ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಹಾಗೂ ಬೇಡಿಕೆಯಿದ್ದ ಮಹತ್ವದ ಮೇಕೆದಾಟು ಯೋಜನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಈ ಮೂಲಕ ತಮಿಳುನಾಡಿಗೆ ತೀವ್ರ ಹಿನ್ನಡೆಯಾಗಿದೆ.
ಇನ್ನು ಈ ಕುರಿತಂತೆ ಸಮಗ್ರ ಯೋಜನೆಯ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿದೆ.
ಏನಿದು ಮೇಕೆದಾಟು ಯೋಜನೆ?
ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರಲ್ಲೇ ಚಿಗುರೊಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು.
1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು.
2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗಕ್ಕೂ ಮನವಿ ಮಾಡಿತ್ತು.
ಆದರೆ, ತಮಿಳುನಾಡಿನ ಆಗಿನ ಸಿಎಂ ದಿವಂಗತ ಜಯಲಲಿತಾ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಒಪ್ಪಿಗೆ ಸಿಕ್ಕಿರಲಿಲ್ಲ.
ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಎಚ್.ಡಿ. ಕುಮಾರಸ್ವಾಮಿ ಅವರಿಂದಾಗಿ ಮತ್ತೆ ಈ ಯೋಜನೆ ಮತ್ತೆ ಮುಖ್ಯವಾಹಿನಿಗೆ ಬಂದಿತು. ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತರೆ ಯೋಜನೆ ಆರಂಭಿಸುವುದಾಗಿ ಬಜೆಟ್ನಲ್ಲೇ ಘೋಷಿಸಿದ್ದರು. ಇದರಂತೆ ಯೋಜನೆಯ ಸಾಧ್ಯತೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ ಮಾಡಿತ್ತು.
Discussion about this post