ಮುಗ್ದತೆಯ ಪ್ರತಿರೂಪ
ಸರಳತೆಯ ಸಾಕಾರ ಮೂರ್ತಿ
ಸದಾ ನಗುಮೊಗದ ಸಂತ
ರಾಯರ ಕರುಣೆಯ ಕೂಸು
ಮೂಲರಾಮನ ಮಮಕಾರದ ಮಗು
ನಡೆದಾಡುವ ನಮ್ಮ ರಾಯರು ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು.
ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯನ್ನು ಬೆಳಗಿ, ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾ ವೇದಾಂತ ಸಾಮ್ರಾಜ್ಯದ ಅಧಿಪತಿಗಳಾಗಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮಠದ ವೇದಾಂತ ದಿಗ್ವಿಜಯ ವಿದ್ಯಾಸಿಂಹಾಸನವನ್ನು ಸತತ 24 ವರ್ಷಗಳ ಕಾಲ ನಿರಂತರವಾಗಿ ಮುನ್ನಡೆಸಿದ ಮಹಾನುಭಾವರು ನಮ್ಮ ಶ್ರೀ ಸುಶಮೀಂದ್ರತೀರ್ಥರು.
ಇತಿಹಾಸ ಪ್ರಸಿದ್ಧ ಬಿಚ್ಚಾಲೆಯ ಪರಮಪವಿತ್ರ ನೆಲದಿ ಸಂನ್ಯಾಸ ದೀಕ್ಷೆ ಸ್ವೀಕರಿಸಿ,ಶ್ರೀ ಸುಜಯೀಂದ್ರತೀರ್ಥರ ಕರಕಮಲ ಸಂಜಾತರೆನಿಸಿ, ಅನವರತ ಮೂಲರಾಮನ್ ಸೇವೆಯ ಸಲ್ಲಿಸಿ, ಅನುದಿನವೂ ಗುರುರಾಯರ ಸ್ಮರಣೆಯನ್ನು ತಮ್ಮ ಉಸಿರಂತೆ ಚಿಂತಿಸಿ, ಮೂಲರಾಮನ ಗುರುರಾಯರ ಸ್ಮರಣೆಯನ್ನು ಮಾಡುತ್ತಲೇ ಬಂದ ಭಕ್ತರಿಗೆ ಮಂತ್ರಾಕ್ಷತೆಯ ಮೂಲಕ ಅನುಗ್ರಹಿಸಿ, ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಭೂತರಾದವರು ಶ್ರೀಸುಶಮೀಂದ್ರತೀರ್ಥರು.
ಪಂಡಿತ ಪಾಮರ, ಬಡವ ಬಲ್ಲಿದ ಎಂಬ ಭೇದ ಭಾವನೆ ಇಲ್ಲದಲೇ ಎಲ್ಲರನ್ನೂ ಉದ್ಧರಿಸಿದ ಮಹಾ ತಪಸ್ವಿಗಳು ಶ್ರೀ ಸುಶಮೀಂದ್ರತೀರ್ಥರು. ದಿಗ್ವಿಜಯ ಜಯ ಮೂಲರಾಮರತರಾಗಿ ಗುರುರಾಯರ ಕರುಣಾಪಾತ್ರರಾಗಿ, ಮತಾತೀತವಾಗಿ, ಮಠಾತೀತವಾಗಿ, ಎಲ್ಲರಿಗೂ ಪ್ರೀತಿಪಾತ್ರರಾಗಿ ನಡೆದಾಡುವ ಪ್ರತ್ಯಕ್ಷ ರಾಯರಾಗಿ ಕಂಗೊಳಿಸಿದವ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಪಾದಪದ್ಮಗಳಿಗೆ ನಮೋನ್ನಮಃ
Discussion about this post