ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-29 |ಈ ಕುರಿತು ಲೇಖನ ಬರೆಯ ಹೊರಟಾಗ ನನ್ನಲ್ಲಿ ಮೂಡಿದ ಮೊದಲನೆಯ ಪ್ರಶ್ನೆ – ಪರೀಕ್ಷೆ ಎಂದರೇನು?ಎಂಬುದು. ಪರೀಕ್ಷೆ ಎಂಬ ಪದದ ಅರ್ಥ ಕಲಿಕೆಯನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸುವುದು. ತಮ್ಮ ಏಳಿಗೆಯನ್ನು ತಾವೇ ಗುರುತಿಸಿಕೊಳ್ಳುವ ಒಂದು ವಿಧಾನವೇ ಪರೀಕ್ಷೆ. ಕಲಿತಿರುವ ವಿಷಯವನ್ನು ಏಕಮುಖವಾಗಿ ಪರಿಶೀಲಿಸುವುದು ಪರೀಕ್ಷೆಯಾಗಲಾರದು. ನಮ್ಮ ಪೂರ್ವಜರ ಕಾಲದಲ್ಲಿ ಎಲ್ಲಾ ಆಯಾಮಗಳಿಂದ ಸಿದ್ಧಗೊಳಿಸುವ ರೀತಿಯ ಪರೀಕ್ಷೆಗಳು ನಡೆಯುತ್ತಿದ್ದುದನ್ನು ನಮ್ಮ ಇತಿಹಾಸದ ಪುಟಗಳಿಂದ ತಿಳಿಯ ಬಹುದು. ಉದಾಹರಣೆಗೆ ಬರವಣಿಗೆ, ಅಷ್ಟಾವಧಾನ, ಮೌಖಿಕ, ಪ್ರಾಯೋಗಿಕ,ಅನುಭೂತಿ, ಸೃಜನಶೀಲ ಇತ್ಯಾದಿ. ಆದರೆ ಇಂದಿನ ದಿನಗಳಲ್ಲಿ ಈ ವಿಧಾನಗಳನ್ನು ಕಾಣಲು ಸಾಧ್ಯವಿದೆಯೇ? ಎಂಬ ಪ್ರಶ್ನೆಗೆ ನಮ್ಮ ಉತ್ತರ ಮೌನ ಮಾತ್ರವೇ…. ಪ್ರಶ್ನೆ ಪತ್ರಿಕೆಗಳಲ್ಲಿ ಈ ಮಾನದಂಡಗಳನ್ನು ನಾವು ನೋಡಬಹುದಾದರೂ ಅವುಗಳು ಕೂಡಾ ಗಿಳಿಪಾಠ ಒಪ್ಪಿಸಿದಂತೆ ಇರುತ್ತವೆಯೇ ಹೊರತು ಸ್ವಂತಿಕೆ, ಸಾಮರ್ಥ್ಯಗಳು ಕಾಣ ಸಿಗುವುದು ಬಹಳ ಕಡಿಮೆ ಎಂದರೂ ತಪ್ಪಿಲ್ಲ.
ಇಂದಿನ ‘Exam’ ಎಂಬ ಪದವು ನಮ್ಮ ಪೂರ್ವಜರ ಪರೀಕ್ಷೆಗೆ ಸಮನಾದುದೇ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡು, ಉತ್ತರ ಕಂಡುಕೊಳ್ಳಬೇಕಿದೆ. ನಿಜಕ್ಕೂ ಇಂದಿನ ‘Exam’ ಒಂದು ಪೆಡಂಭೂತವೇ ಆಗಿದೆಯೆಂದರೆ ತಪ್ಪಾಗಲಾರದು. ಹಲವು ಆಯಾಮಗಳಿಂದ ವಿದ್ಯಾರ್ಥಿಯನ್ನು ಒರೆಗೆ ಹಚ್ಚಿ ಅವನನ್ನು ಒಂದು ಚಿನ್ನವಾಗಿ ಖಚಿತಪಡಿಸಬೇಕಾದ ಪರೀಕ್ಷೆ ಇಂದು ಮಕ್ಕಳನ್ನು ಇನ್ನಿಲ್ಲದ ಹೊರೆ, ಆತಂಕಕ್ಕೆ ಈಡು ಮಾಡಿ, ಇಲ್ಲದ ಸಮಸ್ಯೆಗಳನ್ನು ತಂದೊಡ್ಡುತ್ತಿರುವುದು ದು:ಖಕರ ಸಂಗತಿಯಾಗಿದೆ. ಅಧ್ಯಯನ ಎಂಬುದು ನಮಗಾಗಿ, ನಮ್ಮ ಜೀವನಕ್ಕಾಗಿ ಇರಬೇಕಾದುದೇ ವಿನಃ ಅಂಕಗಳ ಏಣಿಯನ್ನು ಏರಲು ಅಲ್ಲ. ಆ ರೀತಿ ಮಾಡಿದ ಅಧ್ಯಯನ ಎಷ್ಟುಕಾಲ ನಮ್ಮಲ್ಲಿ ಉಳಿದೀತು? ಎಂಬುದನ್ನು ಇಂದು ಎಲ್ಲರೂ ವಿಶೇಷವಾಗಿ ಪೋಷಕರು ಆಲೋಚನೆ ಮಾಡಬೇಕಾಗಿದೆ. ಒಂದು ಮಗುವಿನ ಕಲಿಕೆಯನ್ನು, ಭವಿಷ್ಯವನ್ನು ಕೇವಲ ಒಂದು ಹಾಳೆಯಿಂದ ಅಳತೆ ಮಾಡುವುದು ಎಷ್ಟು ಸರಿ? ಈ ಕುರಿತಂತೆ ಶಾಲಾ ಕಾಲೇಜುಗಳಲ್ಲಿ, ಮನೆಯಲ್ಲಿ, ಸಮಾಜದಲ್ಲಿ ಉಂಟಾಗುವ ಹೊರೆಯನ್ನು ತಾಳಲಾಗದೇ ಎಳೆಯ ಮನಸಿನ ಎಳೆಗಳು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಪ್ರವೃತ್ತರಾಗುತ್ತಿರುವುದು ನಿಜಕ್ಕೂ ಒಂದು ರಾಷ್ಟ್ರದ ಬಹು ದೊಡ್ಡ ನಷ್ಟವೇ ಸರಿ.
ಇಂತಹ ನಷ್ಟಕ್ಕಾಗಿ ನಾವು ನಮ್ಮ ಮಕ್ಕಳನ್ನು ಈ ರೀತಿಯ ಒತ್ತಡಕ್ಕೆ ತಳ್ಳಬೇಕೆ? ನಾವೂ ಸಿಲುಕಬೇಕೆ? ಎಂಬುದು ಯೋಚಿಸಲೇಬೇಕಾದ ವಿಷಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ಸಾಮರ್ಥ್ಯವಿರುತ್ತದೆ. ಒಬ್ಬನು ಬರೆಯುವಲ್ಲಿ ನಿಪುಣನಾದರೆ ಮತ್ತೊಬ್ಬ ಕ್ರೀಡೆಯಲ್ಲಿ ಎತ್ತಿದಕೈ ಆಗಿರಬಹುದು, ಇನ್ನೊಬ್ಬ ವ್ಯವಹಾರ ಚತುರನಾಗಿರಬಹುದು, ಮಗದೊಬ್ಬ ಅಧ್ಯಯನದಲ್ಲಿ ಕುಶಾಗ್ರಮತಿಯಾಗಿರಬಹುದು. ಹೀಗೆ ಒಬ್ಬೊಬ್ಬರದ್ದು ಒಂದು ಸಾಮರ್ಥ್ಯ. ಹೀಗಿರುವಾಗ ಎಲ್ಲರಿಗೂ ಒಂದೇ ರೀತಿ ಪರೀಕ್ಷೆ ಹೇಗೆ ನ್ಯಾಯ ಒದಗಿಸೀತು? ಎಲ್ಲ ರೋಗಕ್ಕೂ ಒಂದೇ ಮದ್ದು ಕೆಲಸ ಮಾಡದು ಅಲ್ಲವೇ?.. ಅಂತೆಯೇ ಪರೀಕ್ಷೆಯೇ ಎಲ್ಲಕ್ಕೂ ಅಂತಿಮ ನಿರ್ಧಾರವಾಗಲಾರದು. ಸಾಮರ್ಥ್ಯ ಸಂಪಾದನೆ ಪ್ರಧಾನವಾಗಿದ್ದಾಗ ಮಾತ್ರವೇ ವ್ಯಕ್ತಿಯು ಏಳಿಗೆಯನ್ನು ಕಾಣಬಲ್ಲ. ಆದ್ದರಿಂದ ಸಾಮರ್ಥ್ಯ ಸಂಪಾದನೆ ಬಹು ಮುಖ್ಯವಾಗಿದೆ.
ಸಾಮರ್ಥ್ಯ ಸಂಪಾದನೆಯನ್ನು ಮಾಡುವ ಬಗೆ ಹೇಗೆ? ಎಂದರೆ, ನಿರಂತರ ಕಲಿಕೆ, ಸಂಶೋಧನೆಯೇ, ಪ್ರಯೋಗಗಳೇ ಇದರ ಆಕರಗಳಾಗಿವೆ. ಕಲಿಕೆಯನ್ನು ಸೀಮಿತಗೊಳಿಸಿಕೊಳ್ಳದೇ, ಬೇಸರಿಸಿಕೊಳ್ಳದೇ, ಪಾಲಿಸಬೇಕಿರುವ ಎಲ್ಲ ನಿಯಮಗಳನ್ನೂ ಸರಿಯಾಗಿ ಪಾಲಿಸಿದಲ್ಲಿ ಸಾಮರ್ಥ್ಯ ಸಂಪಾದನೆ ಸಾಧ್ಯ. ಈ ಹಾದಿಯು ನಮ್ಮನ್ನು ಹಾಗೂ ನಮ್ಮ ಸಮಾಜವನ್ನೂ ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುತ್ತದೆ. ಆಗ ಯಾವುದೇ ರೀತಿಯಲ್ಲಿ ನಾವು ಪರೀಕ್ಷೆಗೆ ಒಳಗಾದರೂ ಗೆಲುವು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ನಮ್ಮ ಸಾಮರ್ಥ್ಯ ವೃದ್ಧಿಯು ನಮ್ಮ ಕಣ್ಣಮುಂದಿರುತ್ತದೆ. ಈ ರೀತಿಯಲ್ಲಿ ನಮ್ಮ ಸಮಾಜವನ್ನು ಮುನ್ನಡೆಸುವ ಪ್ರಯತ್ನ ಮಾಡೊಣ. Exam ಎಂಬ ಕುಂಭಿಪಾಕದಲ್ಲಿ ಬೀಳದೇ ನಮ್ಮನ್ನು ನಾವು ಎಚ್ಚರಿಸಿಕೊಂಡು ’ಪರೀಕ್ಷೆಯ’ ಸರಿಯಾದ ಅರ್ಥವನ್ನು ತಿಳಿದು ಸಮರ್ಥರಾಗೋಣ. ಆ ಮೂಲಕ ಸಮಾಜವನ್ನು, ರಾಷ್ಟ್ರವನ್ನು ಸಮರ್ಥವಾಗಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post