ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಲಾ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿರುವವರು ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು (Fail) ಇದೀಗ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆ (SSLC Exam) ಬರೆಯಲು ಉತ್ತಮ ಅವಕಾಶವಿದ್ದು, ಶಿಕ್ಷಣದಿಂದ ವಂಚಿತರಾದವರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಸ್ಎಸ್ಎಲ್ಸಿ ಪ್ರವೇಶ ಸಹಾಯ ಮತ್ತು ಸಾರ್ವಜನಿಕ ಜಾಗೃತಿ ತಂಡದ ಉಪ ಮಾರ್ಗದರ್ಶಕ ಗಣೇಶ್ ಆರ್. ಮಾಂಡ್ರೆ ಮನವಿ ಮಾಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಷನ್ (BISE) ಸಂಸ್ಥೆಯ ವತಿಯಿಂದ ಎಸ್ಎಸ್ಎಲ್ಸಿ ನೇರ ಪರೀಕ್ಷೆ ನಡೆಸಲಾಗುತ್ತಿದ್ದು, 2027ನೇ ಸಾಲಿನ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನವಾಗಿದ್ದು, ಪರೀಕ್ಷೆಯು 2027ರ ಜನವರಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
SSLC Exam: 16 ರಿಂದ 95 ವರ್ಷದವರಿಗೂ ಪರೀಕ್ಷೆ ಬರೆಯಲು ಅವಕಾಶ
ಈ ಪರೀಕ್ಷೆಗೆ ಅರ್ಜಿ ನಮೂನೆ ಸಂಪೂರ್ಣ ಉಚಿತವಾಗಿದ್ದು, 16ರಿಂದ 95 ವರ್ಷದವರೆಗಿನ ಅಭ್ಯರ್ಥಿಗಳು ನಿಗದಿತ ಅರ್ಹತಾ ನಿಯಮಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಓದಲು ಮತ್ತು ಬರೆಯಲು ತಿಳಿದಿರಬೇಕು. ಕನಿಷ್ಠ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿರಬೇಕು. ಇದಕ್ಕೆ ಸಂಬಂಧಿಸಿದ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ವಿವರಿಸಿದರು.
ಪ್ರಸ್ತುತ ಎಸ್ಎಸ್ಎಲ್ಸಿ ಪರೀಕ್ಷೆಯ ಮಾದರಿಯಲ್ಲಿಯೇ ಈ ಪರೀಕ್ಷೆಯಲ್ಲಿಯೂ ಆರು ವಿಷಯಗಳಿರುತ್ತವೆ. ಬಿಐಎಸ್ಇ ಸಂಸ್ಥೆಗೆ ಅನ್ವಯವಾಗುವ ಪಠ್ಯಕ್ರಮ ಮತ್ತು ಪರೀಕ್ಷಾ ನಿಯಮಗಳ ಪ್ರಕಾರ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಉಚಿತ ಅಧ್ಯಯನ ಸಾಮಗ್ರಿ, ವಿಡಿಯೋ ಪಾಠಗಳ ವ್ಯವಸ್ಥೆ
ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ಪಠ್ಯಪುಸ್ತಕಗಳು, ಅಧ್ಯಯನ ಸಾಮಗ್ರಿಗಳು ಹಾಗೂ ಉಚಿತ ವಿಡಿಯೋ ಪಾಠಗಳನ್ನು ಒದಗಿಸಲಾಗುತ್ತದೆ. ಅಲ್ಲದೆ, ಪರೀಕ್ಷೆಗೆ ಸಿದ್ಧತೆ ನಡೆಸಲು 15 ದಿನಗಳ ವಿಶೇಷ ತರಗತಿಗಳನ್ನೂ ಆಯೋಜಿಸಲಾಗುತ್ತದೆ. 200 ಅಭ್ಯರ್ಥಿಗಳಿರುವ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಎಸ್ಎಸ್ಎಲ್ಸಿಗೆ ತತ್ಸಮಾನ ಅರ್ಹತೆ ದೊರೆಯಲಿದ್ದು, ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು, ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು, ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಹಾಗೂ ಉದ್ಯೋಗದಲ್ಲಿ ಬಡ್ತಿ ಹೊಂದಲು ಅನುಕೂಲವಾಗಲಿದೆ. ವೈಯಕ್ತಿಕ ಗೌರವ ಮತ್ತು ಶೈಕ್ಷಣಿಕ ಅರ್ಹತೆಯ ದೃಷ್ಟಿಯಿಂದಲೂ ಈ ಪರೀಕ್ಷೆ ಮಹತ್ವದ್ದಾಗಿದೆ ಎಂದರು.
Also Read>> ಅಸ್ಸಾಂನ ಕಾಜಿರಂಗದಲ್ಲಿ ಭೀಕರ ಅಪಘಾತ | ಟ್ರಕ್ಗೆ ಮಿನಿ ಬಸ್ ಡಿಕ್ಕಿ, 25 ಮಂದಿ ಸಾವು
ಉದ್ಯೋಗ ಪಡೆಯಲು ಸಹಕಾರಿಯಾದ ಅರ್ಹತೆ
ಶಿಕ್ಷಣದಿಂದ ವಂಚಿತರಾದ ಸಾವಿರಾರು ಅಭ್ಯರ್ಥಿಗಳು ಸಂಸ್ಥೆಯ ಮೂಲಕ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿರುವವರು ವಯಸ್ಸಿನ ಹಂಗಿಲ್ಲದೆ ಈ ಅವಕಾಶವನ್ನು ಬಳಸಿಕೊಂಡು ಎಸ್ಎಸ್ಎಲ್ಸಿ ಅರ್ಹತೆ ಪಡೆಯಬೇಕು ಎಂದು ಗಣೇಶ್ ಆರ್. ಮಾಂಡ್ರೆ ಕರೆ ನೀಡಿದರು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 73378 75208, 96630 87607 ಹಾಗೂ ಕಚೇರಿ ದೂರವಾಣಿ ಸಂಖ್ಯೆ 080 62177025 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಸಲಹೆಗಾರರಾದ ನಾಗರತ್ನ, ಸಂಸ್ಥೆಯ ಪ್ರತಿನಿಧಿಗಳಾದ ಸೂರ್ಯಕಾಂತ್, ಸತೀಶ್ ಬಿ.ಪಿ., ಗಿರಿಜಾ ಹಿರೇಮಠ, ಮಹೇಶ್ ಪಿ.ಎಚ್., ಮಂಜುನಾಥ್ ಹಾಗೂ ಅಶುತೋಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









