ಶಿವಮೊಗ್ಗ: ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಚ್ಚರಿಕೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದರು.
ಚುನಾವಣಾ ಪ್ರಚಾರ ಕಾರ್ಯವನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ನೆರವನ್ನು ಒದಗಿಸಲಾಗುವುದು. ನ್ಯಾಯ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಿದೆ. ಪ್ರತಿಯೊಂದು ಚುನಾವಣಾ ಪ್ರಕ್ರಿಯೆ ಮೇಲೆ ಹದ್ದಿನ ಕಣ್ಣಿರಿಸಲಾಗುವುದು. ಇದಕ್ಕಾಗಿ ಹಲವು ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಚುನಾವಣಾ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸುವ ಪೂರ್ವದಲ್ಲಿ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಾಗಿದೆ. ಮತದಾನ ನಡೆಯುವ ಸಮಯದ 48ಗಂಟೆ ಪೂರ್ವದಲ್ಲಿ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಲು ಸಹ ಪೂರ್ವಾನುಮತಿಯನ್ನು ಪಡೆಯಬೇಕಾಗಿದೆ. ಮುದ್ರಣ ಮಾಧ್ಯಮದಲ್ಲಿ ಪ್ರಕಟವಾದ ಜಾಹೀರಾತುಗಳನ್ನು ವೆಬ್‍ಸೈಟ್ ಮುಂತಾದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಕಟಿಸುವ ಪೂರ್ವದಲ್ಲಿ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜಾಹೀರಾತುಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ, ಇನ್ನೊಬ್ಬರ ವೈಯಕ್ತಿಕ ಟೀಕೆ ಮಾಡುವಂತಹ ಅಂಶಗಳು ಇರಬಾರದು. ಜಾಹೀರಾತು ಪ್ರಕಟಣೆ ವಿಷಯದಲ್ಲಿ ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನ್ಯೂ ಸುವಿಧಾ:
ಚುನಾವಣಾ ಪ್ರಚಾರಕ್ಕಾಗಿ ವಾಹನಗಳ ಬಳಕೆ ಇತ್ಯಾದಿಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಆನ್‍ಲೈನ್‍ಗೊಳಿಸಲಾಗಿದ್ದು, ನ್ಯೂ ಸುವಿಧಾ ವೆಬ್ ಪೋರ್ಟಲ್‍ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ನಿಗದಿತ ಅವಧಿಯ ಒಳಗಾಗಿ ಅನುಮತಿಯನ್ನು ನೀಡಲಾಗುವುದು ಎಂದರು.
ವಾಹನಗಳ ಮೂಲಕ ಚುನಾವಣಾ ಪ್ರಚಾರಕ್ಕಾಗಿ ಅನುಮತಿಯನ್ನು ನೀಡಲಾಗುವುದು. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮೈಕ್ ಬಳಸಿ ಪ್ರಚಾರ ಕಾರ್ಯವನ್ನು ಮಾಡಬಹುದಾಗಿದೆ. ಆದರೆ ಚಲಿಸುತ್ತಿರುವ ವಾಹನದಲ್ಲಿ ಧ್ವನಿವರ್ಧಕ ಬಳಸಿ ಪ್ರಚಾರ ಮಾಡುವಂತಿಲ್ಲ ಎಂದರು.
ಅಭ್ಯರ್ಥಿಗಳು ಕನಿಷ್ಟ ಎರಡು ದಿನಗಳಿಗೊಮ್ಮೆ ಚುನಾವಣಾ ವೆಚ್ಚದ ಲೆಕ್ಕಾಚಾರವನ್ನು ನಿಗದಿತ ನಮೂನೆಯಲ್ಲಿ ಒದಗಿಸಬೇಕು. ಗರಿಷ್ಟ 70ಲಕ್ಷ ರೂ. ಚುನಾವಣಾ ವೆಚ್ಚ ನಿಗದಿಪಡಿಸಲಾಗಿದೆ. ಮತದಾನದ ದಿನದಂದು ಪ್ರತಿ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Discussion about this post