ಭದ್ರಾವತಿ: ನಿರೀಕ್ಷಿಸಿದಂತೆ 619 ಅಂಕಗಳು ಬಂದಿದೆ. ಆದರೆ ಸಮಾಜ ವಿಜ್ಞಾನದಲ್ಲಿ ಶೇ: 100 ಅಂಕಗಳು ಬಾರದಿರುವುದು ದುಖಃ ತಂದಿದೆ ಎಂದು ತಾಲೂಕಿನ ಟಾಪರ್ ಹಾಗು ನ್ಯೂಟೌನ್ ಎಸ್‌ಎವಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ. ವಿದ್ಯಾ ಹೇಳಿದ್ದಾರೆ.
ಎಸ್‌ಎವಿ ಶಾಲೆಯಲ್ಲಿ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿ, ವಿದ್ಯಾ ಶಾಲೆಯ ಸಮಸ್ಥ ಶಿಕ್ಷಕ-ಶಿಕ್ಷಕಿಯರು ನೀಡಿದ ಜ್ಞಾನಾರ್ಜನೆಯಿಂದ ನನಗೆ ಅತ್ಯುತ್ತಮ ಫಲಿತಾಂಶ ಲಭಿಸಿದೆ. ನನ್ನ ತಂದೆ ಮಾಚೇನಹಳ್ಳಿಯ ಮಲ್ನಾಡ್ ಇಂಡಸ್ಟ್ರೀಸ್ ಖಾಸಗೀ ಕಂಪನಿಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಜೆ. ಗೌರಿ ಮನೆ ಒಡತಿಯಾಗಿ ನನ್ನ ಶಿಕ್ಷಣಕ್ಕೆ ದಾರಿ ದೀಪವಾಗಿದ್ದಾರೆ ಎಂದರು.
ನನಗೆ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬಿಂಬಿಸಬೇಕೆಂಬ ಮಹಾದಾಸೆಯಿದೆ. ಆದ್ದರಿಂದ ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸಿ ಉನ್ನತ ಶಿಕ್ಷಣ ಪಡೆದು ದೊಡ್ಡ ಸ್ಥಾನಕ್ಕೇರಿ ಪೋಷಕರಿಗೆ ಮತ್ತು ಸಮಾಜಕ್ಕೆ ಮಾದರಿಯಾಗಬೇಕು. ಅಲ್ಲದೆ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಬೇಕೆಂಬ ಹಂಬಲ ಹೊತ್ತಿದ್ದೇನೆ ಎಂದರು.
ಶಾಲೆಯಲ್ಲಿ ಶಿಕ್ಷಕರು ಕಠಿಣವಾದ ವ್ಯಾಸಂಗದ ಶ್ರಮ ಪಡಿಸುತ್ತಿದ್ದರು. ಅದು ನನಗೆ ಕಷ್ಟದ ಜೊತೆ ಇಷ್ಟವು ಆಗಿತ್ತು. ಬೆಳಿಗ್ಗೆ 8.30 ರಿಂದ ಸಂಜೆ 5.15 ರವರೆಗೆ ಶಾಲೆಯಲ್ಲಿ ಶ್ರಮ ಪಡುತ್ತಿದೆ. ಸಂಜೆ 6.30 ಕ್ಕೆ ಮನೆಯಲ್ಲಿ ಓದಲು ಆರಂಭಿಸುತ್ತಿದ್ದೆ. ಮನೆಪಾಠಕ್ಕೆ ಎಲ್ಲೂ ಹೋಗುತ್ತಿರಲಿಲ್ಲ. ನನ್ನ ತಾಯಿ ಟಿವಿಯಲ್ಲಿ ಬರುವ ಸೀರಿಯಲ್‌ಗಳನ್ನು ನೋಡುವುದನ್ನು ಬಿಟ್ಟರೆ ತಂದೆ ಶಬ್ದವಿಲ್ಲದೆ ಸ್ಕ್ರೋಲಿಂಗ್‌ನಲ್ಲಿ ಬರುವ ಸುದ್ದಿಗಳನ್ನು ವೀಕ್ಷಿಸುತ್ತಿದ್ದರು. ವ್ಯಾಸಂಗಕ್ಕೆ ಮನೆಯಲ್ಲಿ ತೊಡಕಾಗುತ್ತಿರಲಿಲ್ಲ. ಪರೀಕ್ಷಯ ಫಲಿತಾಂಶದಲ್ಲಿ 619 ಅಂಕಗಳಿಸುವ ಹಠ ತೊಟ್ಟಿದ್ದೆ. ನಿರೀಕ್ಷೆಯಂತೆ 619 ಅಂಕಗಳು ಬಂದಿದೆ. ಆದರೆ ಸಮಾಜ ವಿಜ್ಞಾನದಲ್ಲಿ 100 ಅಂಕಗಳು ಬರಬೇಕಿತ್ತು. ಆದರೆ 98 ಅಂಕಗಳು ಬಂದಿದೆ. ಇದರಿಂದ ನಿರಾಶೆಯಾಗಿದೆ. ಅದ್ದರಿಂದ ಮರು ಎಣಿಕೆಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು.
ತಂದೆ ಎಂ.ಎಲ್. ಮಹಾದೇವ ಮತ್ತು ತಾಯಿ ಜೆ. ಗೌರಿ ಮಾತನಾಡಿ, ಎಸ್‌ಎವಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಣ ಲಭಿಸುತ್ತಿದೆ. ನಮ್ಮ ಮಗಳ ಫಲಿತಾಂಶ ಖುಷಿ ತಂದಿದೆ. ವಿದ್ಯಾಸಂಸ್ಥೆಗೆ ಮತ್ತು ಎಲ್ಲಾ ಶಿಕ್ಷಕ ವೃಂದದವರಿಗೆ ಅಭಿನಂದಿಸುವುದಾಗಿ ಹೇಳಿ ಮಗಳ ಇಚ್ಚೆಯಂತೆ ವೈದ್ಯರನ್ನಾಗಿಸಲು ಶಿಕ್ಷಣ ಕೊಡಿಸುವುದಾಗಿ ಹೇಳಿದರು.
ಶಾಲಾ ಆಡಳಿತಾಧಿಕಾರಿ ಜಗದೀಶ್ ಮತ್ತು ಪ್ರಾಂಶುಪಾಲ ಡಾ.ಹರಿಣಾಕ್ಷಿ ಮಾಹಿತಿ ನೀಡಿ ಈ ಬಾಲಕಿಯು 7 ನೇ ತರಗತಿಯಿಂದ ಹತ್ತನೆ ತರಗತಿ ವರೆಗೆ ಟಾಪರ್ ವಿದ್ಯಾರ್ಥಿಯಾಗಿ ಶಿಕ್ಷಕರು ಹೇಳಿದಂತೆ ವಿದ್ಯಾರ್ಜನೆ ಪಡೆದಿದ್ದಾಳೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಟಾಪರ್ ಆಗಿ ಹೊರಹೊಮ್ಮಿ ಕೀರ್ತಿ ತಂದಿದ್ದಾರೆ. ಕಳೆದ 3 ವರ್ಷದ ಹಿಂದೆ ಎಂಪಿಎಂ ಆಂಗ್ಲ ಶಾಲೆಯ ಗುಮಾಸ್ತ ದೇವರಾಜ್ ರವರ ಪುತ್ರ ಸ್ಯಾಮುವೇಲ್ ಎಂಬ ವಿದ್ಯಾರ್ಥಿ ಇಂಗ್ಲೀಷ್ ಭಾಷೆಯಲ್ಲಿ 125 ಕ್ಕೆ 125 ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದರು. ಅದರಂತೆ ಪ್ರಸ್ತುತ ಸಾಲಿನಲ್ಲಿ ಎಂ. ವಿದ್ಯಾ 125 ಅಂಕಗಳನ್ನು ಮತ್ತು ಕನ್ನಡ ಭಾಷೆಯಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದು ದಾಖಲೆ ಮುರಿದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post