ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ದಶಕಗಳ ಕಾಲ ಪರಿಸರ ಹಾಗೂ ಪ್ರಾಣಿಗಳ ರಕ್ಷಣೆಗಾಗಿ ತಮ್ಮನ್ನೇ ತೊಡಗಿಸಿಕೊಂಡ ಸೊರಬದ ಶ್ರೀಪಾದ ಬಿಚ್ಚುಗತ್ತಿ ಅವರಿಗೆ ಪ್ರತಷ್ಠಿತ ರಾಜ್ಯ ಜೀವ ವೈವಿಧ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರಳ, ರಕ್ಷಣಾತ್ಮಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ರಾಜ್ಯ ಜೀವ ವೈವಿಧ್ಯ ಮಂಡಳಿ ಕಾರ್ಯವೈಖರಿಯ ಕ್ರಿಯಾಶೀಲತೆ ಗಮನಾರ್ಹ ವಾಗಿದೆ. ಮಂಡಳಿ ಅಧ್ಯಕ್ಷ ಅನಂತಹೆಗಡೆ ಅವರು ರಾಜ್ಯಾದ್ಯಂತ ಪರಿಸರ ಕಾಳಜಿ ಮೂಡಿಸುವಲ್ಲಿ ಶ್ರಮವಹಿಸಿದ್ದಾರೆ. ಪರಿಹಾರವನ್ನು ಪ್ರಕೃತಿಯಲ್ಲೇ ಕಂಡುಕೊಳ್ಳಬೇಕು ಎಂಬ ಧ್ಯೇಯ ವಾಕ್ಯದಡಿಯಲ್ಲಿನ ಮಂಡಳಿಯ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿ, ಜೀವವೈವಿಧ್ಯತೆಯ ಸಂರಕ್ಷಣೆಗೆ ನಮ್ಮ ಪೂರ್ಣ ಸಹಕಾರವಿರುತ್ತದೆ ಎಂದರು.
ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಮಾತನಾಡಿ, ರೈತರ ಜೊತೆ, ಶಿಕ್ಷಣ ಸಂಸ್ಥೆ/ತಜ್ಞರ, ಸಾಹಿತಿಗಳೊಂದಿಗೆ ನಡೆಸುವಂತೆ ಪರಿಸರ ಸಂಸ್ಥೆ, ತಜ್ಞರ ಜೊತೆಯೂ ಸಮಾಲೋಚನೆ ಸಭೆ ನಡೆಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಕೋರಿಕೊಂಡರು.
ಶರಾವತಿ ಕಣಿವೆಯಲ್ಲಿ ಭೂಗತ ಜಲವಿದ್ಯುತ್ ಯೋಜನೆ ಪ್ರಸ್ತಾಪವಾಗಿದ್ದು, ಸರ್ವೆ ಹಂತದಲ್ಲಿದೆ. ಆದರೆ, ಈ ಕ್ರಿಯೆಯಿಂದ ಜಗತ್ತಿನ ಬಹು ಅಪರೂಪದ ಕಣಿವೆ ನಾಶವಾಗಲಿದೆ. ಇದೆ ಯೋಜನೆ ಬೇರೆಲ್ಲಾದರಾಗಲಿ, ಶರಾವತಿ ಈ ಯೋಜನೆಯ ಬಗ್ಗೆ ಪುನರ್ ವಿಮರ್ಶೆ ಆಗಲಿ ಎಂದರು.
ಕೋವಿಡ್19ರ ಒತ್ತಡದ ನಡುವೆಯೂ ರಾಜ್ಯದ ಅನೇಕ ಕಡೆ ಸರಳವಾಗಿ ಸುರಕ್ಷಿತವಾಗಿ ಜೀವವೈವಿಧ್ಯ ದಿನಾಚರಣೆ ಕಾರ್ಯಕ್ರಮ ನಡೆದಿರುವ ಬಗ್ಗೆ ತಿಳಿಸಿದರು.
ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಪಾದ ಬಿಚ್ಚುಗತ್ತಿ, ಬಹು ವೈವಿಧ್ಯತೆಯ ಈ ನಾಡಿನಲ್ಲಿ ಕೊರೋನಾಕ್ಕಿಂತ ಮಾರಕವಾದ ಕಾಯಿಲೆ ಪರಿಸರ ನಾಶದಿಂದ ಉದ್ಭವಿಸುವ ಲಕ್ಷಣಗಳಿವೆ. ಇಂತಹ ಸಂದರ್ಭದಲ್ಲಿ ಮಾನವಧರ್ಮ, ಮಾನವೀಯತೆಗೆ ಮಾನ್ಯತೆ ನೀಡುವ ಮೂಲಕ ಸಕಲ ಜೀವರಾಶಿಗಳ ಸಂರಕ್ಷಣೆ ಅಗಬೇಕು. ಮಾತು ಕೃತಿಯೆಡೆಗೆ ತಿರುಗಬೇಕು. ಆಗ ಮಾತ್ರ ಇಂತಹ ದಿನಾಚರಣೆ, ಪ್ರಶಸ್ತಿಗಳು ಅರ್ಥ ಪೂರ್ಣ ಎನಿಸುತ್ತವೆ ಎಂದರು.
ಎಲ್ಲೊ ಹಳ್ಳಿಗಾಡಲ್ಲಿದ್ದು, ಭೂಮಿಯ ಋಣ ತೀರಿಸುವ ಅತಿಸಣ್ಣ ಕರ್ತವ್ಯಕ್ಕೆ ಮಾನ್ಯತೆ ದೊರಕಿದ್ದು ತೃಪ್ತಿಯ ಜೊತೆಗೆ ನಿರಂತರ ಕರ್ತವ್ಯವನ್ನು ಎಚ್ಚರಿಸಿದೆ. ಈ ಪ್ರಕ್ರಿಯೆಯ ಪ್ರಮುಖ ರೂವಾರಿಗಳಾದ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ, ಮುಖ್ಯಮಂತ್ರಿ ಬಿಎಸ್’ವೈ, ಅರಣ್ಯಸಚಿವ ಆನಂದಸಿಂಗ್ ಹಾಗೂ ಅರಣ್ಯ ಇಲಾಖೆ ಉನ್ನತಾಧಿಕಾರಿಗಳಿಗೆ ನಮನಗಳನ್ನು ಸಲ್ಲಿಸುವ ಮೂಲಕ ನನಗೆ ಬಂದ ಪ್ರಶಸ್ತಿಯನ್ನು ಸದಾಕಾಲವೂ ನನ್ನ ಚಿಂತನೆಗೆ ಹೆಗಲಾಗಿರುವ ನನ್ನ ಕುಟುಂಬದ ಸದಸ್ಯರನ್ನು, ಮಿತ್ರರನ್ನು, ನನ್ನ ಹಿರಿಯರನ್ನು, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ, ಕಾರ್ಯದರ್ಶಿ ಸದಸ್ಯರನ್ನು, ಆತ್ಮೀಯರೆಲ್ಲರನ್ನು ಸ್ಮರಿಸಿ ತಿರುಗಿ ನಮ್ಮ ಉಸಿರಿಗೆ ಉಸಿರಾಗಿರುವ ಪ್ರಕೃತಿಗೆ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಜಾಗೃತಿ ಅಭಿಯಾನದ ದಾಖಲಾತಿ, ಬ್ರೋಷರ್ ಅನ್ನು ಮಾನ್ಯ ಮುಖ್ಯಮಂತ್ರಿಗಳು, ವಾರ್ತಾಸಂಚಿಕೆಯನ್ನು ಅರಣ್ಯ ಸಚಿವ ಆನಂದ್ ಸಿಂಗ್ ಬಿಡುಗಡೆಗೊಳಿಸಿದರು. ನವೀಕೃತ ವೆಬ್ ಸೈಟ್’ಗೆ ಇದೆ ವೇಳೆ ಚಾಲನೆ ನೀಡಲಾಯಿತು.
ರಾಜ್ಯ ಜೀವ ವೈವಿಧ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಪಾದ ಬಿಚ್ಚುಗತ್ತಿ ಸೊರಬ ಪ್ರಶಸ್ತಿ ಸ್ವೀಕರಿಸಿದರು. ವಾಹನ ಸೌಲಭ್ಯವಿಲ್ಲದೆ ಯಲ್ಲಾಪುರದ ಪರಿಸರ ಕಾರ್ಯಕರ್ತ ಶಾಂತಾರಾಂ ಸಿದ್ಧಿ, ರೋಣ ತಾಲೂಕಿನ ಮಂಜುನಾಥ್ ನಾಯ್ಕ್ ಆಗಮಿಸಲಿಲ್ಲ. ಅವರಿಗೆ ಅವರ ಸ್ವಕ್ಷೇತ್ರದಲ್ಲಿಯೇ ಪ್ರಶಸ್ತಿ ಪ್ರಧಾನ ಮಾಡುವುದಾಗಿ ನಿರ್ಧರಿಸಲಾಯಿತು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಇಲಾಖೆ ವತಿಯಿಂದ ಚೆಕ್ ನೀಡಲಾಯಿತು. ಮಂಡಳಿಯ ಸದಸ್ಯ ಕಾರ್ಯದರ್ಶಿ ವೀರೇಂದ್ರ ಸಿಂಗ್ ಸ್ವಾಗತಿಸಿ, ಪ್ರಸನ್ನ ವಂದಿಸಿದರು. ಐಶ್ವರ್ಯ ನಿರೂಪಿಸಿ, ಸಹನಾ ಹೆಗಡೆ ವೆಬ್ ಸೈಟ್ ಮಾಹಿತಿ, ಶೃತಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿದ್ದರು.
(ವರದಿ: ಮಧುರಾಮ್)
Get in Touch With Us info@kalpa.news Whatsapp: 9481252093
Discussion about this post