ, ಮೋದುಗ, ಮಾವು, ಪತ್ರೆ ಪುಷ್ಪ ವೃಕ್ಷಾದಿಗಳಲ್ಲಿ.
ಲಕುಮಿಯು ಕಾಣಿಸುವ ಸ್ಥಳ ಯಾವುದು
· ದಿವ್ಯ ಸ್ತ್ರೀಯರಲ್ಲಿ ಸಕಲ ಸಸ್ಯಗಳಲ್ಲಿ, ನಗರಗಳಲ್ಲಿ, ರತ್ನಗಳಲ್ಲಿ, ಮುತ್ತಿನಲ್ಲಿ, ಪುಷ್ಪಹಾರಗಳಲ್ಲಿ, ಮಾಣಿಕ್ಯದಲ್ಲಿ, ಜಲಜಾಲದಲ್ಲಿ, ಹಣ್ಣುಗಳಲ್ಲಿ, ಮಂಗಳಪಟಗಳಲ್ಲಿ, ಹಾಲಿನಲ್ಲಿ, ದಿವ್ಯ ಶ್ರೀಚಂದನಾದಿಗಳಲ್ಲಿ, ರಮ್ಯವೃಕ್ಷ ಶಾಖೆಗಳಲ್ಲಿ, ಮೇಘಗಳಲ್ಲಿ, ಉತ್ತಮ ಮಣಿಹಾರಗಳಲ್ಲಿ, ನೃಪಾಲರಲ್ಲಿ, ಉತ್ತಿರುವ ಭೂಮಿಯಲ್ಲಿ, ದೇವತಾ ಪ್ರತಿಮೆಗಳಲ್ಲಿ, ಸಮಸ್ತ ವಸ್ತುಗಳಲ್ಲಿರುವುದು ಆಕೆಯೇ. ಆಕೆಯನ್ನು ನಂಬಿದವರಿಗೆ ಕೊರತೆ ಎಂಬುದು ಇಲ್ಲ. ಆಕೆಯು ಅಡಿ ಇಟ್ಟ ಜಾಗದಲ್ಲಿ ಸರ್ವವೂ ಜಯಪ್ರದವೇ.
· ಮನೆಯ ಮುಂಭಾಗದಲ್ಲಿ ರಂಗವಲ್ಲಿ, ಪೂಜಾಪೀಠದ ಹತ್ತಿರ ದೀಪ, ಕೊಟ್ಟಿಗೆಯಲ್ಲಿ ಗೋವು, ಬಾಗಿಲಿಗೆ ಅರಿಶಿಣ, ಹಣೆಗೆ ಕುಂಕುಮ, ತುಳಸೀ ಬೃಂದಾವನ, ಸತ್ಯವಾಕ್ಯ ಪರಿಪಾಲನೆಯು ಯಾರ ಮನೆಯಲ್ಲಿ ನಿತ್ಯವೂ ರಾರಾಜಿಸುತ್ತಿರುವುದೋ ಅಂತಹವರ ಮನೆಗೆ ತನ್ನಷ್ಟಕ್ಕೆ ತಾನೇ ಬರುತ್ತಾಳೆ ಮಹಾಲಕ್ಷ್ಮಿ.
· ಕೇವಲ ಐಶ್ವರ್ಯಕ್ಕಾಗಿಯೇ ಶ್ರೀ ಮಹಾಲಕ್ಷ್ಮಿಯ ಆರಾಧನೆ ಸಲ್ಲದು. ಸ್ವಾರ್ಥದಿಂದ ಯಾರಾದರೂ ಆಕೆಯನ್ನು ಅರ್ಚಿಸಿದರೆ ಫಲಿತ ನಾಸ್ತಿ. ತನ್ನ ಭಕ್ತರಿಗೆ ಏನೇನು ಕೊಡಬೇಕೋ ಆ ತಾಯಿಗೆ ಗೊತ್ತು. ಶ್ರೀ ಮಹಾಲಕ್ಷ್ಮಿಯ ಆರಾಧನೆಯಿಂದ ಮಹಾಸಾಮ್ರಾಜ್ಯಗಳೇ ಭಕ್ತರ ಹತ್ತಿರಕ್ಕೆ ಬರುತ್ತದೆ.
· ಮಾಂಸಾಹಾರ ತ್ಯಜಿಸಬೇಕು. ಮದ್ಯಪಾನಿಗಳಿಗೆ ಲಕ್ಷ್ಮಿಯು ಒಲಿಯುವುದಿಲ್ಲ. ದಂಪತಿಗಳು ಮಂಗಳ, ಶುಕ್ರವಾರ, ಶನಿವಾರಗಳು ಹಾಗೂ ಅಮಾವಾಸ್ಯೆಯಂದು ಬ್ರಹ್ಮಚರ್ಯೆ ಆಚರಿಸಬೇಕು. ಐಶ್ವರ್ಯ, ಸೌಭಾಗ್ಯ, ಸತ್ಯ, ಶೌಚ, ಶೀಲ, ಹರಿಶಿಣ, ಕುಂಕುಮ, ತುಳಸಿ ಎನ್ನುವ ಅಷ್ಟವಿಧ ರೂಪಗಳಲ್ಲಿ ನಿಮ್ಮ ಮನೆಗೆ `ಅಷ್ಟಲಕ್ಷ್ಮಿ’ಯ ವೈಭವವಾಗಿ ಪ್ರವೇಶಿಸುತ್ತಾಳೆ.
ಶ್ರೀ ಮಹಾಲಕ್ಷ್ಮಿಯ ಅವತಾರ ಯಾವುದಕ್ಕೆ ಸಂಕೇತ !
• ಕ್ಷೀರಸಾಗರ ಮಥನದಿಂದ ಆವಿರ್ಭವಿಸಿದ ಶ್ರೀ ಮಹಾಲಕ್ಷ್ಮಿಯ ಅವತಾರವು ಒಂದು ಸಂಕೇತಾರ್ಥವೆಂದು ಭಾವಿಸಬಹುದು. ಈ ಪ್ರಪಂಚವೊಂದು ಸಾಗರವೆಂದು, ಮಾನವನ ಒಳ್ಳೆಯ ಹಾಗೂ ಕೆಟ್ಟ ಗುಣಗಳೇ ದೇವದಾನವರೆಂದು, ಧನಸಂಪಾದನೆಗಾಗಿ ನಾವು ಪಡುವ ಕಷ್ಟ, ಶ್ರಮವೇ ಸಮುದ್ರ ಮಥನವೆಂದು, ಈ ಸಮಯದಲ್ಲಿ ನಮಗೆ ಎದುರಾಗುವ ಅನುಭವಗಳೇ ಹಾಲಾಹಲ ವಿಷವೆಂದು, ಇನ್ನೂ ಹೆಚ್ಚು ಕಷ್ಟಪಟ್ಟು ಸಾಧನೆ ಮಾಡಿದರೆ ದೇವರ ಅನುಗ್ರಹದಿಂದ ಕೀರ್ತಿ, ಪ್ರತಿಷ್ಠೆ, ಸಂಪದಗಳೆಂಬ ಅಮೃತವು ಲಭಿಸುವುದನ್ನು ಶ್ರೀ ಲಕ್ಷ್ಮಿಯ ಅವತರಣದ ಸಂಕೇತವೆಂದು ಭಾವಿಸಬಹುದು.
ಲಕ್ಷ್ಮೀದೇವಿ ಅದೃಷ್ಟ (LUCK-SHE-ME)
• LUCK = ಅದೃಷ್ಟವನ್ನು
• SHE – ಆಕೆಯು (ಆ ತಾಯಿಯು)
• ME – ನನಗೆ ನೀಡಲಿ
ಶ್ರಾವಣ ಮಾಸದ ಪ್ರಾರ್ಥನೆ
ಅಂತರಾಂತರಗಳಲ್ಲಿ ಒದಗಿರುವ ಐಶ್ವರ್ಯ ಶಕ್ತಿ ಶ್ರೀ ಮಹಾಲಕ್ಷ್ಮಿದೇವಿ. ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು `ಅಮ್ಮಾ’ ಎಂದು ಕರೆದರೂ ಸಾಕು ಸಿರಿಯಿಂದ ತುಂಬಿ ಖುಷಿಯಾಗಿ ನಮ್ಮ ಮನೆಯೆಡೆಗೆ ಇಣುಕಿ ನೋಡುವಳಂತೆ. ಹದಿನಾಲ್ಕು ಲೋಕದಲ್ಲಿನ ಸಕಲ ಸಂಪದಗಳಿಗೂ ಮೂಲವಾದ ಶಕ್ತಿಗಳು. ಆ ಶಾಂತಲಕ್ಷ್ಮಿಯ ಕಣ್ಣು ಸನ್ನೆಯಿಂದಲೇ ಅವು ಸಂಚರಿಸುತ್ತವಂತೆ. ಈ ಸೃಷ್ಟಿಗೆ ಆಕೆಯೇ ಸುವರ್ಣ ಸದೃಶಳು. ಅಖಿಲ ಲೋಕಾಶ್ಚರ್ಯಕರ ಸೌಂದರ್ಯದಿಂದ ಶ್ರೀಪೀಠದ ಮೇಲೆ ಆಸೀನಳಾಗಿರುವ ವರಗಳನ್ನು ನೀಡುವ ವರಲಕ್ಷ್ಮಿಯು ವೇದ ಪ್ರಮಾಣಳು.
ಶೃತಿ ಗೌರವ ಇರುವಳೆಂದು ಋಷಿಗಳು ಎಂದೋ ಒಪ್ಪಿಕೊಂಡಿದ್ದಾರೆ. ಶ್ರಾವಣಮಾಸದ ಪ್ರಾತಃಕಾಲದ ವೇಳೆಯಲ್ಲಿ ನಾವು ಎಲ್ಲಿದ್ದರೂ ಸರಿ ಆ ಶ್ರೀಮಯಿಯ ನಾಮಗಳನ್ನು ಹೇಳಿಕೊಂಡರೆ ಸಾಕು. ಲೋಕೋತ್ತರ ಲಾವಣ್ಯ ಶೋಭೆಗಳಿಂದ ನಮ್ಮ ಜೀವನದ ಘಟ್ಟಗಳನ್ನು ಸೌಭಾಗ್ಯದಿಂದ ಸಂರಕ್ಷಿಸುತ್ತಾಳೆ. ಪವಿತ್ರ ಶ್ರಾವಣಮಾಸ ಪ್ರಾರಂಭದಿಂದ `ಶ್ರೀ ಲಕ್ಷ್ಮಿ ಅಷ್ಟೋತ್ತರ ಶತನಾಮ’ ಸ್ತ್ರೋತ್ರವನ್ನು ಪಾರಾಯಣ ಮಾಡಿ ಎಂದು ಶ್ರೀದೇವಿ ಭಾಗವತವೂ ಸಹ ಸ್ಪಷ್ಟ ಮಾಡುತ್ತದೆ.
ಭಕ್ತಿಯಿಂದ, ನಿಷ್ಠೆಯಿಂದ, ಎಚ್ಚರದಿಂದ, ಶ್ರದ್ಧೆಯಿಂದ ಈ ಸ್ತ್ರೋತ್ರವನ್ನು ಪಾರಾಯಣ ಮಾಡಿದರೆ ಶ್ರೀತತ್ತ್ವವನ್ನು ಪ್ರಸರಿಸುತ್ತಾ ತಾಯಿಯು ನಮ್ಮ ಮನೆಯಲ್ಲೇ ನೆಲೆಸಿರುತ್ತಾಳೆ. ಪ್ರಾಣಿಕೋಟಿಯನ್ನು ಕೋಟಿ ರೂಪದಲ್ಲಿ ಕಾಪಾಡು ಎಂದು ಶ್ರೀರಂಗಧಾಮೇಶ್ವರಿಯನ್ನು ಶ್ರಾವಣ ಮಂಗಳ ಸಮಯದಲ್ಲಿ ಕೈಗಳೆತ್ತಿ ನಮಸ್ಕರಿಸೋಣ. ಚತುರ್ದಶ ಭುವನಗಳ ಮೇಲೆ ಐಶ್ವರ್ಯ ಶಕ್ತಿಗಳನ್ನು ಪ್ರಸರಿಸುವ ಶ್ರೀಲಕ್ಷ್ಮಿಗೆ ಮಂಗಳ, ಪುಣ್ಯಜೀವಿಗಳಿಗೆ ಧರ್ಮ, ಯಶಸ್ಸು, ಶ್ರೇಯಸ್ಸು, ಜ್ಞಾನ ವೈರಾಗ್ಯವನ್ನು ಪ್ರಸಾದಿಸುವ ಶ್ರೀ ಮಹಾಲಕ್ಷ್ಮಿಗೆ ಜಯಮಂಗಳ ಶುಭವಾದ ವಾಕ್ಕನ್ನು ರಕ್ಷಿಸುವ ಶ್ರೀಕಾಂತೆಗೆ ನಿತ್ಯಮಂಗಳ, ಪ್ರಪಂಚ ಶ್ರೇಯಃ ಪರಂಪರೆಗೆ ಅವಶ್ಯವಾದ ಶ್ರೀ ಪರಂಪರೆಯನ್ನು ಬೆಳಗುವ ಶ್ರೀದೇವಿಗೆ ಜಯಮಂಗಳ.
ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ), ಯುವ ಸಂಸ್ಕೃತಿ ಚಿಂತಕರು
Discussion about this post